ಪಶ್ಚಿಮ ಏಷ್ಯಾದಲ್ಲಿ ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ವಿರುದ್ಧ ನಡೆಸುತ್ತಿರುವ ‘ಆಪರೇಷನ್ ಎಪಿಕ್ ಫ್ಯೂರಿ’ ಯುದ್ಧವು ಭೀಕರ ಸ್ವರೂಪ ಪಡೆದುಕೊಂಡಿದೆ. ಇಡೀ ಜಗತ್ತು ಈ ಯುದ್ಧದ ಅನಾಹುತಗಳ ಬಗ್ಗೆ ಆತಂಕ ವ್ಯಕ್ತಪಡಿಸುತ್ತಿದ್ದರೆ, ಇತ್ತ ಸೋಷಿಯಲ್ ಮೀಡಿಯಾದಲ್ಲಿ ಮಾತ್ರ ವಿಚಿತ್ರವಾದ ಹಾಸ್ಯ ಪ್ರಸಂಗಗಳು ಮತ್ತು ಮೀಮ್‌ಗಳ ಸದ್ದು ಜೋರಾಗಿದೆ.
ವಿಶೇಷವಾಗಿ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅವರನ್ನು ಗುರಿಯಾಗಿಸಿಕೊಂಡು ಹರಿದುಬರುತ್ತಿರುವ ಮೀಮ್‌ಗಳು ಸಖತ್ ವೈರಲ್ ಆಗುತ್ತಿವೆ. “ಜಗತ್ತಿನಾದ್ಯಂತ ಎಲ್ಲರೂ ಬಾಂಬ್ ಹಾಕುತ್ತಿದ್ದಾರೆ, ಆದರೆ ನನ್ನನ್ನು ಮಾತ್ರ ಯಾರೂ ಯುದ್ಧಕ್ಕೆ ಕರೆಯುತ್ತಿಲ್ಲವಲ್ಲ” ಎಂದು ಕಿಮ್ ಬೇಸರಗೊಂಡಿರುವಂತೆ ಬಿಂಬಿಸಿರುವ ಮೀಮ್‌ಗಳು ನೆಟ್ಟಿಗರ ಗಮನ ಸೆಳೆಯುತ್ತಿವೆ. ಸದಾ ಮಿಸೈಲ್ ಪರೀಕ್ಷೆ ಮಾಡುವ ಕಿಮ್, ಈ ಮಹಾಯುದ್ಧದಲ್ಲಿ ಅಪ್ರಸ್ತುತರಾಗಿರುವುದನ್ನು ಕಂಡು ನೆಟ್ಟಿಗರು ಕಾಲೆಳೆದಿದ್ದಾರೆ.
ಇನ್ನು ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಮಿಲಿಟರಿ ಸಾಮರ್ಥ್ಯದ ಬಗ್ಗೆಯೂ ವ್ಯಂಗ್ಯದ ಪೋಸ್ಟ್‌ಗಳು ಹರಿದಾಡುತ್ತಿವೆ. “ಇರಾನ್ ನೆರವಿಗೆ ಬಾಂಗ್ಲಾದೇಶ ತನ್ನ ಹೈಪರ್ ಸೋನಿಕ್ ವಿಮಾನಗಳನ್ನು ಕಳುಹಿಸಲಿದೆ” ಎಂಬ ಶೀರ್ಷಿಕೆಯಡಿ ಹಳೆಯ ಮತ್ತು ಮುರಿದುಬಿದ್ದ ವಿಮಾನಗಳ ಫೋಟೋಗಳನ್ನು ಹಾಕಿ ವ್ಯಂಗ್ಯವಾಡಲಾಗುತ್ತಿದೆ. ಇರಾನ್ ರಕ್ಷಣೆಗೆ ಚೀನಾ ನಿರ್ಮಿತ ವಾಯು ರಕ್ಷಣಾ ವ್ಯವಸ್ಥೆ ಸಂಪೂರ್ಣ ವಿಫಲವಾಗಿರುವ ವರದಿಗಳ ಬೆನ್ನಲ್ಲೇ, ಪಾಕಿಸ್ತಾನ ತನ್ನ ಅತ್ಯಾಧುನಿಕ ವಿಮಾನಗಳನ್ನು ಕಳುಹಿಸಿದೆ ಎಂಬ ನಕಲಿ ಬ್ರೇಕಿಂಗ್ ನ್ಯೂಸ್‌ಗಳ ಮೂಲಕ ನೆಟ್ಟಿಗರು ಹಾಸ್ಯದ ಹೊಳೆ ಹರಿಸುತ್ತಿದ್ದಾರೆ.
ಒಂದೆಡೆ ಕ್ಷಿಪಣಿ ದಾಳಿ ಮತ್ತು ವಾಯುಪಡೆಗಳ ಆರ್ಭಟದಿಂದ ಇರಾನ್ ತತ್ತರಿಸುತ್ತಿದ್ದರೆ, ಇತ್ತ ಅಂತರ್ಜಾಲದಲ್ಲಿ ಈ ಯುದ್ಧದ ಗಾಂಭೀರ್ಯವನ್ನೇ ಬದಲಿಸುವಂತಹ ವಿಲಕ್ಷಣ ಮೀಮ್‌ಗಳು ಲಕ್ಷಾಂತರ ಬಾರಿ ಶೇರ್ ಆಗುತ್ತಿವೆ. ಗಂಭೀರ ಪರಿಸ್ಥಿತಿಯ ನಡುವೆಯೂ ಇಂತಹ ಹಾಸ್ಯ ಚಟುವಟಿಕೆಗಳು ಸೋಷಿಯಲ್ ಮೀಡಿಯಾದಲ್ಲಿ ಜನಪ್ರಿಯತೆ ಪಡೆಯುತ್ತಿರುವುದು ಈಗ ಹೊಸ ಚರ್ಚೆಗೆ ಕಾರಣವಾಗಿದೆ.

