ಮಧ್ಯಪ್ರದೇಶದ ನರಸಿಂಗ್ಪುರ ಜಿಲ್ಲೆಯಲ್ಲಿ ಅಮಾನವೀಯ ಸಾಮೂಹಿಕ ಅತ್ಯಾಚಾರ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ದೇಶವನ್ನೇ ಬೆಚ್ಚಿಬೀಳಿಸಿದೆ. ಡಿಸೆಂಬರ್ 29 ರಂದು ಮುಂಗ್ವಾನಿ ಪ್ರದೇಶದ ಮಾಛಾ ನದಿ ಸಮೀಪದ ಅರಣ್ಯ ಪ್ರದೇಶದಲ್ಲಿ ಈ ಘಟನೆ ನಡೆದಿದೆ.
ಏನಿದು ಘಟನೆ
16 ವರ್ಷದ ಬಾಲಕಿ ತನ್ನ ಸ್ನೇಹಿತನೊಂದಿಗೆ ಮೋಟಾರ್ ಸೈಕಲ್ನಲ್ಲಿ ದೇವಸ್ಥಾನಕ್ಕೆ ಹೋಗುತ್ತಿದ್ದಾಗ, ಅಪ್ರಾಪ್ತ ಬಾಲಕ ಸೇರಿ ಎಂಟು ಜನರ ಗುಂಪು ಅವರನ್ನು ತಡೆದಿದೆ. ಆರೋಪಿಗಳು ಅವರನ್ನು ಬೆದರಿಸಿ, ಬಾಲಕಿಯನ್ನು ಬಲವಂತವಾಗಿ ಸ್ಕೂಟರ್ ಮೇಲೆ ಕೂರಿಸಿಕೊಂಡು ಹತ್ತಿರದ ಕಾಡಿಗೆ ಕರೆದೊಯ್ದಿದ್ದಾರೆ. ಬಾಲಕಿಯ ಸ್ನೇಹಿತನಿಗೂ ಬೆದರಿಕೆ ಹಾಕಿ ಕಾಡಿಗೆ ಬರುವಂತೆ ಒತ್ತಾಯಿಸಿದ್ದಾರೆ.
ಕಾಡಿನಲ್ಲಿ ಮೂವರು ಆರೋಪಿಗಳು ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾರೆ, ಉಳಿದವರು ಈ ಕೃತ್ಯವನ್ನು ನೋಡುತ್ತಾ ನಿಂತಿದ್ದರು. ಅಷ್ಟೇ ಅಲ್ಲದೆ, ಆರೋಪಿಗಳು ಈ ಘೋರ ಕೃತ್ಯವನ್ನು ತಮ್ಮ ಮೊಬೈಲ್ ಫೋನ್ಗಳಲ್ಲಿ ವಿಡಿಯೋ ಮಾಡಿಕೊಂಡಿದ್ದಾರೆ. ಘಟನೆಯ ನಂತರ, ಈ ವಿಷಯವನ್ನು ಯಾರಿಗಾದರೂ ತಿಳಿಸಿದರೆ ಭೀಕರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಸಂತ್ರಸ್ತೆ ಮತ್ತು ಆಕೆಯ ಸ್ನೇಹಿತನಿಗೆ ಜೀವ ಬೆದರಿಕೆ ಹಾಕಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್
ಭಯ ಮತ್ತು ಆಘಾತದಿಂದಾಗಿ ಬಾಲಕಿ ಸುಮಾರು ಒಂದು ತಿಂಗಳ ಕಾಲ ಮೌನವಾಗಿದ್ದಳು. ಆದರೆ, ಇತ್ತೀಚೆಗೆ ಆರೋಪಿಗಳು ಅತ್ಯಾಚಾರದ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದಾಗ ವಿಷಯ ಬಯಲಿಗೆ ಬಂದಿದೆ. ವಿಡಿಯೋ ವೈರಲ್ ಆದ ನಂತರ, ಬಾಲಕಿ ತನ್ನ ಸಂಬಂಧಿಕರಿಗೆ ವಿಷಯ ತಿಳಿಸಿ, ಅವರ ಬೆಂಬಲದೊಂದಿಗೆ ಜನವರಿ 29 ರಂದು ಪೊಲೀಸ್ ದೂರು ದಾಖಲಿಸಿದ್ದಾಳೆ.
7 ಆರೋಪಿಗಳು ಅರೆಸ್ಟ್
ದೂರು ದಾಖಲಾದ ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಏಳು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಅನುರಾಗ್ ದುಬೆ, ಗಣೇಶ್ ಠಾಕೂರ್, ಪಂಚು ಠಾಕೂರ್, ರಾಹುಲ್ ಠಾಕೂರ್, ಜೈಸಿಂಗ್ ಠಾಕೂರ್, ಗೋಲು ಮೆಹ್ರಾ, ಬಬ್ಲು ಅಲಿಯಾಸ್ ರವಿ ಠಾಕೂರ್ ಎಂದು ಗುರುತಿಸಲಾಗಿದೆ.
ಬಂಧಿತ ಏಳು ಮಂದಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪ್ರಕರಣದಲ್ಲಿ ಭಾಗಿಯಾಗಿರುವ ಮತ್ತೊಬ್ಬ ಆರೋಪಿ ಅಪ್ರಾಪ್ತ ವಯಸ್ಕನಾಗಿದ್ದು, ಆತನ ವಿರುದ್ಧ ಬಾಲಾಪರಾಧ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮುಂಗ್ವಾನಿ ಪೊಲೀಸ್ ಠಾಣಾ ಉಸ್ತುವಾರಿ ಅನಿಲ್ ತಿವಾರಿ ಅವರು ತನಿಖೆ ಮುಂದುವರಿದಿದ್ದು, ಎಲ್ಲಾ ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ತುರ್ತು ಸಹಾಯವಾಣಿ ಸಂಖ್ಯೆಗಳು (ಭಾರತದಲ್ಲಿ)
ಯಾವುದೇ ಸಂಕಷ್ಟದ ಸಮಯದಲ್ಲಿ ಅಥವಾ ದೌರ್ಜನ್ಯದ ಸಂದರ್ಭದಲ್ಲಿ ಈ ಕೆಳಗಿನ ಸಂಖ್ಯೆಗಳಿಗೆ ಕರೆ ಮಾಡಬಹುದು
| ಸಹಾಯವಾಣಿ | ಸಂಖ್ಯೆ | ವಿವರ |
| ಪೊಲೀಸ್ ತುರ್ತು ಸೇವೆ | 112 | ಭಾರತದಾದ್ಯಂತ ಏಕೀಕೃತ ತುರ್ತು ಸಂಖ್ಯೆ. |
| ಮಹಿಳಾ ಸಹಾಯವಾಣಿ | 1091 | ಸಂಕಷ್ಟದಲ್ಲಿರುವ ಮಹಿಳೆಯರಿಗಾಗಿ ಮೀಸಲಾದ ಸಂಖ್ಯೆ. |
| ಮಕ್ಕಳ ಸಹಾಯವಾಣಿ | 1098 | (Childline) ಮಕ್ಕಳ ಮೇಲಿನ ದೌರ್ಜನ್ಯ ತಡೆಯಲು. |
| ಸೈಬರ್ ಕ್ರೈಮ್ ಹೆಲ್ಪ್ಲೈನ್ | 1930 | ಆಕ್ಷೇಪಾರ್ಹ ವಿಡಿಯೋ/ಫೋಟೋ ವೈರಲ್ ಆದಲ್ಲಿ ದೂರು ನೀಡಲು. |

