ಉತ್ತರಾಖಂಡದ ಪ್ರಸಿದ್ಧ ಪ್ರವಾಸಿ ತಾಣ ಋಷಿಕೇಶದಲ್ಲಿ ಸಾರ್ವಜನಿಕರೇ ಕಾನೂನನ್ನು ಕೈಗೆತ್ತಿಕೊಂಡಿರುವ ಆಘಾತಕಾರಿ ಘಟನೆಯೊಂದು ನಡೆದಿದೆ. ಅಪ್ರಾಪ್ತ ಬಾಲಕಿ ಮತ್ತು ಮಹಿಳೆಗೆ ಕಿರುಕುಳ ನೀಡಿದ್ದಾರೆ ಎಂಬ ಆರೋಪದ ಮೇಲೆ ಹರಿಯಾಣದ ಪ್ರವಾಸಿಗರನ್ನು ಸಾರ್ವಜನಿಕವಾಗಿ ಬೆತ್ತಲೆಗೊಳಿಸಿ, ಅಮಾನುಷವಾಗಿ ಥಳಿಸಿರುವ ಘಟನೆ ಹರಿದ್ವಾರ ರಸ್ತೆಯ ಕಾಲೆ-ಕಿ-ಧಾಲ್ ಪ್ರದೇಶದಲ್ಲಿ ನಡೆದಿದೆ.
ಹರಿಯಾಣದ ಕೈಥಾಲ್ ನಿವಾಸಿ ಸತ್ವೀರ್ ಸಿಂಗ್ ಎಂಬುವರು ನೀಡಿದ ದೂರಿನ ಪ್ರಕಾರ, ಅವರು ತಮ್ಮ ಇಬ್ಬರು ಸ್ನೇಹಿತರೊಂದಿಗೆ ಮೇ 20 ರಂದು ಕಾರಿನಲ್ಲಿ ಋಷಿಕೇಶಕ್ಕೆ ಪ್ರವಾಸ ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಕಾಲೆ-ಕಿ-ಧಾಲ್ ಬಳಿ ಸ್ಕೂಟರ್ನಲ್ಲಿ ಮಗುವಿನೊಂದಿಗೆ ಹೋಗುತ್ತಿದ್ದ ಮಹಿಳೆಯೊಬ್ಬರು ಇವರ ಕಾರನ್ನು ತಡೆದು, ತಮಗೆ ಸನ್ನೆಗಳ ಮೂಲಕ ಕಿರುಕುಳ ನೀಡಲಾಗಿದೆ ಎಂದು ಆರೋಪಿಸಿದ್ದಾರೆ. ಈ ವೇಳೆ ಪ್ರವಾಸಿಗರು ತಾವು ಕೇವಲ ದಾರಿ ಕೇಳಲು ಯತ್ನಿಸಿದ್ದಾಗಿ ಮತ್ತು ಯಾವುದೇ ತಪ್ಪು ಉದ್ದೇಶ ಹೊಂದಿರಲಿಲ್ಲ ಎಂದು ಸ್ಪಷ್ಟನೆ ನೀಡಲು ಮುಂದಾಗಿದ್ದಾರೆ.
ಆದರೆ, ಅಷ್ಟರಲ್ಲೇ ಸ್ಥಳದಲ್ಲಿ ಜಮಾಯಿಸಿದ ಸ್ಥಳೀಯರು ಯಾವುದೇ ಸತ್ಯಾಸತ್ಯತೆ ಪರಿಶೀಲಿಸದೆ ಪ್ರವಾಸಿಗರ ಮೇಲೆ ಮುಗಿಬಿದ್ದಿದ್ದಾರೆ. ಇದು ಕೇವಲ ತಪ್ಪು ತಿಳುವಳಿಕೆ ಇರಬಹುದು ಎಂದು ಸ್ವತಃ ಆ ಮಹಿಳೆಯೇ ಜನರನ್ನು ತಡೆಯಲು ಯತ್ನಿಸಿದರೂ ಉದ್ರಿಕ್ತ ಗುಂಪು ಕೇಳುವ ಸ್ಥಿತಿಯಲ್ಲಿರಲಿಲ್ಲ. ಪ್ರವಾಸಿಗರ ಬಟ್ಟೆಗಳನ್ನು ಹರಿದು ಹಾಕಿ, ಸಾರ್ವಜನಿಕವಾಗಿ ಬೆತ್ತಲೆಗೊಳಿಸಿ ರಸ್ತೆಯುದ್ದಕ್ಕೂ ಅಮಾನವೀಯವಾಗಿ ಥಳಿಸಿದ್ದಾರೆ. ಯುವಕನೊಬ್ಬ ಪ್ರಾಣ ಉಳಿಸಿಕೊಳ್ಳಲು ಬೆತ್ತಲೆಯಾಗಿಯೇ ಓಡುತ್ತಿರುವ ಮತ್ತು ಗುಂಪು ಆತನನ್ನು ಬೆನ್ನಟ್ಟಿ ಹೊಡೆಯುತ್ತಿರುವ ದೃಶ್ಯಗಳ 30 ಸೆಕೆಂಡ್ಗಳ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇಷ್ಟಕ್ಕೇ ನಿಲ್ಲದ ಉದ್ರಿಕ್ತ ಗುಂಪು, ಪ್ರವಾಸಿಗರು ಬಂದಿದ್ದ ಕಾರನ್ನು ಸಂಪೂರ್ಣವಾಗಿ ಜಖಂಗೊಳಿಸಿದೆ. ಅಲ್ಲದೆ ಸಂತ್ರಸ್ತರಿಂದ ಎರಡು ಮೊಬೈಲ್ ಫೋನ್ಗಳನ್ನು ಕಸಿದುಕೊಂಡು, ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಕೊನೆಗೆ ಸ್ಥಳೀಯ ಕೆಲವರು ಮಧ್ಯಪ್ರವೇಶಿಸಿ ಯುವಕರನ್ನು ಗುಂಪಿನಿಂದ ರಕ್ಷಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಋಷಿಕೇಶ ಕೊತ್ವಾಲಿ ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದು, ಅಶೋಕ್ ಥಾಪಾ, ಅಮಿತ್, ನರೇಶ್, ಆಯುಷ್ ಸೇರಿದಂತೆ ಹಲವು ಅಪರಿಚಿತರ ವಿರುದ್ಧ ಕೊಲೆ ಯತ್ನ, ಮಾರಣಾಂತಿಕ ಹಲ್ಲೆ, ಕಾನೂನುಬಾಹಿರವಾಗಿ ಗುಂಪುಗೂಡುವುದು ಮತ್ತು ಸಾರ್ವಜನಿಕ ಆಸ್ತಿ ನಾಶದಂತಹ ಗಂಭೀರ ಸೆಕ್ಷನ್ಗಳ ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ. ಮತ್ತೊಂದೆಡೆ, ಕಿರುಕುಳದ ಆರೋಪಕ್ಕೆ ಸಂಬಂಧಿಸಿದಂತೆ ಮಹಿಳೆಯ ಕಡೆಯಿಂದ ಇದುವರೆಗೆ ಯಾವುದೇ ಅಧಿಕೃತ ದೂರು ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

