ಮಂಡ್ಯ: ತಮಿಳುನಾಡಿಗೆ ಮತ್ತೆ ಕಾವೇರಿ ನೀರು ಹರಿಸುವಂತೆ CWRC ಹಾಗೂ CWMA ನೀಡಿರುವ ಆದೇಶ ಖಂಡಿಸಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡಪರ ಸಂಘಟನೆ ಹಾಗೂ ರೈತ ಮುಖಂಡರು ಕೆ.ಆರ್.ಎಸ್ ಡ್ಯಾಂಗೆ ಮುತ್ತಿಗೆ ಹಾಕಲು ಯತ್ನಿಸಿದ್ದು, ಈ ವೇಳೆ ವಾಅಟಾಳ್ ನಾಗರಾಜ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ವಾಟಾಳ್ ನಾಗರಾಜ್ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ಬೆಂಗಳೂರಿನಿಮ್ದ ಕನ್ನಂಬಾಡಿವರೆಗೂ ರ್ಯಾಲಿ ನಡೆಸಿದ್ದು, ಬಳಿಕ ಕೆ.ಆರ್.ಎಸ್ ಡ್ಯಾಂ ಮುತ್ತಿಗೆಗೆ ಮುಂದಾಗಿದ್ದಾರೆ. ಇದಕ್ಕೂ ಮುನ್ನ ಮಾತನಾಡಿದ ವಾಟಾಳ್ ನಾಗರಾಜ್, ಕರ್ನಾಟಕದಲ್ಲಿ ನೀರಿನ ಅಭಾವದಿಂದ ರೈತರು ಸಂಕಷ್ಟಕ್ಕೀಡಾಗಿದ್ದರೂ CWRC ಹಾಗೂ CWMA ತಮಿಳುನಾಡಿಗೆ ಕಾವೇರಿ ನೀರು ಹರಿಸಲು ಆದೇಶ ನೀಡಿರುವುದು ಖಂಡನೀಯ. ಪ್ರಾಧಿಕಾರಗಳಿಗೆ ಧಿಕ್ಕಾರ ಎಂದು ಘೋಷಣೆ ಕೂಗಿದರು.
ರಾಜ್ಯ ಸರ್ಕಾರ ಈಗಾಗಲೇ ತಮಿಳುನಾಡಿಗೆ ಸಾಕಷ್ಟು ನೀರನ್ನು ಬಿಡುಗಡೆ ಮಾಡಿದೆ.ಇದೀಗ ಕಾವೇರಿ ನೀರು ನಿರ್ವಹಣಾ ಸಮಿತಿಯು ಮತ್ತೆ 9,000 ಕ್ಯೂಸೆಕ್ ನೀರನ್ನು 15 ದಿನಗಳ ಕಾಲ ಬಿಡುವಂತೆ ಆದೇಶಿಸಿರುವುದು ರಾಜ್ಯಕ್ಕೆ ಬಹಳ ಹೊರೆಯಾಗಿದೆ. ಈ ನಿರ್ಧಾರದಿಂದ ಬೆಂಗಳೂರಿನಲ್ಲಿ ಭವಿಷ್ಯದಲ್ಲಿ ತೀವ್ರ ಕುಡಿಯುವ ನೀರಿನ ಸಮಸ್ಯೆ ಎದುರಾಗಲಿದೆ. ರಾಜ್ಯದ ಜನತೆ ಎಚ್ಚೆತ್ತುಕೊಳ್ಳಬೇಕು ಎಂದರು.
ಅಲ್ಲದೇ ಇತ್ತೀಚೆಗೆ ನಡೆದ ಅಸೆಂಬ್ಲಿ ಅಧಿವೇಶನದಲ್ಲಿ ಕಾವೇರಿ ನೀರು ಹಂಚಿಕೆ ಬಗ್ಗೆ ಗಂಭೀರ ಚರ್ಚೆ ನಡೆದಿಲ್ಲ. ಭ್ರಷ್ಟಾಚಾರದ ಆರೋಪಗಳು ಮತ್ತು ರಾಜಕೀಯ ಜಟಾಪಟಿಗಳ ನಡುವೆ ಕಾವೇರಿ ನೀರಿನಂತಹ ಪ್ರಮುಖ ವಿಷಯವನ್ನು ಕಡೆಗಣಿಸಲಾಗಿದೆ ಎಂದು ಆಕ್ರೋಶಗೊಂಡರು. ಬೆಂಗಳೂರು ಶಾಸಕರಿಗೆ ಮಾನ ಮರ್ಯಾದೆ ಇದ್ದರೆ, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು. ಶಾಸಕರು ಹಾಗೂ ಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ಧಿಕ್ಕಾರ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಬಳಿಕ ಕೆ.ಆರ್.ಎಸ್ ಮುತ್ತಿಗೆ ಹಾಕಲು ವಾಟಾಳ್ ನಾಗರಾಜ್ ಹಾಗೂ ವಿವಿಧ ಸಂಘಟನೆಗಳು ಮುಂದಾಗುತ್ತಿದ್ದಂತೆ ಪೊಲೀಸರು ವಾಟಾಳ್ ನಾಗರಾಜ್ ಅವರನ್ನು ವಶಕ್ಕೆ ಪಡೆದಿದ್ದಾರೆ.

