ಬೆಂಗಳೂರು: ರಾಜ್ಯ ಸರ್ಕಾರಿ ಕಾರ್ಯಕ್ರಮಗಳಲ್ಲಿ ‘ವಂದೇ ಮಾತರಂ’ ಗೀತೆಯ ಮೊದಲ 2 ಚರಣಗಳನ್ನು ಮಾತ್ರ ಹಾಡಲು ತೀರ್ಮಾನಿಸಿ ಹೊರಡಿಸಿರುವ ರಾಜ್ಯ ಸರ್ಕಾರದ ಆದೇಶವನ್ನು ಪ್ರಶ್ನಿಸಿ ವಕೀಲ ಗಿರೀಶ್ ಭಾರದ್ವಾಜ್ ಹೈಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಂಡಿರುವ ಹೈಕೋರ್ಟ್ ಪೀಠ ವಿಚಾರಣೆಯನ್ನು ಮುಂದೂಡಿದೆ.
ನ್ಯಾಯಮೂರ್ತಿ ಅನು ಶಿವರಾಮನ್ ಹಾಗೂ ನ್ಯಾಯಮೂರ್ತಿ ಟಿ.ಪಿ. ವಿವೇಕಾನಂದ ಅವರಿದ್ದ ವಿಭಾಗೀಯ ಪೀಠದಲ್ಲಿ ಈ ಅರ್ಜಿಯ ವಿಚಾರಣೆ ನಡೆಯಿತು. ಪ್ರತಿಯೊಂದು ರಾಜ್ಯ ಸರ್ಕಾರಗಳು ತಮ್ಮದೇ ಆದ ಪ್ರತ್ಯೇಕ ನಿರ್ಧಾರಗಳನ್ನು ತೆಗೆದುಕೊಳ್ಳಲು ಅವಕಾಶವಿಲ್ಲ ಎಂದು ಹೈಕೋರ್ಟ್ನಲ್ಲಿ ವಾದಿಸಲಾಗಿದೆ.
ಸುಪ್ರೀಂ ಕೋರ್ಟ್, ರಾಷ್ಟ್ರೀಯ ಹಾಡುಗಳು ಕಡ್ಡಯಾವಲ್ಲ ಎಂದು ಈ ಹಿಂದೆ ಆದೇಶ ನೀಡಿದೆ. ಹಾಗಾಗಿ ವಂದೇ ಮಾತರಂ ಸಂಪೂರ್ಣ ಗೀತೆ ಹಾಡಬೇಕು ಎಂಬ ಕಡ್ಡಾಯವೇನೂ ಇಲ್ಲ. ಸುಪ್ರೀಂ ಕೋರ್ಟ್ ನಲ್ಲಿಯೂ ಇದೇ ವಿಷಯ ವಿಚಾರಣೆಯಲ್ಲಿದೆ. ಇಂದಿನ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಎರಡು ವಾರಗಳ ಕಾಲ ಮುಂದೂಡಿದೆ. ಅಲ್ಲಿಯೂ ವಂದೇ ಮಾತರಂ ಬಗೆಗಿನ ಕೇಂದ್ರದ ಆದೇಶವನ್ನು ಪ್ರಶ್ನಿಸಲಾಗಿದೆ. ಹೀಗಾಗಿ ವಿಚಾರಣೆಯನ್ನು ಮೂರು ವಾರಗಳ ಕಾಲ ಮುಂದೂಡುವಂತೆ ಎಜಿ ಶಶಿಕಿರಣ ಶೆಟ್ಟಿ ಮನವಿ ಮಾಡಿದರು.
ಎಜಿ ಅವರ ವಾದವನ್ನು ಮನ್ನಿಸಿದ ಹೈಕೋರ್ಟ್ ವಿಚಾರಣೆಯನ್ನು ಮೂರು ವಾರಗಳ ಕಾಲ ಮುಂದೂಡಿದೆ.

