ಬೆಂಗಳೂರು: ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮದಲ್ಲಿ ವಂದೇ ಮಾತರಂ ಗೀತೆಯನ್ನು ಅರ್ಧದಲ್ಲೇ ನಿಲ್ಲಿಸಲಾಗಿದೆ ಎಂದು ಆರೋಪಿಸಿ, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಹಾಗೂ ಕಾಂಗ್ರೆಸ್ ಪಕ್ಷದ ವಿರುದ್ಧ ಕೇಂದ್ರ ಗೃಹ ಸಚಿವ ಅಮಿತ್ ಶಾ ತೀವ್ರ ವಾಗ್ದಾಳಿ ನಡೆಸಿದ್ದಾರೆ. ದೆಹಲಿಯ ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ (ಇಂದಿರಾ ಭವನ) ನಡೆದ 80ನೇ ಸ್ವಾತಂತ್ರ್ಯ ದಿನಾಚರಣೆಯ ವಿಡಿಯೋ ಒಂದನ್ನು ಉಲ್ಲೇಖಿಸಿ ಬಿಜೆಪಿ ಈ ಆರೋಪ ಮಾಡಿದೆ.
ರಾಜಸ್ಥಾನದ ಚಿತ್ತೋರ್ಗಢದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅಮಿತ್ ಶಾ, “ಸೋನಿಯಾ ಗಾಂಧಿ ಅವರು ರಾಷ್ಟ್ರೀಯ ಗೀತೆಗೆ ಅಗೌರವ ತೋರುವ ಮೂಲಕ ದೊಡ್ಡ ಪಾಪ ಎಸಗಿದ್ದಾರೆ. ಈ ಕೃತ್ಯಕ್ಕಾಗಿ ಕಾಂಗ್ರೆಸ್ ಪಕ್ಷವು ದೇಶದ ಜನರ ಕ್ಷಮೆ ಕೇಳಬೇಕು,” ಎಂದು ಆಗ್ರಹಿಸಿದ್ದಾರೆ.
“ವೋಟ್ ಬ್ಯಾಂಕ್ಗಾಗಿ ರಾಷ್ಟ್ರೀಯ ಗೀತೆಗೆ ಅವಮಾನ” – ಅಮಿತ್ ಶಾ ಗುಡುಗು ಸ್ವಾತಂತ್ರ್ಯ ದಿನಾಚರಣೆಯಂದು ಕಾಂಗ್ರೆಸ್ ನಡೆದುಕೊಂಡ ರೀತಿಯನ್ನು ಕಟುವಾಗಿ ವಿಮರ್ಶಿಸಿದ ಗೃಹ ಸಚಿವರು
ಎಲ್ಲರೂ ವಂದೇ ಮಾತರಂ ಗೀತೆಯನ್ನು ಹಾಡುತ್ತಿದ್ದಾಗ ಸೋನಿಯಾ ಗಾಂಧಿ ಅವರು ಅದನ್ನು ಮಧ್ಯದಲ್ಲೇ ನಿಲ್ಲಿಸುವಂತೆ ಕಾಂಗ್ರೆಸ್ ಅಧ್ಯಕ್ಷರಿಗೆ ಸೂಚಿಸಿದರು. ಇದನ್ನು ಇಡೀ ದೇಶ ಟಿವಿಯಲ್ಲಿ ನೋಡಿದೆ. ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಕಾಂಗ್ರೆಸ್ ನಾಯಕರು ರಾಷ್ಟ್ರೀಯ ಗೀತೆಯ ಹಿಂದಿರುವ ತ್ಯಾಗ ಮತ್ತು ಬಲಿದಾನಗಳನ್ನು ಮರೆತಿದ್ದಾರೆ, ಎಂದು ವಾಗ್ದಾಳಿ ನಡೆಸಿದರು.
https://x.com/BJP4India/status/2088921206338793515
ಸಾವಿರಾರು ದೇಶಪ್ರೇಮಿಗಳು ಗಲ್ಲುಗಂಬ ಏರಿ, ಸೆರೆವಾಸ ಅನುಭವಿಸಿ ತಂದಿತ್ತ ಸ್ವಾತಂತ್ರ್ಯದ ಸಂಕೇತವಾದ ಗೀತೆಗೆ ಅವಮಾನ ಮಾಡಲಾಗಿದೆ. ಕಾಂಗ್ರೆಸ್ಗೆ ಕನಿಷ್ಠ ನಾಚಿಕೆ ಇದ್ದರೆ ಬಂಕಿಮ ಚಂದ್ರ ಚಟರ್ಜಿ ಹಾಗೂ ದೇಶದ ಜನರಲ್ಲಿ ಬಹಿರಂಗವಾಗಿ ಕ್ಷಮೆಯಾಚಿಸಬೇಕು ಎಂದು ಶಾ ಒತ್ತಾಯಿಸಿದರು. ಅಲ್ಲದೆ, ಕೆಂಪುಕೋಟೆಯಲ್ಲಿ ನಡೆದ ಪ್ರಧಾನಿ ಭಾಷಣದ ವೇಳೆ ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಗೈರಾಗಿದ್ದಕ್ಕೂ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದೆ.
ಬಿಜೆಪಿಗೆ ಕಾಂಗ್ರೆಸ್ ಕೌಂಟರ್: “ಅದು ಸುಳ್ಳು ಆರೋಪ”
ಅಮಿತ್ ಶಾ ಅವರ ಆರೋಪಕ್ಕೆ ತಕ್ಷಣವೇ ತಿರುಗೇಟು ನೀಡಿರುವ ಕಾಂಗ್ರೆಸ್, “ಸಾರ್ವಜನಿಕ ವೇದಿಕೆಯಲ್ಲಿ ಅಸತ್ಯಗಳನ್ನು ಹರಡುತ್ತಿರುವ ಗೃಹ ಸಚಿವರಿಗೆ ನಾಚಿಕೆಯಾಗಬೇಕು,” ಎಂದು ಕಿಡಿಕಾರಿದೆ.
ಕಾಂಗ್ರೆಸ್ ವಕ್ತಾರ ಉದಿತ್ ರಾಜ್ ಮಾತನಾಡಿ, ರಾಜಕೀಯ ಲಾಭಕ್ಕಾಗಿ ಬಿಜೆಪಿ ಸತ್ಯವನ್ನು ತಿರುಚುತ್ತಿದೆ ಎಂದು ಸ್ಪಷ್ಟನೆ ನೀಡಿದ್ದಾರೆ:
ಅಸಲಿ ನಡೆದಿದ್ದೇನು?: ಕಾರ್ಯಕ್ರಮದ ವೇಳೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅನಾರೋಗ್ಯದ ಕಿರಿಕಿರಿ ಉಂಟಾಗಿತ್ತು. ಅದನ್ನು ಗಮನಿಸಿದ ಸೋನಿಯಾ ಗಾಂಧಿ ಅವರು ಖರ್ಗೆ ಅವರಿಗೆ ಕೂಡಲೇ ಕುರ್ಚಿ ತಂದುಕೊಡುವಂತೆ ಸೂಚಿಸಿದ್ದರು. ಈ ಮಾನವೀಯ ಕಾಳಜಿಯನ್ನೇ ಬಿಜೆಪಿ ವಂದೇ ಮಾತರಂ ತಡೆದರು ಎಂದು ಸುಳ್ಳು ಪ್ರಚಾರ ಮಾಡುತ್ತಿದೆ.
ಆರ್ಎಸ್ಎಸ್ ನೆನಪಿಸಿದ ಕಾಂಗ್ರೆಸ್: “ಸ್ವಾತಂತ್ರ್ಯ ಬಂದ 52 ವರ್ಷಗಳ ಕಾಲ ನಾಗಪುರದ ತನ್ನ ಕಚೇರಿಯಲ್ಲಿ ತ್ರಿವರ್ಣ ಧ್ವಜವನ್ನೇ ಹಾರಿಸದ ಆರ್ಎಸ್ಎಸ್ ಪರವಾಗಿ ಅಮಿತ್ ಶಾ ಯಾವಾಗ ಕ್ಷಮೆ ಕೇಳುತ್ತಾರೆ?” ಎಂದು ಉದಿತ್ ರಾಜ್ ಖಾರವಾಗಿ ಪ್ರಶ್ನಿಸಿದ್ದಾರೆ.

