ಜಮ್ಮು ಮತ್ತು ಕಾಶ್ಮೀರದ ಉಧಂಪುರ-ಶ್ರೀನಗರ-ಬಾರಾಮುಲ್ಲಾ ರೈಲ್ವೆ ಯೋಜನೆಯಲ್ಲಿ ಭಾರತೀಯ ರೈಲ್ವೆ ಮತ್ತೊಂದು ಐತಿಹಾಸಿಕ ಮೈಲಿಗಲ್ಲು ಸಾಧಿಸಿದೆ. ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆಯಾದ ಚೆನಾಬ್ ಸೇತುವೆ ಹಾಗೂ ಭಾರತದ ಮೊದಲ ಕೇಬಲ್ ಆಧಾರಿತ ರೈಲ್ವೆ ಸೇತುವೆಯಾದ ಅಂಜೀ ಖಾಡ್ ಸೇತುವೆಯ ಮೇಲೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಗಂಟೆಗೆ 100 ಕಿಲೋಮೀಟರ್ ವೇಗದಲ್ಲಿ ಯಶಸ್ವಿಯಾಗಿ ಸಂಚರಿಸಿದೆ.
ವೇಗದ ಮಿತಿ 100 ಕಿಲೋಮೀಟರ್‌ಗೆ ಹೆಚ್ಚಳ
ಉತ್ತರ ರೈಲ್ವೆಯ ಜಮ್ಮು ವಿಭಾಗದ ವ್ಯಾಪ್ತಿಗೆ ಬರುವ 111 ಕಿಲೋಮೀಟರ್ ಉದ್ದದ ಶ್ರೀ ಮಾತಾ ವೈಷ್ಣೋ ದೇವಿ ಕತ್ರಾ-ಬನಿಹಾಲ್ ಮಾರ್ಗದಲ್ಲಿ ಗರಿಷ್ಠ ಅನುಮತಿತ ವೇಗವನ್ನು ಗಂಟೆಗೆ 75 ಕಿಲೋಮೀಟರ್‌ನಿಂದ 100 ಕಿಲೋಮೀಟರ್‌ಗೆ ಹೆಚ್ಚಿಸಲಾಗಿದೆ. ಗುರುವಾರ ನಡೆದ ವೇಗ ಹೆಚ್ಚಳದ ಪರೀಕ್ಷಾರ್ಥ ಸಂಚಾರದಲ್ಲಿ ವಂದೇ ಭಾರತ್ ರೈಲು (ಸಂಖ್ಯೆ 26401/26404) ಎರಡೂ ಪ್ರಸಿದ್ಧ ಸೇತುವೆಗಳ ಮೇಲೆ ನೂರರ ವೇಗದಲ್ಲಿ ಯಶಸ್ವಿಯಾಗಿ ಓಡಿದೆ. ಆಗಸ್ಟ್ ತಿಂಗಳಲ್ಲಿ ಅಗತ್ಯ ಸುರಕ್ಷತಾ ಮಾನದಂಡಗಳು ಪೂರ್ಣಗೊಂಡ ನಂತರ ರೈಲ್ವೆ ಸಚಿವಾಲಯವು ಈ ವೇಗ ಹೆಚ್ಚಳಕ್ಕೆ ಅನುಮೋದನೆ ನೀಡಿತ್ತು. ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಈ ಸಂಚಾರದ ವೀಡಿಯೋವನ್ನು ಹಂಚಿಕೊಂಡಿದ್ದಾರೆ.
ದುರ್ಗಮ ಹಾದಿಯಲ್ಲಿ ಎಂಜಿನಿಯರಿಂಗ್ ವಿಸ್ಮಯ
ಕತ್ರಾ-ಬನಿಹಾಲ್ ಮಾರ್ಗವು ಪೀರ್ ಪಂಜಾಲ್ ಮತ್ತು ಕೆಳಗಿನ ಹಿಮಾಲಯ ಶ್ರೇಣಿಗಳ ಅತ್ಯಂತ ಕಠಿಣ ಭೂಪ್ರದೇಶದ ಮೂಲಕ ಹಾದುಹೋಗುತ್ತದೆ. ಆಳವಾದ ಕಣಿವೆಗಳು, ಕಡಿದಾದ ಇಳಿಜಾರುಗಳು ಮತ್ತು ಪ್ರಮುಖ ನದಿಗಳನ್ನು ಒಳಗೊಂಡಿರುವ ಈ 111 ಕಿಲೋಮೀಟರ್ ಮಾರ್ಗದಲ್ಲಿ ಬರೋಬ್ಬರಿ 33 ಸುರಂಗ ಮಾರ್ಗಗಳು ಹಾಗೂ ಬೃಹತ್ ಸೇತುವೆಗಳನ್ನು ನಿರ್ಮಿಸಲಾಗಿದೆ. ಈ ಸಾಹಸಮಯ ಮಾರ್ಗದಲ್ಲಿ ರೈಲುಗಳ ವೇಗ ಹೆಚ್ಚಳದಿಂದಾಗಿ ಕಾಶ್ಮೀರ ಕಣಿವೆ ಮತ್ತು ದೇಶದ ಇತರ ಭಾಗಗಳ ನಡುವಿನ ಪ್ರಯಾಣದ ಸಮಯ ಗಣನೀಯವಾಗಿ ಕಡಿಮೆಯಾಗಲಿದೆ.
ಈ ಹಿಂದೆ ಕತ್ರಾ-ಸಂಗಲ್ದಾನ್ ನಡುವೆ ಗಂಟೆಗೆ 85 ಕಿಲೋಮೀಟರ್ ಹಾಗೂ ಸಂಗಲ್ದಾನ್-ಬನಿಹಾಲ್ ನಡುವೆ ಗಂಟೆಗೆ 75 ಕಿಲೋಮೀಟರ್ ವೇಗದ ಮಿತಿ ಇತ್ತು. ಪ್ರಸ್ತುತ ವೇಗ ಹೆಚ್ಚಳದಿಂದ ಪ್ರಯಾಣಿಕರಿಗೆ ವೇಗದ ಹಾಗೂ ಆರಾಮದಾಯಕ ಪ್ರಯಾಣದ ಅನುಭವ ಸಿಗಲಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 2025 ರ ಜೂನ್ 6 ರಂದು ಕತ್ರಾ-ಶ್ರೀನಗರ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಚಾಲನೆ ನೀಡಿದ್ದರು ಎಂಬುದು ಗಮನಾರ್ಹ.

