ಮಂಗಳೂರಿಗೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಬೇಡಿಕೆ ಕೂಗು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹಲವಾರು ಗಣ್ಯರು ಈ ಕೂಗು ಬೆಂಬಲಿಸಿದ್ದು, ಕೇಂದ್ರ ಸರ್ಕಾರದ ಮೇಲೆ ಒತ್ತಡವನ್ನ ಹಾಕುತ್ತಿದ್ದಾರೆ. ರೈಲ್ವೆ ಇಲಾಖೆಗೆ ತುಮಕೂರು ಸಂಸದ ವಿ.ಸೋಮಣ್ಣ ರಾಜ್ಯ ಸಚಿವರಾಗಿರುವ ಕಾರಣಕ್ಕೆ ಈ ಬೇಡಿಕೆ ಬೇಗ ಈಡೇರುವ ನಿರೀಕ್ಷೆಯೂ ಇದೆ.
ನೈಋತ್ಯ ರೈಲ್ವೆ ಸಕಲೇಶಪುರ-ಸುಬ್ರಮಣ್ಯ ರೋಡ್ ತನಕದ 55 ಕಿ.ಮೀ. ರೈಲು ಮಾರ್ಗವನ್ನು ವಿದ್ಯುದೀಕರಣ ಮಾಡಿದೆ. ಇದರಿಂದಾಗಿ ಮಂಗಳೂರು-ಬೆಂಗಳೂರು ನಡುವೆ ವಂದೇ ಭಾರತ್ ರೈಲು ಓಡಿಸಲು ಇದ್ದ ತಡೆ ನಿವಾರಣೆಯಾಗಿದೆ.
ಉದ್ಯಮಿ ಮೋಹನ್ ದಾಸ್ ಪೈ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಸಂಸದರಾದ ಕ್ಯಾ.ಬ್ರಿಜೇಶ್ ಚೌಟ, ತೇಜಸ್ವಿ ಸೂರ್ಯ, ಕೋಟ ಶ್ರೀನಿವಾಸ ಪೂಜಾರಿ, ವಿಶ್ವೇಶ್ವರ ಹೆಗಡೆ ಕಾಗೇರಿ ಬೆಂಗಳೂರು-ಕರಾವಳಿ ನಡುವೆ ವಂದೇ ಭಾರತ್ ರೈಲು ಬೇಕು ಎಂದು ಬೇಡಿಕೆ ಇಟ್ಟಿದ್ದಾರೆ.
ವಿ.ಸೋಮಣ್ಣ ಅಪ್‌ಡೇಟ್: ಮೋಹನ್ ದಾಸ್ ಪೈ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಹಾಕಿ, ವಿ.ಸೋಮಣ್ಣ ಟ್ಯಾಗ್ ಮಾಡಿದ್ದರು. ಈ ಪೋಸ್ಟ್‌ಗೆ ಸೋಮಣ್ಣ ಪ್ರತಿಕ್ರಿಯೆ ನೀಡಿದ್ದಾರೆ.
‘ಧನ್ಯವಾದಗಳು. ಇದು ಸನ್ಮಾನ್ಯ ಪ್ರಧಾನಮಂತ್ರಿಗಳಾದ ಶ್ರೀ @narendramodi ಜೀ ಅವರ ವಿಕಸಿತ ಭಾರತದ ಕನಸಿನ ಯಶಸ್ಸು ಹಾಗೂ ರೈಲ್ವೇ ಖಾತೆ ಸಚಿವರಾದ ಶ್ರೀ @AshwiniVaishnaw ಅವರ ಕಾರ್ಯಕ್ಷಮತೆಗೆ ಸಾಕ್ಷಿ. ಹಾಗೆಯೇ, ಮಂಗಳೂರು ಭಾಗದ ಜನರ ಬಹುಬೇಡಿಕೆಯಾಗಿರುವ ವಂದೇ ಭಾರತ್ ರೈಲು ಸಂಚಾರಿಸುವ ಕಾಲವೂ ಸನ್ನಿಹಿತವಾಗಿದೆ’ ಎಂದು ಸೋಮಣ್ಣ ಪೋಸ್ಟ್‌ನಲ್ಲಿ ಹೇಳಿದ್ದಾರೆ.
ಮಂಗಳೂರು ನಗರಕ್ಕೆ ಸದ್ಯ 2 ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಪರ್ಕವಿದೆ. ಒಂದು ರೈಲು ತಿರುವನಂತಪುರಂ-ಮಂಗಳೂರು ಮತ್ತೊಂದು ರೈಲು ಮಂಗಳೂರು-ಮಡಗಾಂವ್ ನಡುವೆ ಸಂಚಾರವನ್ನು ನಡೆಸುತ್ತಿದೆ. ಆದರೆ ಬೆಂಗಳೂರು-ಮಂಗಳೂರು ನಡುವೆ ವಂದೇ ಭಾರತ್ ರೈಲು ಸಂಪರ್ಕವಿಲ್ಲ.
ರಾಜಧಾನಿ ಬೆಂಗಳೂರಿನಿಂದ ಮಂಗಳೂರು, ಉಡುಪಿ. ಕಾರವಾರ ತನಕ ವಂದೇ ಭಾರತ್ ರೈಲು ಓಡಿಸಬೇಕು ಎಂಬುದು ಬೇಡಿಕೆಯಾಗಿದೆ. ಈ ಕುರಿತು ವಿವಿಧ ಜನಪ್ರತಿನಿಧಿಗಳು, ಸಂಘಟನೆಗಳು ರೈಲ್ವೆ ಇಲಾಖೆಗೆ ಮನವಿಯನ್ನು ಸಲ್ಲಿಕೆ ಮಾಡುತ್ತಿವೆ.
ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಓಡಿಸಲು ವಿದ್ಯುದೀಕರಣಗೊಂಡ ಮಾರ್ಗ ಅಗತ್ಯವಿದೆ. ಆದರೆ ಬೆಂಗಳೂರು-ಮಂಗಳೂರು ರೈಲು ಮಾರ್ಗದಲ್ಲಿ ಸಕಲೇಶಪುರ-ಸುಬ್ರಮಣ್ಯ ರೋಡ್ ನಡುವಿನ 55 ಕಿ.ಮೀ. ಪಶ್ಚಿಮ ಘಟ್ಟದಲ್ಲಿ ಸಾಗುವ ಘಾಟ್‌ನಲ್ಲಿ ವಿದ್ಯುದೀಕರಣ ಕಾಮಗಾರಿ ಪೂರ್ಣಗೊಂಡಿರಲಿಲ್ಲ.
2023ರ ಡಿಸೆಂಬರ್‌ನಲ್ಲಿ ಕೈಗೊಂಡಿದ್ದ ಸವಾಲಿನ ವಿದ್ಯುದೀಕರಣ ಕಾಮಗಾರಿ 2025ರ ಡಿಸೆಂಬರ್ 28ಕ್ಕೆ ಮುಕ್ತಾಯಗೊಂಡಿದೆ. ಆದ್ದರಿಂದ ಈಗ ವಂದೇ ಭಾರತ್ ರೈಲು ಓಡಿಸಲು ಅಗತ್ಯ ವ್ಯವಸ್ಥೆಯಾಗಿದೆ. ರೈಲ್ವೆ ಇಲಾಖೆ ರೈಲು ಓಡಿಸುವ ಕುರಿತು ಘೋಷಣೆ ಮಾಡುವುದು ಮಾತ್ರ ಬಾಕಿ ಇದೆ.
ದಕ್ಷಿಣ ಕನ್ನಡ ಜಿಲ್ಲೆಗೆ ಪ್ರವಾಸಿಗರು, ಭಕ್ತಾದಿಗಳು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ರೋಗಿಗಳು, ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿಗಳು ತೆರಳುತ್ತಾರೆ. ವಂದೇ ಭಾರತ್ ರೈಲು ಸೇವೆ ಆರಂಭವಾದರೆ ಎಲ್ಲರಿಗೂ ಅನುಕೂಲವಾಗಲಿದೆ.
ಸಚಿವ ಎಚ್.ಡಿ.ಕುಮಾರಸ್ವಾಮಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ಗೆ ಪತ್ರ ಬರೆದಿದ್ದು ಬೆಂಗಳೂರು-ಮಡಗಾಂವ್ ವಯಾ ಮಂಗಳೂರು, ಉಡುಪಿ, ಕಾರವಾರ ವಂದೇ ಭಾರತ್ ರೈಲು ಸೇವೆ ಆರಂಭಿಸಬೇಕು ಎಂದು ಮನವಿ ಮಾಡಿದ್ದಾರೆ.
ಸಂಸದ ತೇಜಸ್ವಿ ಸೂರ್ಯ ಮಂಗಳೂರು-ಮಡಗಾಂವ್ ರೈಲನ್ನು ಬೆಂಗಳೂರು ತನಕ ವಿಸ್ತರಣೆ ಮಾಡಿ ಎಂದು ಮನವಿ ಮಾಡಿದ್ದಾರೆ. ಸಚಿವ ದಿನೇಶ್ ಗುಂಡೂರಾವ್ ಮಂಗಳೂರು-ಬೆಂಗಳೂರು ನಡುವೆ ಎರಡು ಹೊಸ ವಂದೇ ಭಾರತ್ ರೈಲು ಓಡಿಸಿ ಎಂದು ಮನವಿ ಸಲ್ಲಿಕೆ ಮಾಡಿದ್ದಾರೆ.

