ಬೆಂಗಳೂರು: ಒತ್ತುವರಿ ಮಾಡಿದವರಿಗೆ ಗಿಫ್ಟ್ ಕೊಡುವುದಕ್ಕೆ ನಾವು ತಯಾರಿಲ್ಲ. ಯಾವ ರೀತಿಯಲ್ಲೂ ಓಲೈಕೆ ರಾಜಕಾರಣ ಮಾಡುವಂತಹ ಪ್ರಶ್ನೆ ಬರುವುದಿಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಮುಸ್ಲಿಂಮರ ಓಲೈಕೆ ಮಾಡಲಾಗುತ್ತಿದೆ ಎನ್ನುವ ಪ್ರತಿಪಕ್ಷದ ಟೀಕೆಗಳಿಗೆ ಉತ್ತರಿಸುದ ಡಿಸಿಎಂ, ಯಾರನ್ನೂ ಓಲೈಕೆ ಮಾಡುತ್ತಿಲ್ಲ. ಒತ್ತುವರಿಗೆ ಕಾರಣರಾದವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ. ಕೆಲವರು ಹಣ ಸಂಗ್ರಹಿಸಿದ್ದಾರೆ ಎಂದು ಅಲ್ಲಿನವರೇ ಹೇಳಿಕೆ ನೀಡಿದ್ದಾರೆ. ಮಾನವೀಯತೆ ದೃಷ್ಟಿಯಿಂದ ಯಾರಿಗೆ ಅರ್ಹತೆ ಇದೆಯೋ ಅವರಿಗೆ ಪ್ರಧಾನಮಂತ್ರಿ ಆವಾಸ್ ಯೋಜನೆ ಮೂಲಕ ಮನೆ ನೀಡಲಾಗುವುದು ಎಂದರು.
ಈ ಹಿಂದೆ ಕೆಲವು ಭಾಗಗಳಲ್ಲಿ ಹಕ್ಕುಪತ್ರಗಳನ್ನು ನೀಡಲಾಗಿತ್ತು ಎಂದು ಹೇಳಿದ್ದಾರೆ. ಅದನ್ನು ಪರಿಶೀಲನೆ ನಡೆಸಲು ತಿಳಿಸಿದ್ದೇನೆ. ಹೊರಗಿನಿಂದ ಬಂದವರು ಸಹ ಹೊಸದಾಗಿ ಸೇರಿಕೊಂಡಿದ್ದಾರೆ. ನೈಜ ಮತದಾರರು ಎಷ್ಟಿದ್ದಾರೆ ಎಂಬ ಬಗ್ಗೆ ದಾಖಲೆಗಳನ್ನು ಪರಿಶೀಲಿಸಿ, ಅವರಿಗೆ ಪುನರ್ವಸತಿ ಕಲ್ಪಿಸಲಾಗುವುದು ಎಂದರು.
ನಾವು ಉತ್ತಮವಾಗಿ ಸರ್ಕಾರವನ್ನು ನಡೆಸಿಕೊಂಡು ಹೋಗುತ್ತಿದ್ದೇವೆ. ಅವರು ಏನು ಬೇಕಾದರೂ ಹೇಳಿಕೆ ನೀಡಲಿ. ನಾವು ಅಕ್ರಮ ಒತ್ತುವರಿಗೆ ಅವಕಾಶ ನೀಡುವುದಿಲ್ಲ. ಅವರು ಈ ಹಿಂದೆ ಕೊಟ್ಟ ಭರವಸೆ, ಪ್ರವಾಹದ ಸಂದರ್ಭದಲ್ಲಿ ನೀಡಿದ ಮಾತನ್ನೇ ಈಡೇರಿಸಿಲ್ಲ. ಅಂತಹವರು ನಮಗೆ ಹೇಳುವ ಅವಶ್ಯಕತೆ ಇಲ್ಲ. ನಮ್ಮ ರಾಜ್ಯದ ವಿಚಾರವನ್ನು ಹೇಗೆ ನಿಭಾಯಿಸಬೇಕು ಎಂಬುದು ನಮಗೆ ತಿಳಿದಿದೆ ಎಂದರು.

