HomeKarnatakaಬೆಂಗಳೂರು-ಮಂಗಳೂರು ವಂದೇ ಭಾರತ್ ರೈಲು ಯಾವಾಗ?; ಸಚಿವರ ಬಿಗ್ ಅಪ್‌ಡೇಟ್

ಬೆಂಗಳೂರು-ಮಂಗಳೂರು ವಂದೇ ಭಾರತ್ ರೈಲು ಯಾವಾಗ?; ಸಚಿವರ ಬಿಗ್ ಅಪ್‌ಡೇಟ್

ಕರ್ನಾಟಕದ ರಾಜಧಾನಿ ಬೆಂಗಳೂರು ಮತ್ತು ಕರಾವಳಿ ಕರ್ನಾಟಕದ ಪ್ರಮುಖ ನಗರ ಮಂಗಳೂರು ಸಂಪರ್ಕಿಸಲು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಬೇಕು ಎಂಬ ಬೇಡಿಕೆ ಇದೆ. ಈ ಕುರಿತು ಜನಪ್ರತಿನಿಧಿಗಳು, ವಿವಿಧ ಸಂಘಟನೆಗಳು ಕೇಂದ್ರ ಸರ್ಕಾರಕ್ಕೆ, ರೈಲ್ವೆ ಸಚಿವರಿಗೆ ಮನವಿಗಳನ್ನು ಸಲ್ಲಿಕೆ ಮಾಡಿದ್ದಾರೆ.

ಶನಿವಾರ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಕೇಂದ್ರ ಬಜೆಟ್‌-2026 ಕುರಿತು ಪತ್ರಿಕಾಗೋಷ್ಠಿ ನಡೆಸಿದರು. ಈ ಸಮಯದಲ್ಲಿ ಅವರು ಬೆಂಗಳೂರು-ಮಂಗಳೂರು ವಂದೇ ಭಾರತ್ ರೈಲು ಸಂಪರ್ಕದ ಕುರಿತು ವಿಚಾರವನ್ನು ಪ್ರಸ್ತಾಪಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವರು, “ಈ ಬಾರಿಯ ಬಜೆಟ್‌ನಲ್ಲಿ ಘೋಷಣೆಯಾದ ಬೆಂಗಳೂರು-ಚೆನ್ನೈ, ಬೆಂಗಳೂರು-ಹೈದ್ರಾಬಾದ್ ಅತಿವೇಗದ ರೈಲ್ವೆ ಕಾರಿಡಾರ್ ದಕ್ಷಿಣ ಭಾರತದ 3 ದೊಡ್ಡ ಆರ್ಥಿಕ ನಗರಗಳ ಸಂಪರ್ಕ ಹಾಗೂ ಪ್ರಗತಿಯನ್ನು ವೃದ್ಧಿಸಲಿದೆ. ಇದರಿಂದ 73 ನಿಮಿಷಗಳಲ್ಲಿ ಬೆಂಗಳೂರಿನಿಂದ ಚೆನ್ನೈಗೆ ಹಾಗೂ 2 ಗಂಟೆಗಳಲ್ಲಿ ಬೆಂಗಳೂರಿನಿಂದ ಹೈದ್ರಾಬಾದ್ ಗೆ ತಲುಪಬಹುದು” ಎಂದು ಹೇಳಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

“ಬೆಂಗಳೂರು-ಮಂಗಳೂರು ವಂದೇ ಭಾರತ ರೈಲು ಸೇವೆಗಾಗಿ, ಹಾಸನದಿಂದ ಮಂಗಳೂರಿನವರೆಗೆ ವಿದ್ಯುದ್ದೀಕರಣದ‌ ಕೆಲಸ ಪ್ರಗತಿಯಲ್ಲಿದೆ. ಕಾಮಗಾರಿ ಪೂರ್ಣವಾದ ನಂತರ ಕರಾವಳಿ ಪ್ರದೇಶದ ಸಂಪರ್ಕಕ್ಕಾಗಿ ಕಾರವಾರ-ಮಂಗಳೂರು-ಬೆಂಗಳೂರು ಮಾರ್ಗದಲ್ಲಿ ರೈಲು ಸೇವೆ ಆರಂಭಿಸಲಾಗುವುದು” ಎಂದು ತಿಳಿಸಿದರು.

“ಪ್ರಸ್ತುತ ಕರ್ನಾಟಕದಲ್ಲಿ ರೈಲ್ವೆ ಹಳಿಗಳ ನವೀಕರಣ, ₹2110 ಕೋಟಿ ವೆಚ್ಚದಲ್ಲಿ 51 ಹೊಸ ಅಮೃತ್ ಭಾರತ ರೈಲ್ವೆ‌ ನಿಲ್ದಾಣಗಳ ನಿರ್ಮಾಣ, 12 ವಂದೇ ಭಾರತ ರೈಲುಗಳ ಸಂಚಾರ ನಡೆಯುತ್ತಿದೆ” ಎಂದು ವಿವರಣೆ ನೀಡಿದರು.

ಸಚಿವರ ಪತ್ರಿಕಾಗೋಷ್ಠಿ ಮುಖ್ಯಾಂಶಗಳು

  • ಬೆಂಗಳೂರು ಉಪನಗರ (ಸಬ್ ಅರ್ಬನ್) ರೈಲ್ವೆ ಯೋಜನೆಯ 4 ಹಂತಗಳ ಕಾಮಗಾರಿ ಪ್ರಗತಿಯಲ್ಲಿವೆ. ಈಗಿರುವ ಹಳಿಗಳ ಪಕ್ಕದಲ್ಲೇ ಸಬ್ ಅರ್ಬನ್ ಹಳಿಗಳು ನಿರ್ಮಾಣವಾಗಲಿದ್ದು, ಹೊಸಬಗೆಯ ವಿನ್ಯಾಸವನ್ನು ರೂಪಿಸಲಾಗಿದೆ.
  • ಕೃತಕ ಬುದ್ಧಿಮತ್ತೆ (ಎಐ) ಕ್ಷೇತ್ರವು ಭಾರತದ ಬೆಳವಣಿಗೆಯಲ್ಲಿ ಹೊಸ ಕ್ರಾಂತಿ ಸೃಷ್ಟಿಸುತ್ತಾ, ಶಿಕ್ಷಣ, ಉದ್ಯಮ ಹಾಗೂ ಸರ್ಕಾರ ಈ ಮೂರರ ಜೊತೆಗಿನ ಸಮನ್ವಯದೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಬಿಟೆಕ್, ಎಂಟೆಕ್ ಪದವಿಯ ಅನೇಕ ಶಿಕ್ಷಣ ಸಂಸ್ಥೆಗಳು ತಮ್ಮ ಪಠ್ಯಕ್ರಮದಲ್ಲಿ ಎಐ ವಿಷಯವನ್ನು ಸೇರ್ಪಡೆಗೊಳಿಸಿವೆ.
  • ಈ ಬಾರಿಯ ಬಜೆಟ್‌ನಲ್ಲಿ ಕರ್ನಾಟಕ ರೈಲ್ವೆ ಅಭಿವೃದ್ಧಿಗೆ ₹7748 ಕೋಟಿ ಅನುದಾನ ನೀಡಲಾಗಿದೆ. ಇದು ಹಿಂದಿನ ಸರ್ಕಾರದ ಬಜೆಟ್ ಗಿಂತ 9 ಪಟ್ಟು ಹೆಚ್ಚಾಗಿದೆ. ಒಟ್ಟಾರೆ ರಾಜ್ಯದಲ್ಲಿ ₹52950 ಕೋಟಿ ಹೂಡಿಕೆ ಮಾಡಲಾಗಿದೆ.
  • ಪಿಎಂ ಜನ್ ಧನ್, ಉಜ್ವಲ ಯೋಜನೆ ಸೇರಿದಂತೆ ಮುಂತಾದ ಆರ್ಥಿಕ ಹಾಗೂ ಸಾಮಾಜಿಕ ಯೋಜನೆಗಳ ಸಮರ್ಪಕ ಅನುಷ್ಠಾನದಿಂದ ಈವರೆಗೆ ದೇಶದಲ್ಲಿ 25 ಕೋಟಿ ಜನರನ್ನು ಬಡತನದಿಂದ ಹೊರತರಲಾಗಿದೆ.
  • ಈ ಬಾರಿಯ ಬಜೆಟ್ ನಲ್ಲಿ ಘೋಷಿಸಲಾದ ಮಾಹಿತಿ ತಂತ್ರಜ್ಞಾನ (ಐಟಿ) ಕ್ಷೇತ್ರದಲ್ಲಿನ ತೆರಿಗೆ ರಚನೆಯನ್ನು ಅನೇಕ ಐಟಿ ಕಂಪನಿಗಳು ಸ್ವಾಗತಿಸಿವೆ. ಅನೇಕ ದತ್ತಾಂಶ ಕೇಂದ್ರಗಳು ಸ್ಥಾಪನೆಯಾಗಲಿವೆ. ಇದರಿಂದ ಸಾಫ್ಟವೇರ್ ವಲಯದಲ್ಲಿ ದೊಡ್ಡ ಬದಲಾವಣೆ ಆಗಲಿದೆ.
  • ಎಲೆಕ್ಟ್ರಾನಿಕ್ಸ್ ಘಟಕ ಸೇರಿದಂತೆ ಶಿಪ್ ಕಂಟೇನರ್ಸ್, ಜವಳಿ ಪಾರ್ಕ್, ಕಟ್ಟಡ‌ ನಿರ್ಮಾಣ ಘಟಕ, ರಕ್ಷಣಾ ಕ್ಷೇತ್ರದ ಉತ್ಪನ್ನ, ರಾಸಾಯನಿಕ ಪಾರ್ಕ್ ಹಾಗೂ ಕ್ರೀಡಾ ಉಪಕರಣ ಉತ್ಪಾದನೆಗೆ ಈ ಬಾರಿಯ ಬಜೆಟ್ ನಲ್ಲಿ ಆದ್ಯತೆ ನೀಡಲಾಗಿದೆ.
  • ಎಲೆಕ್ಟ್ರಾನಿಕ್ಸ್ ಘಟಕಗಳ ಉತ್ಪಾದನೆಗಾಗಿ ಕರ್ನಾಟಕದಲ್ಲಿ ₹10 ಸಾವಿರ ಕೋಟಿ ಹೂಡಿಕೆ ಮಾಡಲಾಗಿದೆ. ದೇಶಾದ್ಯಂತ ಎಲೆಕ್ಟ್ರಾನಿಕ್ಸ್ ಘಟಕಗಳ ಉತ್ಪಾದನಾ ವಲಯದ ಅನುದಾನವನ್ನು ₹22 ಸಾವಿರ ಕೋಟಿಯಿಂದ ₹40 ಸಾವಿರ ಕೋಟಿಗೆ ಹೆಚ್ಚಿಸಲಾಗಿದೆ.
  • ಈ ಬಾರಿಯ ಕೇಂದ್ರ ಬಜೆಟ್ ನಲ್ಲಿ ಉತ್ಪಾದನಾ ವಲಯಕ್ಕೆ ಹೆಚ್ಚಿನ ಆದ್ಯತೆ‌ ನೀಡಲಾಗಿದೆ. ಸೆಮಿಕಂಡಕ್ಟರ್ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಇಂಡಿಯಾ ಸೆಮಿಕಾನ್ ಮಿಷನ್ 2.0 ಶೀಘ್ರದಲ್ಲೇ ನಡೆಸುವುದಾಗಿ ಬಜೆಟ್ ನಲ್ಲಿ ಘೋಷಿಸಲಾಗಿದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular