HomeKarnatakaವಾಲ್ಮೀಕಿ ನಿಗಮದ ಹಗರಣ: ಮಾಜಿ ಸಚಿವ ನಾಗೇಂದ್ರ ಸೇರಿದಂತೆ 30 ಜನರ ವಿರುದ್ಧ ಚಾರ್ಜ್ ಶೀಟ್...

ವಾಲ್ಮೀಕಿ ನಿಗಮದ ಹಗರಣ: ಮಾಜಿ ಸಚಿವ ನಾಗೇಂದ್ರ ಸೇರಿದಂತೆ 30 ಜನರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದ ಸಿಬಿಐ

ಬೆಂಗಳೂರು: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ನಡೆದಿದ್ದ ಕೋಟ್ಯಂತರ ರೂಪಾಯಿ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ ಸಿಬಿಐ ಅಧಿಕಾರಿಗಳು ಮಾಜಿ ಸಚಿವ ಬಿ. ನಾಗೇಂದ್ರ ಸೇರಿದಂತೆ 30 ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದೆ.

ನಿಗಮದ ಹಣ ವರ್ಗಾವಣೆಯಲ್ಲಿ ಮಾಜಿ ಸಚಿವ ನಾಗೇಂದ್ರ ಕುಟುಂಬಸ್ಥರು ಹಾಗೂ ಅವರ ಆಪ್ತರು ಶಾಮೀಲಾಗಿರುವುದು ಸಾಬೀತಾಗಿದೆ ಎಂದು ಸಿಬಿಐ ಸ್ಪಷ್ಟಪಡಿಸಿದೆ.

ವಾಲ್ಮೀಕಿ ನಿಗಮ, ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಹಾಗೂ ಕರ್ನಾಟಕ ಜರ್ಮನ್ ತಾಂತ್ರಿಕ ತರಬೇತಿ ಸಂಸ್ಥೆ (KGTTI) ಈ ಮೂರೂ ಘಟಕಗಳಲ್ಲಿ ನಡೆದಿರುವ ಹಣ ದುರುಪಯೋಗದ ತನಿಖೆ ಪೂರ್ಣಗೊಳಿಸಲಾಗಿದ್ದು, ಮೂರರಲ್ಲೂ ಮಾಜಿ ಸಚಿವ ಬಿ. ನಾಗೇಂದ್ರ ಅವರನ್ನು ಪ್ರಮುಖ ಆರೋಪಿಯನ್ನಾಗಿ ಉಲ್ಲೇಖಿಸಲಾಗಿದೆ. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಎಂ.ಜಿ. ರೋಡ್ ಶಾಖೆಯ ಅಧಿಕಾರಿಗಳ ವಿರುದ್ಧ ದಾಖಲಾಗಿದ್ದ ದೂರಿನ ಆಧಾರದ ಮೇಲೆ ಹೈಕೋರ್ಟ್ ಉಸ್ತುವಾರಿಯಲ್ಲಿ ಈ ತನಿಖೆ ನಡೆದಿತ್ತು. ನಂತರ ಹೈಕೋರ್ಟ್ ಆದೇಶದ ಮೇರೆಗೆ ತನಿಖೆಯನ್ನು ಇಲಾಖೆಯ ಇತರೆ ಎರಡು ಘಟಕಗಳಿಗೂ ವಿಸ್ತರಿಸಲಾಗಿತ್ತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಾಜಿ ಸಚಿವ ನಾಗೇಂದ್ರ, ಅವರ ಆಪ್ತ ನೆಕ್ಕಂಟಿ ನಾಗರಾಜ್ ಹಾಗೂ ನಿಗಮದ ಎಂಡಿ ಪದ್ಮನಾಭ ಜಂಟಿಯಾಗಿ ಸಂಚು ರೂಪಿಸಿದ್ದರು. ಹೈದರಾಬಾದ್‌ನ ಸತ್ಯನಾರಾಯಣ ವರ್ಮಾ ಎಂಬಾತ ಈ ಹಿಂದೆ ಛತ್ತೀಸ್‌ಗಢದಲ್ಲಿ ಮಾಡಿದ ಮಾದರಿಯಲ್ಲೇ ಇಲ್ಲೂ ನಕಲಿ ದಾಖಲೆಗಳನ್ನು ಬಳಸಿ 18 ಬೋಗಸ್ ಬ್ಯಾಂಕ್ ಖಾತೆಗಳನ್ನು ತೆರೆದಿದ್ದ. ನಿಗಮದ ಎಂಡಿ ಮತ್ತು ಅಕೌಂಟ್ಸ್ ಆಫೀಸರ್ ಅವರ ನಕಲಿ ರಬ್ಬರ್ ಸ್ಟಾಂಪ್ ಹಾಗೂ ಸಹಿಗಳನ್ನು ಬಳಸಿ, ನಿಗಮದ ಖಾತೆಯಲ್ಲಿದ್ದ 187 ಕೋಟಿ ರೂ. ಪೈಕಿ 89.63 ಕೋಟಿ ರೂ. ಹಣವನ್ನು ಬೇರೆ ಖಾತೆಗಳಿಗೆ ವರ್ಗಾಯಿಸಲಾಗಿತ್ತು. ಈ ಹಣವನ್ನು ಸುಮಾರು 600 ಬ್ಯಾಂಕ್ ಖಾತೆಗಳ ಮೂಲಕ ರವಾನಿಸಿ ಕೊನೆಗೆ ನಗದು, ಚಿನ್ನ ಮತ್ತು ಐಷಾರಾಮಿ ಬೆನಾಮಿ ವಾಹನಗಳಾಗಿ ಪರಿವರ್ತಿಸಿಕೊಳ್ಳಲಾಗಿತ್ತು. ಇದಕ್ಕೆ ಬ್ಯಾಂಕ್ ಅಧಿಕಾರಿಗಳೂ ಸಾಥ್ ನೀಡಿದ್ದರು ಎಂದು ಸಿಬಿಐ ಹೇಳಿದೆ.

ಸ್ಮಾರ್ಟ್ ಕಂಪ್ಯೂಟರ್ ಲ್ಯಾಬ್ ಹಾಗೂ ರೊಟ್ಟಿ ಮಾಡುವ ಯಂತ್ರಗಳ ಟೆಂಡರ್ ಪ್ರಕ್ರಿಯೆಯಲ್ಲಿ ನೆಕ್ಕಂಟಿ ನಾಗರಾಜ್ ಅವರ ಆಪ್ತನಿಗೆ ಸೇರಿದ ಸಂಸ್ಥೆಗೆ 13.95 ಕೋಟಿ ರೂ. ಟೆಂಡರ್ ನೀಡಲಾಗಿತ್ತು. ಇದರ ಪ್ರತಿಯಾಗಿ ಸಚಿವ ನಾಗೇಂದ್ರ ಅವರಿಗೆ ಸಂದಾಯವಾದ 1.20 ಕೋಟಿ ರೂ. ಅಕ್ರಮ ಹಣವನ್ನು ಅವರ ಸಹೋದರಿ, ಭಾವ, ಪಿಎ ಹಾಗೂ ಬಳ್ಳಾರಿಯ ಫಾರ್ಮ್‌ಹೌಸ್ ಮಾಲೀಕರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗಿತ್ತು ಎಂದು ಸಿಬಿಐ ಉಲ್ಲೇಖಿಸಿದೆ.

ಇನ್ನು ಕೌಶಲಾಭಿವೃದ್ಧಿ ತರಬೇತಿಯ 4.90 ಕೋಟಿ ರೂ. ಕಾಮಗಾರಿಯಲ್ಲೂ ಯಾವುದೇ ಟೆಂಡರ್ ಇಲ್ಲದೆ ಉಪ-ಗುತ್ತಿಗೆ ನೀಡಿ, ನೆಕ್ಕಂಟಿ ನಾಗರಾಜ್ ಕುಟುಂಬಕ್ಕೆ 64 ಲಕ್ಷ ರೂ. ಹಾಗೂ ಇಲಾಖೆಯ ಸೆಕ್ಷನ್ ಆಫೀಸರ್ ಪ್ರಕಾಶ್ ಅವರಿಗೆ 15.50 ಲಕ್ಷ ಲಂಚ ನೀಡಲಾಗಿರುವುದನ್ನು ಪತ್ತೆ ಹಚ್ಚಲಾಗಿದೆ ಎಂದು ಸಿಬಿಐ ಉಲ್ಲೇಖಿಸಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular