ನಿನ್ನೆ ( ಫೆಬ್ರವರಿ 6 ) ಹರಾರೆ ಕ್ರೀಡಾಂಗಣದಲ್ಲಿ ನಡೆದ ಅಂಡರ್ 19 ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಭಾರತ ಇಂಗ್ಲೆಂಡ್ ವಿರುದ್ಧ 100 ರನ್‌ಗಳ ಗೆಲುವನ್ನು ದಾಖಲಿಸಿ ಆರನೇ ಬಾರಿಗೆ ಅಂಡರ್ 19 ವಿಶ್ವಕಪ್ ಟ್ರೋಫಿಯನ್ನು ಎತ್ತಿಹಿಡಿದಿದೆ.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ವೈಭವ್ ಸೂರ್ಯವಂಶಿ ದಾಖಲೆಯ ಶತಕದ ನೆರವಿನಿಂದ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ ಬರೋಬ್ಬರಿ 411 ರನ್ ಕಲೆಹಾಕಿ ಇಂಗ್ಲೆಂಡ್‌ಗೆ 412 ರನ್‌ಗಳ ಕಠಿಣ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾದ ಇಂಗ್ಲೆಂಡ್ 40.2 ಓವರ್‌ಗಳಲ್ಲಿ 311 ರನ್‌ಗೆ ಆಲ್‌ಔಟ್ ಆಯಿತು.
ಈ ಮೂಲಕ ಬೃಹತ್ ಗೆಲುವು ದಾಖಲಿಸಿದ ಯಂಗ್ ಇಂಡಿಯಾ ಆಟಗಾರರು ಟ್ರೋಫಿ ಎತ್ತಿ ಹರಾರೆ ಕ್ರೀಡಾಂಗಣದಲ್ಲಿ ಸಂಭ್ರಮಾಚರಣೆ ಮಾಡಿದರು. ಪಂದ್ಯದ ಬಳಿಕದ ವಿಡಿಯೊಗಳು ಒಂದೊಂದಾಗಿ ಆಚೆ ಬರುತ್ತಿದ್ದು, ಆಟಗಾರರ ಡಾನ್ಸ್ ಹಾಗೂ ಡೈಲಾಗ್‌ಗಳು ವೈರಲ್ ಆಗತೊಡಗಿವೆ. ಅದರಲ್ಲೂ ಪ್ರಮುಖವಾಗಿ ವೈಭವ್ ಸೂರ್ಯವಂಶಿ ವಿಡಿಯೊಗಳು ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಳ್ಳುತ್ತಿವೆ.
ತಂಡದ ಆಟಗಾರ ಹರ್ವನ್ಷ್ ಸೆಲ್ಫಿ ವಿಡಿಯೊ ಮಾಡಿದ್ದು, ‘ಫೈನಲ್ ಮ್ಯಾಚ್ ಯು ಪರ್ಫಾರ್ಮ್ ವಾಟ್ಸ್ ಹ್ಯಾಪನಿಂಗ್?’ ಎಂದು ಪ್ರಶ್ನೆ ಹಾಕಿದ್ದಾರೆ. ಇದು ಬಾಂಗ್ಲಾದೇಶ ಪ್ರೀಮಿಯರ್ ಲೀಗ್ ಸಂದರ್ಭದಲ್ಲಿ ಇಂಗ್ಲಿಷ್ ಬಾರದ ಸ್ಥಳೀಯ ವರದಿಗಾರನೊಬ್ಬ ಆಂಡ್ರೆ ರಸೆಲ್‌ಗೆ ಕೇಳಿದ್ದ ಪ್ರಶ್ನೆ. ಇದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು.
ಇದೇ ಪ್ರಶ್ನೆಯನ್ನು ಹರ್ವನ್ಷ್ ಕೇಳಿದ್ದು, ಇದಕ್ಕೆ ವೈಭವ್ ಸೂರ್ಯವಂಶಿ ‘ನಥಿಂಗ್. ವಿ ವನ್ ದ ಮ್ಯಾಚ್, ದಟ್ಸ್ ಹ್ಯಾಪನಿಂಗ್. ದಟ್ಸ್ ಇಂಪಾರ್ಟೆಂಟ್ ಥಿಂಗ್. ವಿ ಆರ್ ವನ್’ ಎಂದು ಹೇಳಿದ್ದಾರೆ.
ಇನ್ನು ಟೂರ್ನಿಯಲ್ಲಿ ಅತಿಹೆಚ್ಚು ರನ್ ಬಾರಿಸಿದ ವೈಭವ್ ಸೂರ್ಯವಂಶಿ ಫೈನಲ್ ಪಂದ್ಯದಲ್ಲಿ 80 ಎಸೆತಗಳಲ್ಲಿ 15 ಸಿಕ್ಸರ್ ಹಾಗೂ 15 ಫೋರ್ ಬಾರಿಸುವ ಮೂಲಕ 175 ರನ್ ಚಚ್ಚಿ ಐಸಿಸಿ ಫೈನಲ್ ಪಂದ್ಯದಲ್ಲಿ ಅತಿಹೆಚ್ಚು ರನ್ ಬಾರಿಸಿದ ಆಟಗಾರ ಎನಿಸಿಕೊಂಡರು ಹಾಗೂ ವೇಗದ ಶತಕ ಬಾರಿಸಿದ ದಾಖಲೆಯನ್ನೂ ಸಹ ಬರೆದರು.

