HomeKarnatakaಬೆಂಗಳೂರಿನಲ್ಲಿ ಖಾಲಿ ಸೈಟ್ ಇದ್ಯಾ? ಆಗಸ್ಟ್ 15 ರೊಳಗೆ ಖಾಲಿ ಸೈಟ್ ಕ್ಲೀನ್ ಮಾಡದಿದ್ರೆ ₹1...

ಬೆಂಗಳೂರಿನಲ್ಲಿ ಖಾಲಿ ಸೈಟ್ ಇದ್ಯಾ? ಆಗಸ್ಟ್ 15 ರೊಳಗೆ ಖಾಲಿ ಸೈಟ್ ಕ್ಲೀನ್ ಮಾಡದಿದ್ರೆ ₹1 ಲಕ್ಷ ದಂಡಕ್ಕೆ ರೆಡಿಯಾಗಿ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಖಾಲಿ ನಿವೇಶನಗಳನ್ನು ಇಟ್ಟುಕೊಂಡು ಸ್ವಚ್ಛತೆ ಕಾಪಾಡದ ಮಾಲೀಕರಿಗೆ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (GBA) ಬಿಗ್ ಶಾಕ್ ನೀಡಿದೆ. ನಗರವನ್ನು ತ್ಯಾಜ್ಯ ಮುಕ್ತಗೊಳಿಸುವ ನಿಟ್ಟಿನಲ್ಲಿ ತ್ಯಾಜ್ಯದಿಂದ ಸ್ವಾತಂತ್ರ್ಯ ಅಭಿಯಾನ ಕೈಗೊಂಡಿರುವ ಪ್ರಾಧಿಕಾರ, ಖಾಲಿ ಜಾಗಗಳಲ್ಲಿ ಕಸ ಹಾಗೂ ಕಟ್ಟಡ ತ್ಯಾಜ್ಯ ತೆರವುಗೊಳಿಸದಿದ್ದರೆ ಬರೋಬ್ಬರಿ 25 ಸಾವಿರದಿಂದ 1 ಲಕ್ಷ ರೂಪಾಯಿಗಳವರೆಗೆ ದಂಡ ವಿಧಿಸುವುದಾಗಿ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ.

ಆಗಸ್ಟ್ ತಿಂಗಳಿನಿಂದ ಜಿಬಿಎ ವ್ಯಾಪ್ತಿಯ ಎಲ್ಲಾ ನಗರ ಪಾಲಿಕೆಗಳು ಹಾಗೂ ಅಂಗಸಂಸ್ಥೆಗಳ ಜಂಟಿ ಸಹಯೋಗದಲ್ಲಿ ಈ ಬೃಹತ್ ತೆರವು ಕಾರ್ಯಚರಣೆ ಆರಂಭವಾಗಲಿದ್ದು, ರಸ್ತೆ ಬದಿಯ ಬ್ಲಾಕ್ ಸ್ಪಾಟ್‌ಗಳು, ಕಟ್ಟಡದ ಅವಶೇಷಗಳು ಮರದ ಕೊಂಬೆಗಳು ಮತ್ತು ತೆರವುಗೊಳಿಸದ ವಿದ್ಯುತ್ ಕಂಬ, ಪೈಪುಗಳನ್ನು ಸಾಮೂಹಿಕವಾಗಿ ಸ್ವಚ್ಛಗೊಳಿಸಲಾಗುತ್ತಿದೆ.

ಆಗಸ್ಟ್ 15 ಡೆಡ್‌ಲೈನ್: ಜಿಬಿಎ ಜಾರಿಗೊಳಿಸಿದ ಪ್ರಮುಖ ಸೂಚನೆಗಳು

ನಗರದ ಸೌಂದರ್ಯ ಹಾಗೂ ಸಾರ್ವಜನಿಕ ಆರೋಗ್ಯಕ್ಕೆ ಧಕ್ಕೆ ತರುತ್ತಿರುವ ಖಾಲಿ ಸೈಟ್‌ಗಳ ಮಾಲೀಕರಿಗೆ ಜಿಬಿಎ ಮುಖ್ಯ ಆಯುಕ್ತ ಎಂ. ಮಹೇಶ್ವರ ರಾವ್ ಅವರು ಕಟ್ಟುನಿಟ್ಟಿನ ಸೂಚನೆಗಳನ್ನು ರವಾನಿಸಿದ್ದಾರೆ:

ಸ್ವಯಂ ಸ್ವಚ್ಛತೆಗೆ ಅವಕಾಶ: ಖಾಲಿ ನಿವೇಶನ ಹೊಂದಿರುವ ಮಾಲೀಕರು ತಮ್ಮ ಜಾಗದಲ್ಲಿ ಶೇಖರಣೆಯಾಗಿರುವ ತ್ಯಾಜ್ಯವನ್ನು ಆಗಸ್ಟ್ 15ರ ಒಳಗಾಗಿ ಸ್ವತಃ ವೆಚ್ಚದಲ್ಲಿ ಸ್ವಚ್ಛಗೊಳಿಸಬೇಕು.

ಆಸ್ತಿ ತೆರಿಗೆಯೊಂದಿಗೆ ವೆಚ್ಚ ವಸೂಲಿ: ಒಂದು ವೇಳೆ ಆಗಸ್ಟ್ 15ರೊಳಗೆ ಮಾಲೀಕರು ಸೈಟ್ ಕ್ಲೀನ್ ಮಾಡದಿದ್ದರೆ, ನಗರಪಾಲಿಕೆಯೇ ತ್ಯಾಜ್ಯ ತೆರವುಗೊಳಿಸಲಿದೆ. ಅದಕ್ಕೆ ತಗುಲುವ ವೆಚ್ಚವನ್ನು ನಿವೇಶನದ ವಿಸ್ತೀರ್ಣ ಮತ್ತು ಕಸದ ಪ್ರಮಾಣ ಆಧರಿಸಿ, ಘನತ್ಯಾಜ್ಯ ನಿರ್ವಹಣಾ ಉಪವಿಧಿಗಳು-2020 (ಉಪವಿಧಿ 18(1)(ಡಿ)(ii)) ಹಾಗೂ ಗ್ರೇಟರ್ ಬೆಂಗಳೂರು ಆಡಳಿತ ಅಧಿನಿಯಮ 2024 (ಕಲಂ 285(2)) ರನ್ವಯ ಆಸ್ತಿ ತೆರಿಗೆಯೊಂದಿಗೆ ಬಾಕಿ ಎಂದು ಸೇರಿಸಿ ವಸೂಲಿ ಮಾಡಲಾಗುವುದು.

ಭೂಕಂದಾಯ ಕಾಯ್ದೆ ಪ್ರಯೋಗ: ತೆರಿಗೆ ಬಾಕಿ ಉಳಿಸಿಕೊಂಡರೆ ಕರ್ನಾಟಕ ಭೂಕಂದಾಯ ಕಾಯ್ದೆ 1964 ರ ಪ್ರಕಾರ ಕಠಿಣ ವಸೂಲಾತಿ ಕ್ರಮ ಕೈಗೊಳ್ಳಲಾಗುತ್ತದೆ.

ಕಸ ಹಾಕಿದರೆ ದಂಡದ ಪ್ರಮಾಣ ಎಷ್ಟು?

ಸ್ವಚ್ಛತೆ ಕಾಪಾಡದ ಹಾಗೂ ಅನಧಿಕೃತವಾಗಿ ಕಸ ಸುರಿಯಲು ಬಿಡುವ ಸೈಟ್ ಮಾಲೀಕರಿಗೆ ಭಾರಿ ಮೊತ್ತದ ದಂಡ ನಿಗದಿಪಡಿಸಲಾಗಿದೆ:

ಮೊದಲ ಬಾರಿಯ ಉಲ್ಲಂಘನೆಗೆ: ₹25,000 ದಂಡ.

ನಂತರದ ಸತತ ಉಲ್ಲಂಘನೆಗಳಿಗೆ: ₹50,000 ದಿಂದ ₹1,00,000 ವರೆಗೆ ದಂಡ.

ಕಸ ಬಿದ್ದಿರುವ ಸೈಟ್ ಕಂಡರೆ ವಾಟ್ಸಾಪ್ ಮಾಡಿ: ಸಾರ್ವಜನಿಕರಿಗೆ ದೂರು ನೀಡಲು ಅವಕಾಶ

ನಿಮ್ಮ ಮನೆ ಅಕ್ಕಪಕ್ಕದ ಖಾಲಿ ಸೈಟ್‌ಗಳಲ್ಲಿ ಕಸ ತುಂಬಿ ದುರ್ನಾತ ಬೀರುತ್ತಿದ್ದರೆ ಅಥವಾ ಡೆಬ್ರಿಸ್ ಹಾಕಿದ್ದರೆ ಸಾರ್ವಜನಿಕರು ನೇರವಾಗಿ ಜಿಬಿಎಗೆ ದೂರು ನೀಡಬಹುದು.

ಖಾಲಿ ನಿವೇಶನದ ಛಾಯಚಿತ್ರ (Photo) ಹಾಗೂ GPS Co-ordinates (ಲೊಕೇಶನ್) ನೊಂದಿಗೆ 91-9448197197 ವಾಟ್ಸಾಪ್ ಸಂಖ್ಯೆಗೆ ದೂರು ಕಳುಹಿಸಬಹುದು.

ಗೌಪ್ಯತೆ ಭರವಸೆ: ದೂರು ನೀಡುವ ಸಾರ್ವಜನಿಕರ ಹೆಸರು ಹಾಗೂ ಮಾಹಿತಿಯನ್ನು ಅಧಿಕಾರಿಗಳು ಸಂಪೂರ್ಣವಾಗಿ ಗೌಪ್ಯವಾಗಿಡಲಿದ್ದಾರೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular