ಲಕ್ನೋ: ಎರಡೂವರೆ ವರ್ಷದ ತನ್ನ ಮಗಳ ಮೇಲೆ ತಂದೆಯೊಬ್ಬ ಮಾರಣಾಮ್ತಿಕವಾಗಿ ಹಲ್ಲೆ ನಡೆಸಿ, ರಸ್ತೆ ಬದಿಯ ಚರಂಡಿಗೆ ತಳ್ಳಿ ಕೊಲ್ಲಲು ಯತ್ನಿಸಿದ ಘಟನೆ ಉತ್ತರ ಪ್ರದೇಶದಲಿ ನಡೆದಿದೆ.
ಆರೋಪಿಯನ್ನು ಮೋನು ಅಲಿಯಾಸ್ ಯೋಗೇಂದ್ರ ಸಿಂಗ್ (50) ಎಂದು ಗುರುತಿಸಲಾಗಿದೆ. ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಪೊಲೀಸರು ಕೂಡಲೇ ಕಾರ್ಯಪ್ರವೃತ್ತರಾಗಿ ಆರೋಪಿಯನ್ನು ಬಂಧಿಸಿದ್ದಾರೆ.
ಮೇ 30 ರಂದು ಮಧ್ಯಾಹ್ನ 2.30 ರ ಸುಮಾರಿಗೆ ವ್ಯಕ್ತಿ ತನ್ನ ಮಗಳ ಮೇಲೆ ಹಲ್ಲೆ ನಡೆಸಿ ಚರಂಡಿಗೆ ನೂಕಿದ್ದಾನೆ. ಮಗುವನ್ನು ಕಾಲಿನಿಂದ ಒದ್ದು, ಕೈಯಿಂದ ಗುದ್ದುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ. ಅಷ್ಟೇ ಅಲ್ಲದೆ, ಪ್ರಾಣಭಯದಿಂದ ಕಿರುಚುತ್ತಿದ್ದ ಮಗುವನ್ನು ಪದೇ ಪದೇ ರಸ್ತೆ ಬದಿಯ ಚರಂಡಿಗೆ ಎಸೆದು, ಮುಳುಗಿಸಿ ಕೊಲ್ಲಲು ಯತ್ನಿಸುತ್ತಿರುವುದು ಬೆಳಕಿಗೆ ಬಂದಿದೆ.
ಮಗುವಿನ ಕಿರುಚಾಟ ಕೇಳಿ ಓಡಿಬಂದ ಸ್ಥಳೀಯ ನಿವಾಸಿಗಳು ತಕ್ಷಣವೇ ಮಧ್ಯಪ್ರವೇಶಿಸಿ ಆತನ ಕೈಯಿಂದ ಮಗುವನ್ನು ರಕ್ಷಿಸಿದ್ದಾರೆ. ಈ ವೇಳೆ ಆರೋಪಿ ಆಕ್ರಮಣಕಾರಿಯಾಗಿ ವರ್ತಿಸಿ ಹತ್ತಿರದ ಮನೆಯ ಬಾಗಿಲನ್ನು ಬಲವಂತವಾಗಿ ಮುರಿಯಲು ಯತ್ನಿಸಿ ಸಾರ್ವಜನಿಕರಲ್ಲಿ ಭಯ ಹುಟ್ಟಿಸಿದ್ದ.
ವಾಟ್ಸಾಪ್ ಗ್ರೂಪ್‌ಗಳಲ್ಲಿ ಈ ವಿಡಿಯೋ ಹರಿದಾಡುತ್ತಿದ್ದಂತೆ ಸುಲ್ತಾನಪುರ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದರು. ವಿಡಿಯೋ ಸಾಕ್ಷ್ಯ ಹಾಗೂ ಸ್ಥಳೀಯರ ಹೇಳಿಕೆಗಳ ಆಧಾರದ ಮೇಲೆ ಆರೋಪಿ ಯೋಗೇಂದ್ರ ಸಿಂಗ್ ವಿರುದ್ಧ ಕಠಿಣ ಕಾನೂನು ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ, ಆತನನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಧೀಶರು ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದ್ದಾರೆ. ಸದ್ಯ ಮಗು ಸುರಕ್ಷಿತವಾಗಿದ್ದು, ಪೊಲೀಸರು ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರೆಸಿದ್ದಾರೆ.

