ಕಾರವಾರ: ಈಜಲು ಹೋಗಿದ್ದ ಇಬ್ಬರು ಯುವಕರು ನೀರಿನಲ್ಲಿ ಮುಳುಗಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಉಂಚಳ್ಳಿ ಸಮೀಪದ ಮಾಸ್ತಿಜಡ್ಡಿ ಗ್ರಾಮದಲ್ಲಿ ನಡೆದಿದೆ.
ಮಾಸ್ತಿಜಡ್ಡಿ ಗ್ರಾಮದಲ್ಲಿನ ಹೊಳೆಯಲ್ಲಿ ಈಜಲು ಹೋಗಿ ಈ ದುರಂತ ಸಂಭವಿಸಿದೆ. ಮಾಸ್ತಿಜಡ್ಡಿ ಗ್ರಾಮದ ಮದನ್ ನಾಯ್ಕ (17) ಹಾಗೂ ಹೊನ್ನಾವರದ ಲೋಹಿತ್ ನಾಯ್ಕ (19) ಮೃತ ದುರ್ದೈವಿಗಳು.
ಹಳ್ಳಕ್ಕೆ ಕಟ್ಟಿದ್ದ ಬಾಂದಾರದಲ್ಲಿ ಈಜಲು ತೆರಳಿದ್ದ ವೇಳೆ 15 ಅಡಿ ಆಳದ ಬಾಂದಿನ ನೀರಿನಲ್ಲಿ ಮುಳುಗಿ ಇಬ್ಬರೂ ಸಾವನ್ನಪ್ಪಿದ್ದಾರೆ. ಇನ್ನು ಶವ ಶೋಧ ನಡೆಸಿದ ಶ್ರೀ ಮಾರಿಕಾಂಬ ರೆಸ್ಕ್ಯೂ ಟೀಮ್‌ನ ಗೋಪಾಲ ಗೌಡ ನೇತೃತ್ವದ ತಂಡ ಶವಗಳನ್ನು ನೀರಿನಿಂದ ಮೇಲೆತ್ತಿದ್ದಾರೆ
ಘಟನಾ ಸ್ಥಳಕ್ಕೆ ಬನವಾಸಿ ಠಾಣೆ ಪಿಎಸ್‌ಐ ಮಹಾಂತಪ್ಪ ಕುಂಬಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಶಿರಸಿಗೆ ರವಾನೆ ಮಾಡಲಾಗಿದೆ. ಬನವಾಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

