ವಾಷಿಂಗ್ಟನ್: ಅಮೆರಿಕದಲ್ಲಿ H-1B ವೀಸಾ ಹೊಂದಿರುವವರ ಸಂಗಾತಿಗಳಿಗೆ ನೀಡಲಾಗುತ್ತಿರುವ H-4 EAD ಉದ್ಯೋಗ ಅನುಮತಿಗೆ ಕತ್ತರಿ ಹಾಕುವ ಪ್ರಸ್ತಾವನೆ ಟ್ರಂಪ್ ಆಡಳಿತದಿಂದ ಮುಂದಾಗಿದೆ. ಈ ನಿಯಮ ಜಾರಿಗೆ ಬಂದರೆ, ಸಾವಿರಾರು H-4 ವೀಸಾ ಹೊಂದಿರುವವರು ಅಮೆರಿಕದಲ್ಲಿ ಕಾನೂನುಬದ್ಧವಾಗಿ ಕೆಲಸ ಮಾಡುವ ಅವಕಾಶ ಕಳೆದುಕೊಳ್ಳುವ ಸಾಧ್ಯತೆಯಿದೆ.
H-1B ವೀಸಾ ಹೊಂದಿರುವವರ ಅರ್ಹ ಸಂಗಾತಿಗಳಿಗೆ ಕಳೆದ 10 ವರ್ಷಗಳಿಗೂ ಹೆಚ್ಚು ಕಾಲ ಅಮೆರಿಕದಲ್ಲಿ ಕೆಲಸ ಮಾಡಲು H-4 EAD ಅವಕಾಶ ನೀಡುತ್ತಿದೆ. ಇದೀಗ ಈ ನಿಯಮವನ್ನು ಬದಲಾಯಿಸಲು ಅಮೆರಿಕದ ಹೋಮ್‌ಲ್ಯಾಂಡ್ ಸೆಕ್ಯುರಿಟಿ ಇಲಾಖೆ (DHS) ಮುಂದಾಗಿದೆ.
ಭಾರತೀಯರ ಮೇಲೆ ಹೆಚ್ಚು ಪರಿಣಾಮ?
H-4 EAD ಹೊಂದಿರುವವರಲ್ಲಿ ಹೆಚ್ಚಿನವರು ಭಾರತೀಯರಾಗಿರುವುದರಿಂದ, ಹೊಸ ಪ್ರಸ್ತಾವನೆಯ ಪರಿಣಾಮ ಭಾರತೀಯ ಕುಟುಂಬಗಳ ಮೇಲೆ ಹೆಚ್ಚಾಗಿ ಬೀಳಬಹುದು. 2014ರಿಂದ 2017ರ ಅವಧಿಯ H-4 EAD ಅರ್ಜಿಗಳ ಮಾಹಿತಿಯ ಪ್ರಕಾರ, ಅನುಮೋದನೆ ಪಡೆದವರಲ್ಲಿ ಸುಮಾರು ಶೇ.93ರಷ್ಟು ಮಂದಿ ಭಾರತೀಯರು. ಇವರಲ್ಲಿ ಶೇ.94ರಷ್ಟು ಮಹಿಳೆಯರಾಗಿದ್ದರು.
ಈ ಪ್ರಸ್ತಾವನೆಯನ್ನು ಅಮೆರಿಕದ Office of Information and Regulatory Affairs ವ್ಯಾಪ್ತಿಯ Reginfo.govನಲ್ಲಿ ದಾಖಲಿಸಲಾಗಿದೆ. H-4 ಅವಲಂಬಿತ ಸಂಗಾತಿಗಳನ್ನು ಉದ್ಯೋಗ ಅನುಮತಿಗೆ ಅರ್ಹರಾಗಿರುವ ವಲಸಿಗರ ವರ್ಗದಿಂದ ತೆಗೆದುಹಾಕುವ ಉದ್ದೇಶವನ್ನು ಇದರಲ್ಲಿ ತಿಳಿಸಲಾಗಿದೆ.
ತಕ್ಷಣವೇ ಕೆಲಸದ ಅವಕಾಶ ರದ್ದಾಗಲ್ಲ
ಆದರೆ H-4 EAD ಹೊಂದಿರುವವರಿಗೆ ಈಗಲೇ ಉದ್ಯೋಗ ಮಾಡುವ ಅವಕಾಶ ರದ್ದಾಗುವುದಿಲ್ಲ. ಇದು ಸದ್ಯಕ್ಕೆ ಕೇವಲ ಪ್ರಸ್ತಾವನೆಯಾಗಿದೆ.ಇದು ಜಾರಿಗೆ ಬರಬೇಕಾದರೆ DHS ಮೊದಲು Federal Registerನಲ್ಲಿ ಅಧಿಕೃತ ಪ್ರಸ್ತಾವನೆ ಪ್ರಕಟಿಸಬೇಕು. ಬಳಿಕ ಸಾರ್ವಜನಿಕರಿಂದ ಅಭಿಪ್ರಾಯಗಳನ್ನು ಪಡೆಯಬೇಕು. ಈ ಪ್ರಕ್ರಿಯೆ ಪೂರ್ಣಗೊಂಡು ಅಂತಿಮ ನಿಯಮ ಪ್ರಕಟವಾದ ನಂತರವಷ್ಟೇ ಹೊಸ ನಿಯಮ ಜಾರಿಗೆ ಬರಲಿದೆ.ಹೀಗಾಗಿ, ಪ್ರಸ್ತುತ ಮಾನ್ಯವಾದ EAD ಹೊಂದಿರುವ H-4 ವೀಸಾ ಸಂಗಾತಿಗಳು ಈಗಿನ ನಿಯಮದಂತೆ ಕೆಲಸ ಮುಂದುವರಿಸಬಹುದು.
H-4 EAD ನಿಯಮವನ್ನು ರದ್ದುಪಡಿಸುವ ಪ್ರಯತ್ನ ಇದೇ ಮೊದಲಲ್ಲ. 2017ರಲ್ಲಿ ಟ್ರಂಪ್ ಆಡಳಿತದ ಮೊದಲ ಅವಧಿಯಲ್ಲೂ ಇದೇ ರೀತಿಯ ಪ್ರಸ್ತಾವನೆ ಬಂದಿತ್ತು. ಆದರೆ ಅದು ಅಂತಿಮ ನಿಯಮವಾಗಿ ಜಾರಿಗೆ ಬರಲಿಲ್ಲ. 2021ರಲ್ಲಿ ಆ ಪ್ರಸ್ತಾವನೆಯನ್ನು ಹಿಂಪಡೆಯಲಾಗಿತ್ತು.
H-1B ವೀಸಾ ಮೇಲೂ ಬದಲಾವಣೆ
H-4 EAD ಜೊತೆಗೆ H-1B ವೀಸಾ ವ್ಯವಸ್ಥೆಯಲ್ಲೂ ಹಲವು ಬದಲಾವಣೆಗಳನ್ನು ತರಲು ಅಮೆರಿಕ ಆಡಳಿತ ಮುಂದಾಗಿದೆ. ಹೊಸ H-1B ನೇಮಕಾತಿಗಳ ಮೇಲೆ ಭಾರಿ ಶುಲ್ಕ ವಿಧಿಸುವ ಪ್ರಸ್ತಾವನೆ ಹಾಗೂ ಉದ್ಯೋಗ ಕಳೆದುಕೊಂಡ H-1B ವೀಸಾ ಹೊಂದಿರುವವರಿಗೆ ಹೊಸ ಕೆಲಸ ಹುಡುಕಲು ಸಿಗುವ 60 ದಿನಗಳ ಅವಧಿಯಲ್ಲಿ ಬದಲಾವಣೆ ತರುವ ವಿಚಾರವೂ ಚರ್ಚೆಯಲ್ಲಿದೆ.
H-4 ವೀಸಾ ಎಂದರೇನು?
H-4 ವೀಸಾ ಸ್ವತಃ ಉದ್ಯೋಗ ವೀಸಾ ಅಲ್ಲ. H-1B ವೀಸಾ ಹೊಂದಿರುವವರ ಸಂಗಾತಿ ಮತ್ತು ಮಕ್ಕಳಿಗೆ ಅಮೆರಿಕದಲ್ಲಿ ಅವರೊಂದಿಗೆ ವಾಸಿಸಲು ಇದನ್ನು ನೀಡಲಾಗುತ್ತದೆ.
H-4 ವೀಸಾ ಹೊಂದಿರುವ ಸಂಗಾತಿ ಕೆಲಸ ಮಾಡಲು ಪ್ರತ್ಯೇಕ Employment Authorisation Document (EAD) ಅಗತ್ಯವಿದೆ. ಪ್ರಸ್ತುತ ನಿಯಮಗಳ ಪ್ರಕಾರ, ನಿರ್ದಿಷ್ಟ ಅರ್ಹತೆ ಹೊಂದಿರುವ H-4 ಸಂಗಾತಿಗಳಿಗೆ ಮಾತ್ರ ಈ ಉದ್ಯೋಗ ಅನುಮತಿ ಸಿಗುತ್ತದೆ.USCIS ಮಾಹಿತಿಯ ಪ್ರಕಾರ, 2024ರ ಹಣಕಾಸು ವರ್ಷದಲ್ಲಿ ಅನುಮೋದನೆಯಾದ H-1B ಅರ್ಜಿಗಳಲ್ಲಿ ಭಾರತೀಯರ ಪಾಲು ಸುಮಾರು ಶೇ.71ರಷ್ಟಿತ್ತು. ಹೀಗಾಗಿ H-4 EAD ನಿಯಮದಲ್ಲಿ ಬದಲಾವಣೆಯಾದರೆ, ಭಾರತೀಯ H-1B ಕುಟುಂಬಗಳ ಮೇಲೂ ಗಮನಾರ್ಹ ಪರಿಣಾಮ ಬೀರುವ ಸಾಧ್ಯತೆಯಿದೆ.

