ಬೆಂಗಳೂರು: ನಗರದ ಲಾಲ್‌ಬಾಗ್ ಮುಖ್ಯರಸ್ತೆಯಲ್ಲಿರುವ ಐತಿಹಾಸಿಕ ಊರ್ವಶಿ ಥಿಯೇಟರ್ ಇದೀಗ ನೆಲಸಮವಾಗಿದೆ. ಬರೋಬ್ಬರಿ 55 ವರ್ಷಗಳ ಕಾಲ ಬೆಂಗಳೂರಿನ ಸಿನಿಪ್ರೇಮಿಗಳನ್ನು ರಂಜಿಸಿದ್ದ ಈ ಚಿತ್ರಮಂದಿರ ಇನ್ನು ನೆನಪು ಮಾತ್ರವಾಗಿದೆ.
ಹೌದು. 1970ರಲ್ಲಿ ಡಾ. ರಾಜ್‌ಕುಮಾರ್ ಅವರು ಉದ್ಘಾಟಿಸಿದ್ದ ಊರ್ವಶಿ ಥಿಯೇಟರ್‌ನಲ್ಲಿ ಐದು ದಶಕಗಳ ಅವಧಿಯಲ್ಲಿ 5,000ಕ್ಕೂ ಹೆಚ್ಚು ಸಿನಿಮಾಗಳು ಪ್ರದರ್ಶನಗೊಂಡಿವೆ. ಬೆಂಗಳೂರಿನ ಹಲವು ತಲೆಮಾರುಗಳ ಸಿನಿಪ್ರೇಮಿಗಳಿಗೆ ಈ ಚಿತ್ರಮಂದಿರ ವಿಶೇಷ ನೆನಪುಗಳನ್ನು ಹೊಂದಿದೆ.
ಚಿತ್ರಮಂದಿರವು ಅತ್ಯಾಧುನಿಕ ಸೌಂಡ್ ಟೆಕ್ನಾಲಜಿಗೂ ಹೆಸರುವಾಸಿಯಾಗಿತ್ತು. ಆ ಕಾಲದಲ್ಲಿ ಭಾರತದ ಕೇವಲ ಎರಡು ಏಕಪರದೆ ಚಿತ್ರಮಂದಿರಗಳಲ್ಲಿ ಲಭ್ಯವಿದ್ದ ಅತ್ಯಾಧುನಿಕ ಧ್ವನಿ ತಂತ್ರಜ್ಞಾನವನ್ನು ಊರ್ವಶಿ ಥಿಯೇಟರ್ ಹೊಂದಿತ್ತು ಎನ್ನಲಾಗಿದೆ.
ಕಳೆದ ಎಂಟು ವರ್ಷಗಳಿಂದ ಚಿತ್ರಮಂದಿರದ ಗುತ್ತಿಗೆ ವಿಚಾರವಾಗಿ ವಿವಾದ ನಡೆಯುತ್ತಿತ್ತು. ಚಿತ್ರಮಂದಿರವನ್ನು ಗುತ್ತಿಗೆಗೆ ಪಡೆದಿದ್ದ ಬಸಟ್ಟಿ ಶೆಟ್ಟಿ ಅವರ ಲೀಸ್ ಅವಧಿ 2018ರ ಏಪ್ರಿಲ್‌ನಲ್ಲೇ ಮುಕ್ತಾಯಗೊಂಡಿತ್ತು. ಬಳಿಕ ಗುತ್ತಿಗೆ ಮುಂದುವರಿದಿರುವ ಕುರಿತು ವಿವಾದ ಉಂಟಾಗಿತ್ತು.
ಇದೀಗ ಸುಪ್ರೀಂ ಕೋರ್ಟ್‌ನ ಆದೇಶದ ಹಿನ್ನೆಲೆಯಲ್ಲಿ ಭೂಮಾಲೀಕರು ಪೊಲೀಸರ ಸಮ್ಮುಖದಲ್ಲಿ ಸ್ಥಳವನ್ನು ವಾಪಸ್ ಪಡೆದಿದ್ದು, ಚಿತ್ರಮಂದಿರವನ್ನು ನೆಲಸಮಗೊಳಿಸುವ ಕಾರ್ಯ ನಡೆದಿದೆ. ಇದರೊಂದಿಗೆ ಬೆಂಗಳೂರಿನ ಸಿನಿ ಇತಿಹಾಸದಲ್ಲಿ ಪ್ರಮುಖ ಸ್ಥಾನ ಪಡೆದಿದ್ದ ಊರ್ವಶಿ ಥಿಯೇಟರ್‌ನ ಅಧ್ಯಾಯ ಅಂತ್ಯಗೊಂಡಿದೆ.
ತಾಂತ್ರಿಕವಾಗಿಯೂ ಊರ್ವಶಿ ಥಿಯೇಟರ್ ವಿಶೇಷತೆ ಹೊಂದಿತ್ತು. ಅತ್ಯಾಧುನಿಕ 4K ಪ್ರೊಜೆಕ್ಷನ್, 3D ಮತ್ತು ಮೆಯರ್ ಸೌಂಡ್ ತಂತ್ರಜ್ಞಾನ ಸೇರಿದಂತೆ ಆಧುನಿಕ ಸೌಲಭ್ಯಗಳನ್ನು ಹೊಂದಿದ್ದ ಚಿತ್ರಮಂದಿರವಾಗಿ ಇದು ಗುರುತಿಸಿಕೊಂಡಿತ್ತು. ಶಿವರಾಜ್‌ಕುಮಾರ್ ಅಭಿನಯದ ‘AK 47’ ಸೇರಿದಂತೆ ಹಲವು ಯಶಸ್ವಿ ಸಿನಿಮಾಗಳು ಇಲ್ಲಿ ಭರ್ಜರಿ ಪ್ರದರ್ಶನ ಕಂಡಿದ್ದವು.
ಟಾಕ್ಸಿಕ್’ ಪ್ರದರ್ಶನಕ್ಕೂ ಮುನ್ನವೇ ಅಂತ್ಯ
ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾವನ್ನು ಊರ್ವಶಿ ಥಿಯೇಟರ್‌ನಲ್ಲಿ ಅದ್ದೂರಿಯಾಗಿ ವೀಕ್ಷಿಸುವ ನಿರೀಕ್ಷೆಯಲ್ಲಿದ್ದ ಸಿನಿಪ್ರೇಮಿಗಳಿಗೆ ಈ ಬೆಳವಣಿಗೆ ನಿರಾಸೆ ಮೂಡಿಸಿದೆ. ಇತ್ತೀಚಿನವರೆಗೂ ಚಿತ್ರಮಂದಿರದ ಶೋ ಮಾಹಿತಿಯೂ ಲಭ್ಯವಿದ್ದ ಹಿನ್ನೆಲೆಯಲ್ಲಿ, ಇದೀಗ ಥಿಯೇಟರ್ ನೆಲಸಮಗೊಳ್ಳುತ್ತಿರುವುದು ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ.

