ಜೈಪುರದಲ್ಲಿ ನಡೆದ ಮಿಸ್ ಯೂನಿವರ್ಸ್ ಇಂಡಿಯಾ 2026 ಸೌಂದರ್ಯ ಸ್ಪರ್ಧೆಯ ಫೈನಲ್ ಆವೃತ್ತಿಯಲ್ಲಿ ನಟಿ ಹಾಗೂ ಮಾಜಿ ಸೌಂದರ್ಯ ರಾಣಿ ಉರ್ವಶಿ ರೌಟೇಲಾ ತಮ್ಮ ವಿಭಿನ್ನ ಉಡುಪಿನ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಈ ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಭಾಗವಹಿಸಿದ್ದ ಅವರು, ಭಾರತದ ರಾಷ್ಟ್ರಧ್ವಜದ ಬಣ್ಣಗಳಿಂದ ಪ್ರೇರಿತವಾದ ವಿಶೇಷ ವಿನ್ಯಾಸದ ತ್ರಿವರ್ಣ ಉಡುಪು ಧರಿಸಿ ಮೈದಾನಕ್ಕೆ ಆಗಮಿಸಿದ್ದರು.
ಕೇಸರಿ, ಬಿಳಿ ಮತ್ತು ಹಸಿರು ಬಣ್ಣಗಳ ಸಂಯೋಜನೆ ಹಾಗೂ ಅಶೋಕ ಚಕ್ರದ ನೀಲಿ ಬಣ್ಣದ ವಿನ್ಯಾಸ ಹೊಂದಿದ್ದ ಈ ಡ್ರೆಸ್ ಧರಿಸಿ ಮಾತನಾಡಿದ ಉರ್ವಶಿ, ನಾನು ಎಂದರೆ ಭಾರತ ಎಂಬ ಭಾವನೆ ನನ್ನಲ್ಲಿದೆ, ಹೀಗಾಗಿ ಈ ರೀತಿಯ ರಾಷ್ಟ್ರೀಯತೆಯ ಸ್ಪರ್ಶವಿರುವ ಉಡುಪು ಆಯ್ಕೆ ಮಾಡಿಕೊಂಡಿದ್ದೇನೆ ಎಂದು ಹೇಳಿದರು. ಸೋಶಿಯಲ್ ಮೀಡಿಯಾದಲ್ಲಿ ಉರ್ವಶಿ ಅವರ ಈ ಲುಕ್ ಬಗ್ಗೆ ಪರ-ವಿರೋಧ ಚರ್ಚೆಗಳು ನಡೆಯುತ್ತಿದ್ದು, ಕೆಲವರು ಇದನ್ನು ದೇಶಪ್ರೇಮದ ಸಂಕೇತ ಎಂದು ಹೊಗಳಿದರೆ, ಇನ್ನು ಕೆಲವರು ಟೀಕೆ ವ್ಯಕ್ತಪಡಿಸಿದ್ದಾರೆ.
ಇದೇ ವೇದಿಕೆಯಲ್ಲಿ ನಟಿ ಸುಶ್ಮಿತಾ ಸೇನ್ ಅವರನ್ನು ನೆನೆದು ಉರ್ವಶಿ ರೌಟೇಲಾ ಭಾವನಾತ್ಮಕರಾದರು. 2015 ರಲ್ಲಿ ತಾವು ಮಿಸ್ ಯೂನಿವರ್ಸ್ ಇಂಡಿಯಾ ಪಟ್ಟ ಗೆದ್ದಾಗ ಸುಶ್ಮಿತಾ ಸೇನ್ ತಮಗೆ ಕಿರೀಟ ತೊಡಿಸಿದ್ದನ್ನು ಸ್ಮರಿಸಿದ ಅವರು, ಸುಶ್ಮಿತಾ ನನ್ನ ಮೊದಲ ಗುರು. ಅವರ ಸಮ್ಮುಖದಲ್ಲೇ ಮತ್ತೆ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ನನಗೆ ಅತ್ಯಂತ ಸಂತಸ ತಂದಿದೆ ಎಂದು ಹೇಳಿದರು.
ಇನ್ನು ಈ ಬಾರಿಯ ಮಿಸ್ ಯೂನಿವರ್ಸ್ ಇಂಡಿಯಾ 2026 ಕಿರೀಟವನ್ನು ಕೇರಳ ಮೂಲದ ಕಜಿಯಾ ಲಿಜ್ ಮೆಜೋ ತಮ್ಮದಾಗಿಸಿಕೊಂಡಿದ್ದಾರೆ.

