ಗದಗ: ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಸಿಂಗಟಾಲೂರು ಗ್ರಾಮದಲ್ಲಿ ದಲಿತರಿಗೆ ಕ್ಷೌರ ಮಾಡಲು ಸವರ್ಣೀಯರು ನಿರಾಕರಿಸಿದ ಹಿನ್ನೆಲೆಯಲ್ಲಿ ಸರ್ಕಾರವೇ ಕ್ಷೌರದ ಅಂಗಡಿ ತೆರೆದಿದೆ. ವಿವಿಧ ಸಂಘಟನೆಗಳ ನೆರವಿನೊಂದಿಗೆ ಕ್ಷೌರದ ಅಂಗಡಿ ತೆರೆಯಲಾಗಿದೆ.
ಕ್ಷೌರ ನಿರಾಕರಣೆ ಹಿನ್ನೆಲೆ ತಹಶೀಲ್ದಾರ್ ನೋಟಿಸ್ ನೀಡಿ ಸಭೆ ನಡೆಸಿದರೂ ಪ್ರಯೋಜನವಾಗದ ಕಾರಣ ಕೊನೆಗೆ ಸಮಾಜ ಕಲ್ಯಾಣ ಇಲಾಖೆ, ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಪೊಲೀಸ್ ಇಲಾಖೆ, ದಲಿತ ಪರ ಸಂಘಟನೆ ಒಕ್ಕೂಟ, ಶಿವಶರಣ ಹಡಪದ ಅಪ್ಪಣ್ಣ ಸಮಾಜದ ಸಹಯೋಗದಲ್ಲಿ ಸಿಂಗಟಾಲೂರು ಗ್ರಾಮದಲ್ಲಿ ಗುರುವಾರ ಕ್ಷೌರದ ಅಂಗಡಿ ಪ್ರಾರಂಭಿಸಲಾಗಿದೆ.
ಸಿಂಗಟಾಲೂರು ಗ್ರಾಮದ ವೀರಭದ್ರೇಶ್ವರ ಸ್ವಾಮಿ ದೇವರು ಪ್ರತಿವರ್ಷ ಮಹಾನವಮಿ ಸಂದರ್ಭ ಹಡಪದ ಸಮಾಜದವರ ಮನೆಗೆ ಬರುತ್ತದೆ. ಆಗ ಹಡಪದ ಕುಟುಂಬದವರು ವೀರಭದ್ರ ದೇವರಿಗೆ ಪೂಜೆ ಸಲ್ಲಿಸುತ್ತಾರೆ. ಹೀಗಾಗಿ ಆ ಸಮಾಜದವರ ಅಂಗಡಿಯಲ್ಲಿ ದಲಿತರಿಗೆ ಕ್ಷೌರ ಮಾಡುವುದನ್ನು ನಿರಾಕರಿಸಿದ್ದರು. ಈ ರೀತಿ ಮಾಡುವುದು ತಪ್ಪು ಎಂದು ಅಧಿಕಾರಿಗಳು ಅನೇಕ ಬಾರಿ ತಿಳಿಸಿದರೂ ಅಂಗಡಿ ಬಂದ್ ಮಾಡಿದ್ದರು.
ಶಿವಶರಣರ ಹಡಪದ ಅಪ್ಪಣ್ಣ ಸಮಾಜದ ರಾಜ್ಯಾಧ್ಯಕ್ಷ ದೇವು ಹಡಪದ ಸಹಕಾರ ನೀಡಿ ಕ್ಷೌರ ಮಾಡಲು ತಮ್ಮ ಸಹೋದರರನ್ನೇ ಗ್ರಾಮಕ್ಕೆ ಕಳುಹಿಸಲು ಒಪ್ಪಿಕೊಂಡಿದ್ದಾರೆ. ಹೀಗಾಗಿ ಸರ್ಕಾರವೇ ಗ್ರಾಮದಲ್ಲಿ ಕ್ಷೌರದ ಅಂಗಡಿ ತೆರೆದಿದೆ ಎಂದು ಹೇಳಲಾಗಿದೆ.

