ಗೋರಖ್ ಪುರ: ಉತ್ತರ ಪ್ರದೇಶದ ಸಂತ ಕಬೀರ್ ನಗರ ಜಿಲ್ಲೆಯ ತಹಸಿಲ್ ಕಾಂಪೌಂಡ್ ನಲ್ಲಿ 39 ವರ್ಷದ ಟ್ರಕ್ ಚಾಲಕನೊಬ್ಬ ತನ್ನ 7 ವರ್ಷದ ಮಗಳ ಮುಂದೆಯೇ ತನ್ನ ಪತ್ನಿಯನ್ನು ಮಾರಣಾಂತಿಕವಾಗಿ ಇರಿದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಚ್ಛೇದನಕ್ಕಾಗಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದಾಗ ಬೆಳಿಗ್ಗೆ 11 ಗಂಟೆ ಸುಮಾರಿಗೆ ಈ ದಾಳಿ ನಡೆದಿದೆ ಎಂದು ಅವರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಬೆಲ್ವಾ ಗ್ರಾಮದ ನಿವಾಸಿ ಸಂತೋಷ್ ಯಾದವ್ ತನ್ನ 35 ವರ್ಷದ ಪತ್ನಿ ಲಕ್ಷ್ಮಿಯ ಮುಖ ಮತ್ತು ಹೊಟ್ಟೆಗೆ ಹಲವು ಬಾರಿ ಇರಿದಿದ್ದಾನೆ. ಲಕ್ಷ್ಮಿ ಸ್ಥಳದಲ್ಲೇ ಕುಸಿದು ಬಿದ್ದಿದ್ದು, ಮೆಹದವಾಲ್ ನಲ್ಲಿರುವ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು. ನಂತರ ಆಕೆಯನ್ನು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಅವರು ಸಾವನ್ನಪ್ಪಿದ್ದಾರೆ.
ಅಪ್ಪ ಚಾಕುವನ್ನು ಮರೆಮಾಡಿದ್ದರು. ಮೊದಲು ಅಮ್ಮನ ಮುಖಕ್ಕೆ ಮತ್ತು ನಂತರ ಹೊಟ್ಟೆಗೆ ಇರಿದಿದ್ದಾನೆ ಎಂದು ದಂಪತಿಯ ಮಗಳು ಪೊಲೀಸರಿಗೆ ತಿಳಿಸಿದ್ದಾಳೆ.
ದುಧಾರಾದ ಧವಾರಿಯಾ ಗ್ರಾಮದ ನಿವಾಸಿಯಾದ ಲಕ್ಷ್ಮಿ, ಸುಮಾರು ಆರು ವರ್ಷಗಳ ಹಿಂದೆ ಕೌಟುಂಬಿಕ ಹಿಂಸಾಚಾರದ ಆರೋಪದ ಮೇಲೆ ಸಂತೋಷ್ ನಿಂದ ಬೇರ್ಪಟ್ಟು ತನ್ನ ಮಗಳೊಂದಿಗೆ ತನ್ನ ಪೋಷಕರ ಮನೆಯಲ್ಲಿ ವಾಸಿಸುತ್ತಿದ್ದರು.
ದಾಳಿಯ ನಂತರ ಸಂತೋಷ್ ಪರಾರಿಯಾಗಲು ಪ್ರಯತ್ನಿಸಿದಾಗ, ಸಾರ್ವಜನಿಕರು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದರು. ತಹಸಿಲ್‌ನಲ್ಲಿದ್ದ ಲಕ್ಷ್ಮಿಯ ಕಿರಿಯ ಸಹೋದರ, ಸಂತೋಷ್ ತನ್ನ ಸಹೋದರಿಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ ಎಂದು ಆರೋಪಿಸಿದ್ದಾರೆ.
ಮೆಹದವಾಲ್ ಸ್ಟೇಷನ್ ಹೌಸ್ ಅಧಿಕಾರಿ(SHO) ಸತೀಶ್ ಕುಮಾರ್ ಸಿಂಗ್ ಅವರು ಸಂತೋಷ್ ಯಾದವ್ ಬಂಧಿಸಿದ್ದು, ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.