“ಕಳೆದ 11 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಮಾರ್ಚ್ ತಿಂಗಳಲ್ಲಿ ಅನಿರೀಕ್ಷಿತವಾಗಿ ಆಲಿಕಲ್ಲು ಮಳೆ ಆಗಿದ್ದು, ಇದರಿಂದ ಕಲಘಟಗಿ, ಹುಬ್ಬಳ್ಳಿ, ನವಲಗುಂದ ತಾಲೂಕಿನಲ್ಲಿ ಜಾನುವಾರು, ಮನೆ ಮತ್ತು ಬೆಳೆ ಹಾನಿ ಆಗಿರುವ ವರದಿಯಾಗಿದೆ. ಸಂಬಂಧಿಸಿದ ತಾಲೂಕುಗಳ ಅಧಿಕಾರಿಗಳು ಪಾರದರ್ಶಕವಾಗಿ ಜಂಟಿ ಸಮೀಕ್ಷೆ ಮಾಡಿ, ವರದಿ ಸಲ್ಲಿಸಬೇಕು” ಎಂದು ಧಾರವಾಡ ಜಿಲ್ಲಾಧಿಕಾರಿ ಸ್ನೇಹಲ್ ಆರ್. ಸೂಚಿಸಿದರು.
ಧಾರವಾಡ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದಡಿ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಖುದ್ದಾಗಿ ಹಾಗೂ ಎಲ್ಲಾ ತಾಲೂಕುಗಳ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ತುರ್ತು ಸಭೆ ನಡೆಸಿದರು.
“ಕಳೆದ 2015ರ ಮಾರ್ಚ್‍ದಲ್ಲಿ ಅನಿರೀಕ್ಷಿತ ಮಳೆಯಾಗಿತ್ತು. ಈಗ 11 ವರ್ಷಗಳ ನಂತರ ಮಾರ್ಚ್ ತಿಂಗಳಲ್ಲಿ ಮಳೆ ಆಗಿದೆ. ಆಲಿಕಲ್ಲು ಮಳೆಯಿಂದ ವಿಶೇಷವಾಗಿ ಕಲಘಟಗಿ ತಾಲೂಕಿನ ಮಾಚಾಪುರ ಗ್ರಾಮ ಸುತ್ತಮುತ್ತ ಸುಮಾರು 5 ರಿಂದ 8 ಕಿ.ಮೀ ವ್ಯಾಪ್ತಿಯಲ್ಲಿ ಮನೆ, ಜಾನುವಾರ ಮತ್ತು ಬೆಳೆ ಹಾನಿ ಆಗಿರುವ ವರದಿಯಾಗಿದೆ. ಈಗಾಗಲೇ ಸ್ಥಳೀಯ ಅಧಿಕಾರಿಗಳಿಗೆ ನೀಡಿದ ಸೂಚನೆಯಂತೆ ಸ್ಥಳ ಭೇಟಿ ನೀಡಿ ಅಧಿಕಾರಿಗಳು ಹಾನಿ ಪ್ರದೇಶ ಅಂದಾಜಿಸಿದ್ದಾರೆ” ಎಂದರು.
“ಬೆಳೆ ಹಾನಿ ಹಾಗೂ ಮನೆ ಹಾನಿ ಕುರಿತು ಕಂದಾಯ, ಕೃಷಿ, ತೋಟಗಾರಿಕೆ, ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳು ಜಂಟಿ ಸಮೀಕ್ಷೆ ಕೈಗೊಳ್ಳಬೇಕು. ರೈತರಿಂದ ಅಥವಾ ಫಲಾನುಭವಿಗಳಿಂದ ಯಾವುದೇ ರೀತಿಯಲ್ಲಿ ದೂರು ಬರದಂತೆ ಎಚ್ಚರಿಕೆಯಿಂದ, ಪಾರದರ್ಶಕವಾಗಿ ಸಮೀಕ್ಷೆ ಕೈಗೊಳ್ಳಬೇಕು” ಎಂದು ನಿರ್ದೇಶನ ನೀಡಿದರು.
“ಕಲಘಟಗಿಯಲ್ಲಿ ಅಂದಾಜು 205 ಎಕರೆ ಮಾವು ಸೇರಿದಂತೆ ಸುಮಾರು 450 ಎಕರೆ ಪ್ರದೇಶದಲ್ಲಿ ಮಾವು, ಬಾಳೆ, ತರಕಾರಿ ಬೆಳೆಗಳಿಗೆ ಹಾನಿ ಆಗಿದೆ ಎಂದು ಕಲಘಟಗಿ ತಹಶೀಲ್ದಾರ್ ಮಾಹಿತಿ ನೀಡಿದ್ದಾರೆ. ಆದಷ್ಟು ಬೇಗ ಜಂಟಿ ಸಮೀಕ್ಷೆ ಮಾಡಿ, ನಿಖರವಾದ ವರದಿ ಸಲ್ಲಿಸಬೇಕು. ಹವಾಮಾನ ಆಧಾರಿತ ಬೆಳೆ ವಿಮೆ ಮಾಡಿರುವ ರೈತರಿಗೆ ಪರಿಹಾರ ದೊರಕುವಂತೆ ಮಾಡಲು ವಿಮಾ ಕಂಪನಿ ಪ್ರತಿನಿಧಿಗಳಿಗೆ ಸೂಚನೆ ನೀಡಬೇಕೆಂದು” ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.
“ಮಾರ್ಚ್ 20 ಮತ್ತು 21 ರಂದು ಸಹ ಜಿಲ್ಲೆಯಲ್ಲಿ ಮಳೆ, ಗುಡುಗು, ಸಿಡಿಲು, ಮಿಂಚು ಬರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಎಲ್ಲ ಹಂತದ ಅಧಿಕಾರಿಗಳು ಈ ಕುರಿತು ಮುನ್ನೆಚ್ಚರಿಕೆ ವಹಿಸಬೇಕು” ಎಂದರು.
“ಜಿಲ್ಲಾ ಮಟ್ಟ, ತಾಲೂಕು ಮಟ್ಟ ಹಾಗೂ ಹೋಬಳಿ ಮತ್ತು ಗ್ರಾಮ ಮಟ್ಟದ ಎಲ್ಲ ಹಂತದ ವಿವಿಧ ಇಲಾಖೆಗಳ ಸರಕಾರಿ ಅಧಿಕಾರಿ, ಸಿಬ್ಬಂದಿಗಳು ತಮ್ಮ ಮೊಬೈಲ್ ಬಂದ್ ಮಾಡಬಾರದು. ವಿಶೇಷವಾಗಿ ರಾತ್ರಿ ವೇಳೆ ಸ್ವಿಚ್ ಆಫ್ ಮಾಡಬಾರದು. ಅಕಾಲಿಕ ಮಳೆ ಅಥವಾ ಇತರ ತೊಂದರೆಗಳಿಗಾಗಿ ಸಾರ್ವಜನಿಕರು ತುರ್ತಾಗಿ ಸಂಪರ್ಕಿಸುವ ಸಾಧ್ಯತೆ ಇರುತ್ತದೆ” ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
“2026 ಮಾರ್ಚ್ ತಿಂಗಳಲ್ಲಿ ಅಕಾಲಿಕ ಮಳೆ ಹಾಗೂ ಸಿಡಿಲು ಬಡಿದಿದ್ದರಿಂದ ಧಾರವಾಡ ತಾಲೂಕಿನ ಹಳೆತೆಗೂರು ಗ್ರಾಮದಲ್ಲಿ ಒಂದು ಎಮ್ಮೆ, ನವಲಗುಂದ ತಾಲೂಕಿನ ದಾಟ್ನಾಳ ಗ್ರಾಮದಲ್ಲಿ ಒಂದು ಎಮ್ಮೆ, ಹುಬ್ಬಳ್ಳಿ ತಾಲೂಕಿನ ಗೋಕುಲ್ ಗ್ರಾಮದಲ್ಲಿ ಒಂದು ಕುದುರೆ, ಕಲಘಟಗಿ ತಾಲೂಕಿನ ಮಾಚಾಪುರ ಗ್ರಾಮದಲ್ಲಿ ಆಲಿಕಲ್ಲು ಮಳೆಯಿಂದಾಗಿ ಎರಡು ಕರುಗಳು ಸಾವನ್ನಪ್ಪಿವೆ” ಎಂದು ಸಭೆಯಲ್ಲಿ ವಿವರ ನೀಡಲಾಯಿತು.

