ಈ ವರ್ಷ ವಿಧಾನಸಭೆ ಚುನಾವಣೆ ನಡೆಯುವ ಪಶ್ಚಿಮ ಬಂಗಾಳ ರಾಜ್ಯಕ್ಕೆ ಕೇಂದ್ರ ಸರ್ಕಾರ ಬಂಪರ್ ಕೊಡುಗೆ ನೀಡಿದೆ. ತಳಮಟ್ಟದ ಆಡಳಿತವನ್ನು ಮತ್ತಷ್ಟು ಸಬಲೀಕರಿಸಲು ಮತ್ತು ಅಗತ್ಯ ಆಧಾರಿತ ಸ್ಥಳೀಯ ಅಭಿವೃದ್ಧಿಯನ್ನು ಸಾಧ್ಯವಾಗಿಸಲು ಕೇಂದ್ರ ಸರ್ಕಾರವು ಹಲವು ರಾಜ್ಯಗಳಿಗೆ ಅನುದಾನವನ್ನು ಬಿಡುಗಡೆ ಮಾಡಿದೆ.
ಈ ರಾಜ್ಯದಲ್ಲಿ ಬಿಹಾರ, ಹರ್ಯಾಣ, ಹಿಮಾಚಲ ಪ್ರದೇಶ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳ ಸೇರಿವೆ. ಪಂಚಾಯತ್ ರಾಜ್ ಸಂಸ್ಥೆಗಳಿಗೆ, ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ 2025-26ನೇ ಹಣಕಾಸು ವರ್ಷದ 15ನೇ ಹಣಕಾಸು ಆಯೋಗದ ಮುಕ್ತ ಅನುದಾನದ 2ನೇ ಕಂತು ಮಂಜೂರು ಮಾಡಿ, ಬಿಡುಗಡೆ ಮಾಡಿದೆ.
ಅನುದಾನದಲ್ಲಿ ಪಶ್ಚಿಮ ಬಂಗಾಳ ರಾಜ್ಯಕ್ಕೆ 680.86 ಕೋಟಿ ರೂ.ಗಳ ಅನುದಾನವನ್ನು ಹಂಚಿಕೆ ಮಾಡಲಾಗಿದೆ. ಪಂಚಾಯತ್ ರಾಜ್ ಸಚಿವಾಲಯ ಮತ್ತು ಜಲಶಕ್ತಿ ಸಚಿವಾಲಯದ ಶಿಫಾರಸಿನ ಮೇರೆಗೆ ಹಣಕಾಸು ಸಚಿವಾಲಯವು ಈ ಅನುದಾನವನ್ನು ಬಿಡುಗಡೆ ಮಾಡಿದೆ.
ಸಂವಿಧಾನದ 11ನೇ ಅನುಸೂಚಿಯಲ್ಲಿ ಉಲ್ಲೇಖಿಸಲಾದ 29 ವಿಷಯಗಳ ಅಡಿಯಲ್ಲಿ ಸ್ಥಳೀಯ ಅಗತ್ಯಗಳಿಗಾಗಿ ಅನುದಾನ ಬಳಸಬಹುದು. ಆದರೆ ಇದನ್ನು ವೇತನ ಅಥವಾ ಇತರ ಸ್ಥಾಪನಾ ವೆಚ್ಚಗಳಿಗಾಗಿ ಬಳಸುವಂತಿಲ್ಲ ಎಂದು ಷರತ್ತು ಹಾಕಲಾಗಿದೆ.
ಈ ಹಣವನ್ನು ನೈರ್ಮಲ್ಯ ಮತ್ತು ಬಯಲು ಶೌಚಮುಕ್ತ ಸ್ಥಿತಿಯ ನಿರ್ವಹಣೆ, ತ್ಯಾಜ್ಯ ಸಂಸ್ಕರಣೆ ಮತ್ತು ಕುಡಿಯುವ ನೀರು ಪೂರೈಕೆ, ಮಳೆನೀರು ಕೊಯ್ಲು ಹಾಗೂ ನೀರಿನ ಮರುಬಳಕೆಗಾಗಿ ಮಾತ್ರ ಬಳಸಬೇಕಾಗುತ್ತದೆ.
ಈ ಕಂತಿನ ಬಿಹಾರಕ್ಕೆ 802.40 ಕೋಟಿ ರೂ., ಹರ್ಯಾಣ ರಾಜ್ಯಕ್ಕೆ 197.627 ಕೋಟಿ ರೂ., ಹಿಮಾಚಲ ಪ್ರದೇಶಕ್ಕೆ 68.30 ಕೋಟಿ ರೂ., ಉತ್ತರ ಪ್ರದೇಶಕ್ಕೆ ಅತಿ ಹೆಚ್ಚು ಅಂದರೆ 1,559.40 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ.
2021ರಲ್ಲಿ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ನಡೆದಿತ್ತು. ಈ ವರ್ಷ ಚುನಾವಣೆ ನಡೆಯುವ ರಾಜ್ಯಗಳಲ್ಲಿ ಇದು ಸಹ ಒಂದು. ರಾಜ್ಯದ ವಿಧಾನಸಭೆ ಬಲ 294. ರಾಜ್ಯದಲ್ಲಿ ಅಧಿಕಾರ ಪಡೆಯಲು ಬೇಕಾದ ಮ್ಯಾಜಿಕ್ ನಂಬರ್ 148. 2021ರ ಚುನಾವಣೆಯಲ್ಲಿ ಬಿಜೆಪಿ 77 ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಿತ್ತು ಮತ್ತು 60 ಕ್ಷೇತ್ರಗಳಲ್ಲಿ ಮುನ್ನಡೆಯನ್ನು ಕಾಯ್ದುಕೊಂಡಿತ್ತು.

