ನವದೆಹಲಿ: ಕೇಂದ್ರ ಬಜೆಟ್ ಮಂಡನೆಗೆ ದಿನಗಣನೆ ಆರಂಭವಾಗಿದೆ. ಈ ಬಾರಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಲಿರುವ ಯುನಿಯನ್ ಬಜೆಟ್ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. ಒಂದೆಡೆ ಪಂಚ ರಾಜ್ಯಗಳ ಚುನಾವಣೆ ಇರುವುದರಿಂದ ಬಜೆಟ್ ಕೇವಲ ಚುನಾವಣೆಗೆ ಸೀಮಿತವಾಗಿರಲಿದೆಯೋ ಅಥವಾ ಎಲ್ಲಾ ರಾಜ್ಯಗಳಿಗೂ ಮಹತ್ವದ ಘೋಷಣೆ ಸಿಗಲಿದೆಯೋ ಎಂಬ ಕುತೂಹಲ ಹೆಚ್ಚಿದೆ.
ಈ ನಡುವೆ ಕರ್ನಾಟಕ ಈ ಬಾರಿ ಕೇಂದ್ರ ಬಜೆಟ್ ಮೇಲೆ ಸಾಕಷ್ಟು ನಿರೀಕ್ಷೆಗಳನ್ನು ಹೊಂದಿದೆ. ಮೂಲಸೌಕರ್ಯಗಳ ಅಭಿವೃದ್ಧಿ, ಜಿಎಸ್ ಟಿ ಪಾಲಿನ ಅಸಮಾನತೆ ಸರಿಪಡಿಸುವ ಸಾಧ್ಯತೆ. ನೆನೆಗುದಿಗೆ ಬಿದ್ದಿರುವ ಯೋಜನೆಗಳಿಗೆ ಮರುಜೀವ ಸಿಗುವ ಸಾಧ್ಯತೆ ಬಗ್ಗೆ ನಿರೀಕ್ಷಿಸಲಾಗಿದೆ. ಈ ಬಾರಿ ಕೇಂದ್ರ ಬಜೆಟ್ ನಲ್ಲಿ ರಾಜ್ಯಕ್ಕೆ ಸಿಗಬಹುದಾದದ್ದು ಏನು? ನೋಡುವುದಾದರೆ ರಾಜ್ಯದ ಬೇಡಿಕೆ ಪಟ್ಟಿ ದೊಡ್ದದಿದೆ.
ನೀರಾವರಿ ಯೋಜನೆಯಲ್ಲಿ ಕೃಷ್ಣಾ ಮೇಲ್ದಂಡೆ, ಎತ್ತಿನಹೊಳೆ, ಮಹದಾಯಿ ಯೋಜನೆಗೆ ‘ರಾಷ್ಟ್ರೀಯ ಯೋಜನೆ’ ಮಾನ್ಯತೆ ನಿರೀಕ್ಷೆ.
ಭದ್ರಾ ಮೇಲ್ದಂಡೆ ಯೋಜನೆಗೆ 2023ರಲ್ಲಿ ಘೋಷಣೆಯಾಗಿದ್ದ 5,300 ಕೋಟಿ ರೂ. ಅನುದಾನ ಬಿಡುಗಡೆಗೆ ಒತ್ತಾಯ
ಬೆಂಗಳೂರಿನಲ್ಲಿ ನಮ್ಮ ಮೆಟ್ರೋ 3ನೇ ಹಂತದ ವಿಸ್ತರಣೆಗೆ ಕೇಂದ್ರದ ಆರ್ಥಿಕ ನೆರವು.
ಸಬ್ ಅರ್ಬನ್ ರೈಲಿಗೆ ಹೆಚ್ಚಿನ ಅನುದಾನ.
ಚೆನ್ನೈ-ಬೆಂಗಳೂರು-ಮೈಸೂರು ಹೈಸ್ಪೀಡ್ ರೈಲ್ವೆ ಯೋಜನೆಗೆ ಗ್ರೀನ್ ಸಿಗ್ನಲ್.
ಹಾಸನ ಐಐಟಿ, ಶಿರಾಡಿ ಸುಂರಂಗ, ರಾಯಚೂರು ಏಮ್ಸ್, ವಿಶ್ವೇಶ್ವರಯ್ಯ ಉಕ್ಕು ಕಾರ್ಖಾನೆಗೆ ಮರುಜೀವ ಸಾಧ್ಯತೆ
ಮೈಸೂರು- ಕುಶಾಲನಗರ ಹೊಸ ರೈಲು ಯೋಜನೆ.
ಮಂಡ್ಯದಲ್ಲಿ ಕೈಗಾರಿಕೆ ಸ್ಥಾಪನೆ ನಿರೀಕ್ಷೆ
ಅನುದಾನ ಕೊರತೆಯಿಂದ ರಾಜ್ಯದ ನೀರಾವರಿ ಯೋಜನೆಗಳ ಅನುಷ್ಠಾನ ಬಾಕಿ ಉಳಿದಿವೆ. ರಾಜ್ಯದ ಕೆಲವು ನೀರಾವರಿ ಯೋಜನೆಗಳನ್ನು ರಾಷ್ಟ್ರೀಯ ಯೋಜನೆಯಾಗಿ ಘೋಷಿಸಿದರೆ ಶೇ 90ರಷ್ಟು ಅನುದಾನ ಕೇಂದ್ರದಿಂದಲೇ ಸಿಗಲಿದೆ.
2023ರಲ್ಲಿ ಚುನಾವಣೆ ಸಂದರ್ಭದಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ಸ್ವತಃ ಕೇಂದ್ರ ಸರಕಾರವೇ ಘೋಷಣೆ ಮಾಡಿದ್ದ 5,300 ಕೋಟಿ ರೂ. ಇನ್ನೂ ಬಿಡುಗಡೆಯಾಗಿಲ್ಲ. ಇನ್ನು ಮಹದಾಯಿ, ಮೇಕೆದಾಟು ಯೋಜನೆಗಳಿಗೆ ಅನುಷ್ಠಾನಕ್ಕೆ ಕೇಂದ್ರ ಸರಕಾರದಿಂದ ಅಧಿಕೃತ ಒಪ್ಪಿಗೆಬೇಕಿದೆ.
ರಾಜ್ಯದ ರೈಲ್ವೆ ಯೋಜನೆಗಳಿಗೆ ಈ ಬಾರಿ ಕೇಂದ್ರದಿಂದ ಹೆಚ್ಚಿನ ಅನುದಾನ ಸಿಗುವ ನಿರೀಕ್ಷೆಯಿದೆ. ಧಾರವಾಡ-ಕಿತ್ತೂರು-ಬೆಳಗಾವಿ, ಗಿಣಿಗೇರಾ-ರಾಯಚೂರು ಮಾರ್ಗಗಳ ಜೊತೆಗೆ ಕಲಬುರಗಿ ರೈಲ್ವೆ ವಿಭಾಗದ ಕನಸು ನನಸಾಗುವ ನಿರೀಕ್ಷೆ.
ಕರ್ನಾಟಕದ ಬಂದರುಗಳಿಗೆ ಸಾಗರಮಾಲಾ ಯೋಜನೆಯಡಿ ವಿಶೇಷ ಪ್ಯಾಕೇಜ್ ಸಿಗುವ ನಿರೀಕ್ಷೆ. ಜೊತೆಗೆ ಕೈಗಾರಿಕೆಗಳಿಗೆ ಪೂರಕವಾಗಿ ಉಕ್ಕಿನ ಪೂರೈಕೆಗೆ ರಿಯಾಯಿತಿ ಸಿಗುವ ಸಾಧ್ಯತೆ.
ರಾಜ್ಯದಲ್ಲಿ ಅತಿವೃಷ್ಟಿ, ಅನಾವೃಷ್ಟಿಯಿಂದಾಗಿ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಸಾಲದ ಬಾಧೆ ಹೆಚ್ಚುತ್ತಿದೆ. ಪ್ರವಾಹದಿಂದ ಆರ್ಥಿಕ ಸಂಕಷ್ಟ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶಗಳ ಅಭಿವೃದ್ಧಿಗೆ ಹೆಚ್ಚಿನ ನಿಧಿ ಹಂಚಿಕೆಯಾಗುವ ನಿರೀಕ್ಷೆ. ಗುಜರಾತ್, ಯುಪಿ ಮಾದರಿಯಲ್ಲಿ ಕರ್ನಾಟಕಕ್ಕೂ ಬೃಹತ್ ತಾಂತ್ರಿಕ ಯೋಜನೆಗಳನ್ನು ನೀಡುವ ಮೂಲಕ ಬಂಡವಾಳ ಹೂಡಿಕೆಗೆ ಉತ್ತೇಜನ ನೀಡಬೇಕೆಂಬುದು ಉದ್ಯಮ ಕ್ಷೇತ್ರದ ಒತ್ತಾಯ
ಒಟ್ಟಾರೆ ಈ ಬಾರಿ ಕೇಂದ್ರ ಬಜೆಟ್ ಮೇಲೆ ಕರ್ನಾಅಟಕದ ನಿರೀಕ್ಷೆಗಳು ಹೆಚ್ಚಿದ್ದು, ಯಾವೆಲ್ಲ ಯೋಜನೆ ಘೋಷಣೆಯಾಗಲಿದೆ ಎಂಬುದನ್ನು ಕಾದುನೋಡಬೇಕಿದೆ.

