ನವದೆಹಲಿ: 2026-27ನೇ ಸಾಲಿನ ಕೇಂದ್ರ ಬಜೆಟ್ ಮಂಡಿಸಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಆರೋಗ್ಯ ಕ್ಷೇತ್ರಕ್ಕೆ ಮಹತ್ವದ ಘೋಷಣೆಗಳನ್ನು ಮಾಡಿದ್ದಾರೆ.
ಜನಸಾಮಾನ್ಯರ ಆರೋಗ್ಯ ಗಮನದಲ್ಲಿಟ್ಟುಕೊಂಡು ಜೀವರಕ್ಷಕ ಔಷಧಿಗಳ ಬೆಲೆ ಕಡಿಮೆ ಮಾಡುವುದಾಗಿ ಘೋಷಿಸಿದ್ದಾರೆ. ಕ್ಯಾನ್ಸರ್ ಮತ್ತು ಮಧುಮೇಹದಂತಹ ಕಾಯಿಲೆಗಳಿಗೆ ದುಬಾರಿ ಚಿಕಿತ್ಸೆಗಳೊಂದಿಗೆ ಹೋರಾಡುತ್ತಿರುವ ಲಕ್ಷಾಂತರ ಕುಟುಂಬಗಳಿಗೆ ಕೊಂಚ ನಿರಾಳ ನೀಡಿದ್ದಾರೆ.
ಕ್ಯಾನ್ಸರ್ ಮತ್ತು ಮಧುಮೇಹ ಕಾಯಿಲೆಗಳಿಗೆ ಔಷಧಿಗಳು ಕೈಗೆಟುಕುವ ದರದಲ್ಲಿ ಲಭ್ಯವಾಗುವಂತೆ ದರ ಇಳಿಕೆ ಮಾಡಿ ಘೋಷಣೆ ಮಾಡಿದ್ದಾರೆ. ಇದರಿಂದ ಮಧ್ಯಮ ವರ್ಗ ಮತ್ತು ಬಡವರಿಗೆ ಪ್ರಯೋಜನವಾಗಲಿದೆ. ಸರ್ಕಾರದ ಈ ನಿರ್ಧಾರವು ರೋಗಿಗಳ ಮೇಲಿನ ಆರ್ಥಿಕ ಹೊರೆಯನ್ನು ಕಡಿಮೆ ಮಾಡುತ್ತದೆ ಹಾಗೂ ಹಣದ ಕೊರತೆಯಿಂದಾಗಿ ಚಿಕಿತ್ಸೆಗೆ ಹಿಂದೇಟು ಹಾಕುತ್ತಿದ್ದವರಿಗೆ ಕೊಂಚ ಸಮಾಧಾನ ತಂದಿದೆ.
ಔಷಧ ಉತ್ಪಾದನೆಯಲ್ಲಿ ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡಲು ‘ಬಯೋ-ಫಾರ್ಮಾ ಶಕ್ತಿ’ ಯೋಜನೆಯನ್ನು ಘೋಷಿಸಲಾಗಿದೆ. ಈ ಯೋಜನೆಯಡಿ 10,000 ಕೋಟಿ ರೂ.ಗಳ ಹೂಡಿಕೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ದೇಶಾದ್ಯಂತ ಮೂರು ಹೊಸ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (AIIMS) ಆಸ್ಪತ್ರೆ ನಿರ್ಮಾಣವನ್ನು ಘೋಷಿಸಿದ್ದಾರೆ. ದೇಶದ ಎಲ್ಲ ಭಾಗದ ಜನರಿಗೆ ವಿಶ್ವ ದರ್ಜೆಯ ವೈದ್ಯಕೀಯ ಸೌಲಭ್ಯಗಳು ದೊರೆಯುವಂತೆ ಮಾಡುವ ನಿಟ್ಟಿನಲ್ಲಿ ಈ ಘೋಷಣೆ ಮಾಡಲಾಗಿದೆ.
ಐದು ಪ್ರಾದೇಶಿಕ ವೈದ್ಯಕೀಯ ಕೇಂದ್ರಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ. ಈ ಕೇಂದ್ರಗಳು ಚಿಕಿತ್ಸೆಯನ್ನು ಒದಗಿಸುವುದು ಮಾತ್ರವಲ್ಲದೆ ವೈದ್ಯಕೀಯ ಸಂಶೋಧನೆ ಮತ್ತು ತರಬೇತಿಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿವೆ.
ಆಯುರ್ವೇದಕ್ಕೆ ಅಂತರರಾಷ್ಟ್ರೀಯ ಮನ್ನಣೆ ನೀಡುವ ನಿಟ್ಟಿನಲ್ಲಿ ಹಲವು ಉಪಕ್ರಮಗಳನ್ನು ಬಜೆಟ್ನಲ್ಲಿ ಘೋಷಣೆ ಮಾಡಲಾಗಿದೆ. ಸಾಂಪ್ರದಾಯಿಕ ಔಷಧಗಳ ಕುರಿತು ಸಂಶೋಧನೆಯನ್ನು ಉತ್ತೇಜಿಸಲು ಗುಜರಾತ್‌ನ ಜಾಮ್‌ನಗರದಲ್ಲಿ ವಿಶೇಷ ಸಂಸ್ಥೆಯನ್ನು ಸ್ಥಾಪಿಸಲಾಗುವುದು. ನಮ್ಮ ಪ್ರಾಚೀನ ವೈದ್ಯಕೀಯ ವ್ಯವಸ್ಥೆಯು ಅನೇಕ ಗಂಭೀರ ಕಾಯಿಲೆಗಳಿಗೆ ಚಿಕಿತ್ಸೆ ನೀಡುತ್ತದೆ ಎಂದು ಸರ್ಕಾರ ನಂಬುತ್ತದೆ, ಅದನ್ನು ಈಗ ಪ್ರಪಂಚದ ಗಮನಕ್ಕೆ ತರಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿದರು.
ಆರೋಗ್ಯ ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿ ಬಗ್ಗೆಯೂ ಮಹತ್ವದ ಘೋಷಣೆ ಮಾಡಲಾಗಿದೆ. ಆರೋಗ್ಯ ಸೇವೆಗಳನ್ನು ಸುಧಾರಿಸಲು ಸರ್ಕಾರವು 150,000 ಆರೈಕೆದಾರರಿಗೆ ತರಬೇತಿ ನೀಡುವ ಗುರಿಯನ್ನು ಹೊಂದಿದೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ನರ್ಸಿಂಗ್ ಮತ್ತು ರೋಗಿಗಳ ಆರೈಕೆ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶ ಸೃಷ್ಟಿಯಾಗಲಿದೆ.

