ಭಾನುವಾರ ಬೆಳಗ್ಗೆ 11 ಗಂಟೆಗೆ 2026-27ನೇ ಸಾಲಿನ ಬಜೆಟ್ ಅನ್ನು ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಮಂಡನೆ ಮಾಡುತ್ತಿದ್ದಾರೆ. ಈ ಬಜೆಟ್ ಮಂಡನೆ ಬಳಿಕ ಸಚಿವರು 30 ಕಾಲೇಜು ವಿದ್ಯಾರ್ಥಿಗಳನ್ನು ಭೇಟಿಯಾಗಲಿದ್ದಾರೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸತತ 9ನೇ ಬಜೆಟ್ ಅನ್ನು ಇಂದು ಮಂಡಿಸುತ್ತಿದ್ದಾರೆ. ಬಜೆಟ್ ಪ್ರಕ್ರಿಯೆಯನ್ನು ಸಂಸತ್ತಿನ ಆಚೆಗೂ ವಿಸ್ತರಿಸುವ ಮೂಲಕ, ಹಣಕಾಸು ಸಚಿವರು ದೇಶದಾದ್ಯಂತದ ಸುಮಾರು 30 ಕಾಲೇಜು ವಿದ್ಯಾರ್ಥಿಗಳೊಂದಿಗೆ ಇಂದು ಸಂವಾದ ನಡೆಸಲಿದ್ದಾರೆ.
ಈ ವರ್ಷದ ಬಜೆಟ್ ಹೇಗೆ ಯುವ ಕೇಂದ್ರಿತ ಆಯಾಮವನ್ನು ಹೊಂದಿದೆ ಎಂದು ಅವರು ವಿವರಣೆ ನೀಡಲಿದ್ದಾರೆ. ಆಯ್ದ ವಿದ್ಯಾರ್ಥಿಗಳು ಕೇಂದ್ರ ಬಜೆಟ್ ಅನ್ನು ಲೋಕಸಭೆಯ ಗ್ಯಾಲರಿಯಿಂದ ನೇರಪ್ರಸಾರದಲ್ಲಿ ವೀಕ್ಷಿಸಿ, ಬಳಿಕ ಕಾರ್ಯಕ್ರಮಗಳಲ್ಲಿ ಸಚಿವರನ್ನು ಭೇಟಿಯಾಗಿ ಈ ಕುರಿತು ಸಂವಾದ ನಡೆಸಲಿದ್ದಾರೆ.
ಈ ವಿದ್ಯಾರ್ಥಿಗಳ ತಂಡದಲ್ಲಿ ವಾಣಿಜ್ಯ, ಅರ್ಥಶಾಸ್ತ್ರ, ವೈದ್ಯಕೀಯ ಶಿಕ್ಷಣ ಮತ್ತು ವೃತ್ತಿಪರ ಅಧ್ಯಯನಗಳು ಸೇರಿದಂತೆ ವಿವಿಧ ವಿಭಾಗದವರು ಇದ್ದಾರೆ. ಪ್ರಾದೇಶಿಕ ಮತ್ತು ಶೈಕ್ಷಣಿಕ ದೃಷ್ಟಿಕೋನಗಳ ಮೂಲಕ ದೇಶದಾದ್ಯಂತ ವಿವಿಧ ರಾಜ್ಯಗಳಿಂದ 30 ವಿದ್ಯಾರ್ಥಿಗಳನ್ನು ಈ ಸಂವಾದಕ್ಕೆ ಆಯ್ಕೆ ಮಾಡಲಾಗಿದೆ.
ಬಜೆಟ್ 2026ರ ಮಂಡನೆ ಬಳಿಕ ಕರ್ತವ್ಯ ಭವನ-1ರಲ್ಲಿರುವ ಹಣಕಾಸು ಸಚಿವಾಲಯಕ್ಕೂ ವಿದ್ಯಾರ್ಥಿಗಳ ತಂಡ ಭೇಟಿ ನೀಡಲಿದೆ. ಭೇಟಿಯ ಸಮಯದಲ್ಲಿ ಅವರು ಸಚಿವಾಲಯದ ಕಾರ್ಯವೈಖರಿ, ನೀತಿ ರಚನೆ ಪ್ರಕ್ರಿಯೆಗಳು ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಸಂಸ್ಥೆಗಳ ಪಾತ್ರದ ಬಗ್ಗೆ ಹಿರಿಯ ಅಧಿಕಾರಿಗಳೊಂದಿಗೆ ಸಂವಾದ ನಡೆಸುತ್ತಾರೆ.
ಹಣಕಾಸು ಸಚಿವರೊಂದಿಗೆ ಉನ್ನತ ಮಟ್ಟದ ಚರ್ಚೆಯಲ್ಲಿ ಹಣಕಾಸಿನ ನಿರ್ಧಾರಗಳನ್ನು ಹೇಗೆ ರೂಪಿಸಲಾಗುತ್ತದೆ? ಮತ್ತು ಕಾರ್ಯಗತಗೊಳಿಸಲಾಗುತ್ತದೆ? ಎಂಬುದರ ಬಗ್ಗೆ ಮಾಹಿತಿ ಪಡೆಯಲಿದ್ದಾರೆ.
ವಿದ್ಯಾರ್ಥಿಗಳ ಜೊತೆ ನಡೆಸುವ ಸಂವಾದ ಕೇಂದ್ರ ಬಜೆಟ್ನ ಪ್ರಮುಖ ಭಾವಾಗಿದೆ. ಭಾರತದ ಭವಿಷ್ಯದ ಬಗ್ಗೆ ಅದರ ದೀರ್ಘಕಾಲೀನ ದೃಷ್ಟಿಕೋನ ಮತ್ತು ಯುವಜನರ ಮೇಲೆ ಅದರ ಪರಿಣಾಮಗಳ ಕುರಿತು ಸಚಿವರು ವಿವರಣೆ ನೀಡಲಿದ್ದಾರೆ.
ಈ ಸಂವಾದದಲ್ಲಿ ವಿದ್ಯಾರ್ಥಿಗಳು ತಮ್ಮ ಆಲೋಚನೆಗಳು, ದೃಷ್ಟಿಕೋನಗಳು ಮತ್ತು ಆಕಾಂಕ್ಷೆಗಳನ್ನು ಹಂಚಿಕೊಳ್ಳುವ ನಿರೀಕ್ಷೆಯಿದೆ. ರಾಷ್ಟ್ರದ ಆರ್ಥಿಕ ಮತ್ತು ಸಾಮಾಜಿಕ ವ್ಯವಸ್ಥೆಯನ್ನು ರೂಪಿಸುವಲ್ಲಿ ಯುವ ಭಾರತೀಯರ ಪಾತ್ರ, ಅಭಿಪ್ರಾಯಗಳು ಮಹತ್ವದ್ದಾಗಿದೆ.
ಕೇಂದ್ರ ಬಜೆಟ್ ಅನ್ನು ಅನೇಕ ವೇದಿಕೆಗಳಲ್ಲಿ ಯುವಕರು ಸೇರಿದಂತೆ ನಾಗರಿಕರಿಂದ ಸಂಗ್ರಹಿಸಿದ ಅಭಿಪ್ರಾಯದ ಬಳಿಕ ರೂಪಿಸಲಾಗಿದೆ. ಈ ಹಲವಾರು ಸಲಹೆಗಳು ಇಂದು ಬಜೆಟ್ನಲ್ಲಿ ಪ್ರತಿಫಲಿಸುವ ನಿರೀಕ್ಷೆಯಿದೆ.
ಹಣಕಾಸು ಸಚಿವಾಲಯವು ನೀತಿ ನಿರೂಪಣೆ ಮತ್ತು ಸಾರ್ವಜನಿಕರ ನಡುವಿನ ಅಂತರವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದ್ದು, ಆರ್ಥಿಕ ಬೆಳವಣಿಗೆ, ಆಡಳಿತ ಮತ್ತು ರಾಷ್ಟ್ರ ನಿರ್ಮಾಣದ ಕುರಿತ ಚರ್ಚೆಗಳಲ್ಲಿ ಯುವಕರನ್ನು ಸಕ್ರಿಯ ಪಾಲುದಾರರಾಗಿ ಮಾಡಿಕೊಳ್ಳಲಿದೆ.

