HomeKarnatakaವಿಕಸಿತ ಭಾರತದ ಗುರಿಯತ್ತ ಕೇಂದ್ರ ಬಜೆಟ್: ಅಶೋಕ

ವಿಕಸಿತ ಭಾರತದ ಗುರಿಯತ್ತ ಕೇಂದ್ರ ಬಜೆಟ್: ಅಶೋಕ

ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ 2026-27ನೇ ಸಾಲಿನ ಬಜೆಟ್‌ ಮಂಡನೆ ಮಾಡಿದ್ದಾರೆ. ಬಜೆಟ್‌ ಭಾಷಣದ ಬಳಿಕ ವಿವಿಧ ಪಕ್ಷದ ನಾಯಕರು ಬಜೆಟ್ ಕುರಿತು ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.

ಕರ್ನಾಟಕದ ಪ್ರತಿಪಕ್ಷದ ನಾಯಕ ಆರ್.ಅಶೋಕ ಬಜೆಟ್ ಕುರಿತು ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ವಿಕಸಿತ ಭಾರತದ ದಿಕ್ಕಿನಲ್ಲಿ ಮತ್ತೊಂದು ಮಹತ್ವದ ಹೆಜ್ಜೆಯಾಗಿದೆ. ಕೇಂದ್ರ ಬಜೆಟ್ 2026–27 ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೃಢ ನಾಯಕತ್ವದಲ್ಲಿ, ಮಾನ್ಯ ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಇಂದು ಮಂಡಿಸಿದ ಕೇಂದ್ರ ಬಜೆಟ್ 2026–27, ವಿಕಸಿತ ಭಾರತ 2047 ಗುರಿಯತ್ತ ದೇಶವನ್ನು ಮುನ್ನಡೆಸುವ ದೂರದೃಷ್ಟಿಯ ಮತ್ತು ಸಮತೋಲನದ ಬಜೆಟ್ ಆಗಿದೆ ಎಂದು ಹೇಳಿದ್ದಾರೆ.

ಆರ್ಥಿಕ ಶಿಸ್ತು, ಜನಪರ ನೀತಿ ಮತ್ತು ಅಭಿವೃದ್ಧಿ ಆಧಾರಿತ ದೃಷ್ಟಿಕೋನ ಈ ಮೂರು ಅಂಶಗಳ ಸಮನ್ವಯವೇ ಈ ಬಜೆಟ್‌ನ ಮೂಲ ತತ್ವವಾಗಿದೆ. ಈ ಬಜೆಟ್ ಮೂರು ಪ್ರಮುಖ ರಾಷ್ಟ್ರೀಯ ಆದ್ಯತೆಗಳನ್ನು ಸ್ಪಷ್ಟವಾಗಿ ಪ್ರತಿಪಾದಿಸುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮೊದಲನೆಯದು, ಉತ್ಪಾದಕತೆಯನ್ನು ಹೆಚ್ಚಿಸುವ ಮೂಲಕ ಆರ್ಥಿಕ ಬೆಳವಣಿಗೆಗೆ ವೇಗ ನೀಡುವುದು. ಎರಡನೆಯದು, ಜನರ ಆಶೋತ್ತರಗಳಿಗೆ ನೇರ ಸ್ಪಂದನೆ ನೀಡುತ್ತಾ, ಸಮಗ್ರ ಅಭಿವೃದ್ಧಿಯನ್ನು ಸಾಧಿಸುವುದು. ಮೂರನೆಯದು “ಸಬ್ಕಾ ಸಾಥ್, ಸಬ್ಕಾ ವಿಕಾಸ್” ಎಂಬ ತತ್ವದ ಮೂಲಕ ಪ್ರತಿಯೊಬ್ಬ ನಾಗರಿಕನಿಗೂ ಅವಕಾಶ ಒದಗಿಸುವುದು. ಈ ದೃಷ್ಟಿಕೋನವೇ ಪ್ರಧಾನಿ ಮೋದಿಜಿ ನೇತೃತ್ವದ ಸರ್ಕಾರವನ್ನು ವಿಭಿನ್ನವಾಗಿ ಗುರುತಿಸುತ್ತದೆ.

ಬಜೆಟ್‌ನಲ್ಲಿ ಘೋಷಿಸಲಾದ ಏಳು ಹೈ-ಸ್ಪೀಡ್ ರೈಲು ಕಾರಿಡಾರ್‌ಗಳು, ದೇಶದ ಪ್ರಮುಖ ನಗರಗಳನ್ನು ವೇಗವಾಗಿ ಸಂಪರ್ಕಿಸುವ ಮೂಲಕ ಆರ್ಥಿಕ ಚಟುವಟಿಕೆಗಳಿಗೆ ಹೊಸ ಚೈತನ್ಯ ನೀಡಲಿವೆ. ಬೆಂಗಳೂರು–ಚೆನ್ನೈ ಮತ್ತು ಬೆಂಗಳೂರು–ಹೈದರಾಬಾದ್ ಹೈ-ಸ್ಪೀಡ್ ರೈಲು ಮಾರ್ಗಗಳು, ಬೆಂಗಳೂರನ್ನು ದಕ್ಷಿಣ ಭಾರತದ ಪ್ರಮುಖ ಆರ್ಥಿಕ ಕೇಂದ್ರವಾಗಿ ಮತ್ತಷ್ಟು ಬಲಪಡಿಸಲಿವೆ.

ಇದರೊಂದಿಗೆ ಉದ್ಯೋಗ ಸೃಷ್ಟಿ, ಕೈಗಾರಿಕಾ ವಿಸ್ತರಣೆ, ವ್ಯಾಪಾರ ಮತ್ತು ಲಾಜಿಸ್ಟಿಕ್ಸ್ ಕ್ಷೇತ್ರಗಳಿಗೆ ವೇಗ ಸಿಗಲಿದೆ. ಕೃಷಿ ವಲಯಕ್ಕೆ ಈ ಬಜೆಟ್‌ನಲ್ಲಿ ವಿಶೇಷ ಒತ್ತು ನೀಡಲಾಗಿದೆ. ಖಾದಿ ಮತ್ತು ಕೈಮಗ್ಗ ಉತ್ಪನ್ನಗಳ ಉತ್ತೇಜನಕ್ಕಾಗಿ ಮಹಾತ್ಮ ಗಾಂಧಿ ಗ್ರಾಮ ಸ್ವರಾಜ್ ಯೋಜನೆ, ತೆಂಗು, ಗಂಧ ಮತ್ತು ಗೇರು ಬೆಳೆಗಳಿಗೆ ವಿಶೇಷ ಪ್ಯಾಕೇಜುಗಳು, ಹಾಗೂ 2030ರೊಳಗೆ ಗೇರು ಮತ್ತು ಕೋಕೋ ಬೆಳೆಗಳನ್ನು ಜಾಗತಿಕ ರಫ್ತು ಉತ್ಪನ್ನಗಳನ್ನಾಗಿ ರೂಪಿಸುವ ಗುರಿ – ಇವೆಲ್ಲವೂ ರೈತರ ಆದಾಯ ವೃದ್ಧಿಗೆ ಮಹತ್ವದ ಹೆಜ್ಜೆಗಳಾಗಿವೆ.

ಇದರಿಂದ ಕರ್ನಾಟಕ ಸೇರಿದಂತೆ ದೇಶದ ವಿವಿಧ ಭಾಗಗಳ ರೈತರಿಗೆ ಹೊಸ ಮಾರುಕಟ್ಟೆ ಮತ್ತು ಆರ್ಥಿಕ ಅವಕಾಶಗಳು ಸೃಷ್ಟಿಯಾಗಲಿವೆ. ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ (MSME) ಬೆಂಬಲ ಘೋಷಣೆ, ಹಾಗೂ ಸೆಮಿಕಂಡಕ್ಟರ್ ವಲಯಕ್ಕೆ ₹40,000 ಕೋಟಿ ಮೀಸಲು, ಕೈಗಾರಿಕಾ ವಲಯಕ್ಕೆ ಭಾರಿ ಉತ್ತೇಜನ ನೀಡಲಿದೆ. ಇದರಿಂದ ಬೆಂಗಳೂರು ಮತ್ತು ಕರ್ನಾಟಕದ ಕೈಗಾರಿಕಾ ಪರಿಸರ ವ್ಯವಸ್ಥೆಗೆ ಬಲ ದೊರೆಯಲಿದ್ದು, ಯುವಕರಿಗೆ ಹೆಚ್ಚಿನ ಉದ್ಯೋಗಾವಕಾಶಗಳು ಲಭ್ಯವಾಗಲಿವೆ.

ಮಧ್ಯಮ ವರ್ಗದ ಹಿತದೃಷ್ಟಿಯಿಂದ ತೆರಿಗೆ ವ್ಯವಸ್ಥೆಯಲ್ಲಿ ಮಹತ್ವದ ಸರಳೀಕರಣಗಳನ್ನು ಮಾಡಲಾಗಿದೆ. ಆದಾಯ ತೆರಿಗೆ ಸಲ್ಲಿಕೆಯಲ್ಲಿ ವಿಳಂಬಕ್ಕೆ ಕೇವಲ 10% ದಂಡ ಮತ್ತು ಯಾವುದೇ ಕ್ರಿಮಿನಲ್ ಶಿಕ್ಷೆ ಇಲ್ಲದಿರುವುದು, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದ TCS ದರವನ್ನು 5% ರಿಂದ 2% ಕ್ಕೆ ಇಳಿಸಿರುವುದು, ಹಾಗೂ ಹೊಸ ಐಟಿ ಕಾಯ್ದೆಯ ಮೂಲಕ ಸರಳ, ಪಾರದರ್ಶಕ ತೆರಿಗೆ ವ್ಯವಸ್ಥೆ ರೂಪಿಸಿರುವುದು – ಇವೆಲ್ಲವೂ ಜನಸ್ನೇಹಿ ನಿರ್ಧಾರಗಳಾಗಿವೆ.

17 ಅಗತ್ಯ ಔಷಧಗಳು ಮತ್ತು 6 ಅಪರೂಪದ ಕಾಯಿಲೆಗಳ ಔಷಧಗಳ ಬೆಲೆ ಇಳಿಕೆ, ಅಪಘಾತ ಪರಿಹಾರಕ್ಕೆ ತೆರಿಗೆ ಮುಕ್ತತೆ – ಸಾಮಾನ್ಯ ನಾಗರಿಕರ ಮೇಲೆ ಇರುವ ಆರ್ಥಿಕ ಭಾರವನ್ನು ಕಡಿಮೆ ಮಾಡುವ ಜನಪರ ಕ್ರಮಗಳಾಗಿದ್ದು, ಆರೋಗ್ಯ ಕ್ಷೇತ್ರದಲ್ಲಿ ಮಾನವೀಯ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ.

ಒಟ್ಟಾರೆ, ಈ ಬಜೆಟ್ ಆರ್ಥಿಕ ಶಿಸ್ತು, ಸಾಮಾಜಿಕ ನ್ಯಾಯ ಮತ್ತು ಸಮಗ್ರ ಅಭಿವೃದ್ಧಿಯ ಸಮತೋಲನದ ಬ್ಲೂಪ್ರಿಂಟ್ ಆಗಿದ್ದು, ಭಾರತವನ್ನು ವಿಶ್ವದ ಮುಂಚೂಣಿ ರಾಷ್ಟ್ರಗಳ ಸಾಲಿಗೆ ಕೊಂಡೊಯ್ಯುವ ಶಕ್ತಿಯನ್ನೊಳಗೊಂಡಿದೆ. ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಮಾನ್ಯ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರಿಗೆ, ದೇಶದ ಭವಿಷ್ಯಕ್ಕೆ ದಿಕ್ಕು ತೋರಿಸುವ ಈ ಜನಪರ ಹಾಗೂ ಅಭಿವೃದ್ಧಿ ಪರ ಬಜೆಟ್‌ಗೆ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಧನ್ಯವಾದಗಳು ಎಂದು ಅಶೋಕ ಹೇಳಿದ್ದಾರೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular