ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ 2026-27ನೇ ಸಾಲಿನ ಬಜೆಟ್ ಮಂಡಿಸಿದರು. ಬಜೆಟ್‌ನಲ್ಲಿ ಘೋಷಿಸಿದ ಹೊಸ ವಿವರ ಸೇರಿದಂತೆ ಬಜೆಟ್ ಮುಖ್ಯಾಂಶಗಳು ಇಲ್ಲಿವೆ.
ಕೇಂದ್ರ ಬಜೆಟ್ 2026ರ ಭಾಷಣ ಆರಂಭಿಸಿದ ನಿರ್ಮಲಾ ಸೀತಾರಾಮನ್, ಮಾಘ ಪೂರ್ಣಿಮೆ ದಿನ ಬಜೆಟ್ ಮಂಡನೆ ಮಾಡುತ್ತಿದ್ದೇನೆ. ಇದು ಕರ್ತವ್ಯ ಭವನ್‌ನಲ್ಲಿ ತಯಾರು ಮಾಡಿದ ಮೊದಲ ಬಜೆಟ್ ಆಗಿದೆ ಎಂದರು. ‘ಯುವ ಶಕ್ತಿ’ ಮೇಲೆ ಕೇಂದ್ರಿಕೃತವಾದ ಬಜೆಟ್ ಇದಾಗಿದೆ. ಭಾರತ ಜಗತ್ತಿನ ಅತಿದೊಡ್ಡ ಆರ್ಥಿಕ ಶಕ್ತಿಯಾಗುತ್ತಿದೆ ಎಂದು ಬಣ್ಣಿಸಿದರು.
ಹೊಸ ಆರ್ಥಿಕ ನೀತಿ, ಆದಾಯ ತೆರಿಗೆ ಘೋಷಣೆ ಮಾಡುವ ದಿನಾಂಕ ವಿಸ್ತರಣೆ, ರೈತರಿಗಾಗಿ ಎಐ ಟೂಲ್, ಹೊಸ ಅರ್ಥ್ ಕಾರಿಡಾರ್, 7 ಹೈಸ್ಪೀಡ್ ರೈಲು ಕಾರಿಡಾರ್‌ಗಳನ್ನು ಬಜೆಟ್‌ನಲ್ಲಿ ಘೋಷಣೆ ಮಾಡಿದರು.
ನಗರಗಳ ಅಭಿವೃದ್ಧಿ: ಬಜೆಟ್‌ನಲ್ಲಿ 2, 3ನೇ ಹಂತದ ನಗರ ಅಭಿವೃದ್ಧಿ ಘೋಷಣೆ ಮಾಡಲಾಗಿದೆ. ನಗರದ ಮೂಲ ಸೌಕರ್ಯ ಅಭಿವೃದ್ಧಿಗೆ ಸರ್ಕಾರ ಗಮನ ನೀಡಿದೆ. 5 ಲಕ್ಷಕ್ಕಿಂತ ಅಧಿಕ ಜನಸಂಖ್ಯೆ ಇರುವ ನಗರಗಳ ಮೂಲ ಸೌಕರ್ಯ ಅಭಿವೃದ್ಧಿ ಮಾಡಲಾಗುತ್ತದೆ. 2, 3ನೇ ಹಂತದ ನಗರಗಳನ್ನು ಗುರುತಿಸಿ ಅವುಗಳ ಅಭಿವೃದ್ಧಿ ಮಾಡಲಾಗುತ್ತದೆ ಎಂದರು.
7 ಹೈಸ್ಪೀಡ್ ರೈಲು ಕಾರಿಡಾರ್: ಬಜೆಟ್‌ನಲ್ಲಿ 7 ಹೈಸ್ಪೀಡ್ ರೈಲು ಕಾರಿಡಾರ್‌ಗಳನ್ನು ಘೋಷಣೆ ಮಾಡಲಾಗಿದೆ. ಈ ಕಾರಿಡಾರ್‌ಗಳು ಪುಣೆ-ಮುಂಬೈ, ಪುಣೆ-ಹೈದರಾಬಾದ್, ಹೈದರಾಬಾದ್-ಬೆಂಗಳೂರು, ಬೆಂಗಳೂರು-ಚೆನ್ನೈ, ದೆಹಲಿ-ವಾರಣಾಸಿ ಮತ್ತು ವಾರಣಾಸಿ-ಸಿಲಿಗುರಿಯನ್ನು ಸಂಪರ್ಕಿಸಲಿವೆ.
ರೈತರಿಗೆ ಎಐ ಟೂಲ್: ಕೃಷಿ ವಲಯದ ಉತ್ಪಾದಕತೆ, ಕೃಷಿ ಚಟುವಟಿಕೆಗಳನ್ನು ಉತ್ತೇಜಿಸಲು ಬರಲಿದೆ ಎಐ ಟೂಲ್. ಹೌದು ವಿವಿಧ ಭಾಷೆಯಲ್ಲಿ ರೈತರಿಗೆ ಸಹಾಯ ಮಾಡುವ ಎಐ ಟೂಲ್ ಅಭಿವೃದ್ಧಿ ಮಾಡಲಾಗುತ್ತದೆ ಎಂದು ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿದೆ. ಭಾರತ್ ವಿಸ್ತಾರ್ (Bharat Vistar) ಹೆಸರಿನ ಬಹುಭಾಷಾ AI ಟೂಲ್ ಇದಾಗಿದೆ. ಇದು ಕೃಷಿ ಪೋರ್ಟಲ್‌ಗಳು ಮತ್ತು ಆಧುನಿಕ ಕೃಷಿ ಪದ್ಧತಿಗಳ ಬಗ್ಗೆ ಮಾಹಿತಿ ನೀಡಲಿದೆ. ರೈತರಿಗೆ ಉಂಟಾಗುವ ಭಾಷಾ ಸಮಸ್ಯೆ ನಿವಾರಣೆಗಾಗಿ ರೈತರ ಮಾತೃಭಾಷೆಯಲ್ಲೇ ಮಾಹಿತಿ ನೀಡಲಿದೆ.
ತೆರಿಗೆ ಪ್ರಸ್ತಾವನೆ: ಬಜೆಟ್ ಭಾಷಣದಲ್ಲಿ ನಿರ್ಮಲಾ ಸೀತಾರಾಮನ್ ಅವರು ಸಣ್ಣ ತೆರಿಗೆದಾರರಿಗಾಗಿ ಹೊಸ ಯೋಜನೆಯನ್ನು ಘೋಷಣೆ ಮಾಡಿದರು. ಇದರ ಅಡಿಯಲ್ಲಿ, ಅಸೆಸಿಂಗ್ ಅಧಿಕಾರಿಗೆ (Assessing Officer) ಅರ್ಜಿ ಸಲ್ಲಿಸುವ ಬದಲಿಗೆ, ನಿಯಮ ಆಧಾರಿತ ಸ್ವಯಂಚಾಲಿತ ಪ್ರಕ್ರಿಯೆಯ ಮೂಲಕವೇ ಕಡಿಮೆ ಅಥವಾ ಶೂನ್ಯ ತೆರಿಗೆ ಕಡಿತದ ಪ್ರಮಾಣಪತ್ರವನ್ನು ಪಡೆಯಲು ಸಾಧ್ಯವಾಗುತ್ತದೆ. ತೆರಿಗೆದಾರರ ಅನುಕೂಲಕ್ಕಾಗಿ ಡಿಪಾಸಿಟರಿಗಳೇ ಹೂಡಿಕೆದಾರರಿಂದ ಫಾರ್ಮ್ 15G ಅಥವಾ ಫಾರ್ಮ್ 15H ಅನ್ನು ಸ್ವೀಕರಿಸಿ, ಅವುಗಳನ್ನು ನೇರವಾಗಿ ಸಂಬಂಧಿತ ಕಂಪನಿಗಳಿಗೆ ಒದಗಿಸುವ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತದೆ.
ಆದಾಯ ತೆರಿಗೆ: ಬಜೆಟ್ ಭಾಷಣದಲ್ಲಿ ನಿರ್ಮಲಾ ಸೀತಾರಾಮನ್ ಪರಿಷ್ಕೃತ ಆದಾಯ ತೆರಿಗೆ ರಿಟರ್ನ್ ನಿಯಮ ಘೋಷಣೆ ಮಾಡಿದರು. ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ಇರುವ ಸಮಯಾವಕಾಶವನ್ನು ಡಿಸೆಂಬರ್ 31 ರಿಂದ ಮಾರ್ಚ್ 31 ರವರೆಗೆ, ಅಲ್ಪ ಪ್ರಮಾಣದ ಶುಲ್ಕದೊಂದಿಗೆ ವಿಸ್ತರಿಸಲಾಗುತ್ತದೆ ಎಂದರು. ತೆರಿಗೆ ರಿಟರ್ನ್ಸ್ ಸಲ್ಲಿಸುವ ಕಾಲಮಿತಿಯನ್ನು ಹಂತಹಂತವಾಗಿ ವಿಂಗಡಿಸಲಾಗುತ್ತದೆ. ITR1 ಮತ್ತು ITR2 ರಿಟರ್ನ್ಸ್ ಸಲ್ಲಿಸುವ ವ್ಯಕ್ತಿಗಳು ಜುಲೈ 31 ರವರೆಗೆ ತಮ್ಮ ಸಲ್ಲಿಕೆಯನ್ನು ಮುಂದುವರಿಸಲಿದ್ದಾರೆ. ಆದರೆ, ಆಡಿಟ್ ಅಗತ್ಯವಿಲ್ಲದ ವ್ಯವಹಾರಗಳು ಅಥವಾ ಟ್ರಸ್ಟ್‌ಗಳಿಗೆ ಆಗಸ್ಟ್ 31ರವರೆಗೆ ಸಮಯ ನೀಡಲಾಗುತ್ತದೆ. ಅಲ್ಲದೇ ಆದಾಯ ತೆರಿಗೆ ಪಾವತಿಸದಿದ್ದರೆ ಕೇವಲ ದಂಡ ವಿಧಿಸಲಾಗುತ್ತದೆ. ಜೈಲು ಶಿಕ್ಷೆ ಇರುವುದಿಲ್ಲ.
ಆರೋಗ್ಯ ಕ್ಷೇತ್ರ: ಬಜೆಟ್‌ನಲ್ಲಿ ಆರೋಗ್ಯ ಕ್ಷೇತ್ರಕ್ಕೆ ಕೊಡುಗೆ ನೀಡಲಾಗಿದೆ. ರಾಂಚಿಯಲ್ಲಿ ನಿಮ್ಹಾನ್ಸ್ ಆಸ್ಪತ್ರೆ ಸ್ಥಾಪನೆ ಮಾಡುವುದಾಗಿ ಘೋಷಣೆ. 7 ಅಪರೂಪದ ಕಾಯಿಲೆಗಳ ಔಷಧಗಳ ಬೆಲೆಯನ್ನು ಇಳಿಕೆ ಮಾಡಲಾಗುತ್ತದೆ. ಕ್ಯಾನ್ಸರ್‌ಗೆ ಸಂಬಂಧಿಸಿದ 17 ಪ್ರಮುಖ ಔಷಧಿಗಳ ಮೇಲಿನ ತೆರಿಗೆ ಕಡಿತ ಮಾಡಲಾಗಿದೆ. ಮೋಟಾರ್ ಅಪಘಾತ ಕ್ಲೇಮ್‌ಗಳಿಗೆ ತೆರಿಗೆಯಿಂದ ವಿನಾಯಿತಿ ನೀಡಲಾಗಿದೆ.
ಪ್ರವಾಸೋದ್ಯಮ: ಹಿಮಾಚಲ ಪ್ರದೇಶ, ಉತ್ತರಾಖಂಡ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ, ಹಾಗೆಯೇ ಪೂರ್ವ ಘಟ್ಟದ ಅರಕು ಕಣಿವೆ ಮತ್ತು ಪಶ್ಚಿಮ ಘಟ್ಟಗಳಲ್ಲಿ ಪರಿಸರ ಸ್ನೇಹಿ ಮತ್ತು ಸುಸ್ಥಿರ ಪರ್ವತ ಹಾದಿಗಳ ಅಭಿವೃದ್ಧಿ. ಒಡಿಶಾ, ಕರ್ನಾಟಕ ಮತ್ತು ಕೇರಳದ ಪ್ರಮುಖ ಆಮೆ ಮೊಟ್ಟೆ ಇಡುವ ಕೇಂದ್ರಗಳ ಉದ್ದಕ್ಕೂ ‘ಟೈಟಲ್ ಟ್ರಯಲ್ಸ್’ ಅಥವಾ ಆಮೆ ಹಾದಿಗಳನ್ನು ಅಭಿವೃದ್ಧಿ.
ವಿಶೇಷ ಆರ್ಥಿಕ ವಲಯ: ವಿಶೇಷ ಆರ್ಥಿಕ ವಲಯಗಳಲ್ಲಿನ (SEZ) ಅರ್ಹ ಉತ್ಪಾದನಾ ಘಟಕಗಳು ದೇಶೀಯ ಮಾರುಕಟ್ಟೆಗೆ ರಿಯಾಯಿತಿ ದರದಲ್ಲಿ ಮಾರಾಟ ಮಾಡಲು ಅನುಕೂಲವಾಗುವಂತೆ ಒಂದು ಬಾರಿಯ ವಿಶೇಷ ಕ್ರಮ ಘೋಷಣೆ. ಇಂತಹ ಮಾರಾಟದ ಪ್ರಮಾಣವು ಅವುಗಳ ಒಟ್ಟು ರಫ್ತಿನ ನಿಗದಿಪಡಿಸಿದ ಪ್ರಮಾಣಕ್ಕೆ ಸೀಮಿತವಾಗಿರುತ್ತದೆ.
ಉದ್ಯೋಗ: ಉದ್ಯೋಗಗಳ ಮೇಲೆ ಕೃತಕ ಬುದ್ಧಿಮತ್ತೆಯ (AI) ಪ್ರಭಾವದ ಕುರಿತು ಅಧ್ಯಯನ ನಡೆಸಲು ಸಮಿತಿ ರಚನೆ. ಆರೋಗ್ಯ ಕ್ಷೇತ್ರದಲ್ಲಿ ಕೌಶಲ್ಯ ಅಭಿವೃದ್ಧಿಗೆ ಒತ್ತು ಮತ್ತು 5 ವೈದ್ಯಕೀಯ ಪ್ರವಾಸೋದ್ಯಮ ಹಬ್‌ಗಳ ಸ್ಥಾಪನೆಗೆ ಯೋಜನೆ.

