ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ಬಾರಿ ಭಾನುವಾರ ಬಜೆಟ್ ಮಂಡನೆ ಮಾಡಲಿದ್ದಾರೆಯೇ?. ಸದ್ಯದ ಮಾಹಿತಿ ಪ್ರಕಾರ ಹೌದು. ಸಂಸತ್ತಿನ ಬಜೆಟ್ ಅಧಿವೇಶನವು ಜನವರಿ 28ರಿಂದ ಪ್ರಾರಂಭವಾಗಲಿದೆ ಮತ್ತು ಫೆಬ್ರವರಿ 1ರಂದು ಕೇಂದ್ರ ಬಜೆಟ್ ಮಂಡನೆಯಾಗುವ ನಿರೀಕ್ಷೆ ಇದೆ.
ರಾಜಕೀಯ ವ್ಯವಹಾರಗಳ ಸಂಪುಟ ಸಮಿತಿ ಫೆಬ್ರವರಿ 1ರ ಭಾನುವಾರ ಬಜೆಟ್ ಮಂಡನೆ ಮಾಡುವ ಪ್ರಸ್ತಾಪಕ್ಕೆ ಬುಧವಾರ ಒಪ್ಪಿಗೆ ನೀಡಿದೆ ಎಂದು ಮೂಲಗಳು ತಿಳಿಸಿವೆ. ಆದರೆ ದಿನಾಂಕಗಳ ಬಗ್ಗೆ ಅಂತಿಮ ನಿರ್ಧಾರವನ್ನು ಇನ್ನೂ ತೆಗೆದುಕೊಳ್ಳಲಾಗಿಲ್ಲ.
ಬಜೆಟ್ ಅಧಿವೇಶನವು ಈ ಕ್ಯಾಲೆಂಡರ್ ವರ್ಷದ ಸಂಸತ್ತಿನ ಮೊದಲ ಅಧಿವೇಶನವಾಗಿದೆ. ಆದ್ದರಿಂದ ಸಂಸತ್ತಿನ ಉಭಯ ಸದನಗಳ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಷ್ಟ್ರಪತಿಗಳು ಭಾಷಣ ಮಾಡುವ ಮೂಲಕ ಬಜೆಟ್ ಅಧಿವೇಶನ ಪ್ರಾರಂಭವಾಗಬೇಕಿದೆ.
ಕಳೆದ ಹಲವಾರು ವರ್ಷಗಳಿಂದ ಫೆಬ್ರವರಿ 1ರಂದೇ ಕೇಂದ್ರ ಬಜೆಟ್ ಅನ್ನು ಮಂಡಿಸಲಾಗುತ್ತಿದೆ. ಈ ವರ್ಷ ಫೆಬ್ರವರಿ 1 ಭಾನುವಾರವಾಗಿದ್ದರೂ ಸಹ ಬಜೆಟ್ ಮಂಡನೆ ಮಾಡಲಾಗುತ್ತದೆಯೇ?. ಸರ್ಕಾರವು ಬಜೆಟ್ ಮಂಡನೆಯ ದಿನಾಂಕವನ್ನು ಅಧಿಕೃತವಾಗಿ ಘೋಷಣೆ ಮಾಡಿಲ್ಲ.
26 ವರ್ಷಗಳ ಬಳಿಕ ಬಜೆಟ್: ಭಾನುವಾರ ಷೇರು ಮಾರುಕಟ್ಟೆ ಬಂದ್ ಆಗಿರುತ್ತದೆ. ಸರ್ಕಾರಿ ಕಚೇರಿಗಳಿಗೆ ರಜೆ ಇರುತ್ತದೆ. ಆದ್ದರಿಂದ ಅಂದು ಬಜೆಟ್ ಮಂಡನೆ ಮಾಡುವುದಿಲ್ಲ. ಕೇಂದ್ರ ಸರ್ಕಾರ ಈಗ ಹಲವು ವರ್ಷಗಳಿಂದ ಫೆಬ್ರವರಿ 1ರಿಂದ ಬಜೆಟ್ ಮಂಡಿಸುತ್ತಿದೆ. ಆದರೆ ಈ ಬಾರಿ ಫೆಬ್ರವರಿ 1 ಭಾನುವಾರ ವಾದ ಕಾರಣ ಬಜೆಟ್ ಮಂಡನೆ ಯಾವಾಗ? ಎಂಬುದು ಕುತೂಹಲ.
26 ವರ್ಷಗಳ ಹಿಂದೆ ಭಾನುವಾರ ಸಂಸತ್ನಲ್ಲಿ ಕೇಂದ್ರ ಬಜೆಟ್ ಮಂಡನೆ ಮಾಡಲಾಗಿತ್ತು. ಬಳಿಕ ಯಾವತ್ತೂ ಸಹ ಬಜೆಟ್ ಮಂಡನೆಯನ್ನು ಭಾನುವಾರ ಮಾಡಿಲ್ಲ. ಆದ್ದರಿಂದ ಈ ಬಾರಿ ಫೆಬ್ರವರಿ 1ರಂದು ಬಜೆಟ್ ಮಂಡನೆ ಮಾಡಲಾಗುತ್ತದೆಯೇ? ಎಂಬ ಕುರಿತು ಚರ್ಚೆಗಳು ನಡೆಯುತ್ತಿವೆ.
ಸಾಮಾನ್ಯವಾಗಿ ಸಂಸತ್ ಬಜೆಟ್ ಅಧಿವೇಶನವನ್ನು ಎರಡು ಭಾಗವಾಗಿ ವಿಂಗಡಿಸಲಾಗುತ್ತದೆ. ವಿವಿಧ ಸಚಿವಾಲಯಗಳ ಅನುದಾನದ ಬೇಡಿಕೆಗಳನ್ನು ಸಂಸದೀಯ ಸ್ಥಾಯಿ ಸಮಿತಿಗಳು ಪರಿಶೀಲಿಸಲು ಅನುಕೂಲ ಮಾಡಿಕೊಡಲು ಈ ಬಿಡುವು ನೀಡಲಾಗುತ್ತದೆ.
ಭಾರತವು ಮುಂದಿನ ತಿಂಗಳು ಎಐ ಇಂಪ್ಯಾಕ್ಟ್ ಸಮ್ಮಿಟ್ ಅನ್ನು ಸಹ ಆಯೋಜಿಸಲಿದೆ. ಆದ್ದರಿಂದ ಬಜೆಟ್ ಅಧಿವೇಶನದ ಆರಂಭಕ್ಕಾಗಿ ಸಿಸಿಪಿಎ ಜನವರಿ 28 ಮತ್ತು ಜನವರಿ 31 ಈ ಎರಡು ದಿನಾಂಕಗಳ ಬಗ್ಗೆ ಚರ್ಚಿಸಿದ್ದು, ಶೀಘ್ರದಲ್ಲೇ ಅಂತಿಮ ನಿರ್ಧಾರ ನಿರೀಕ್ಷಿಸಲಾಗಿದೆ.
ಬಜೆಟ್ ಮಂಡನೆ ಜೊತೆಗೆ ಅಧಿವೇಶನದಲ್ಲಿ ಹಲವಾರು ಹೊಸ ಮಸೂದೆಗಳನ್ನು ಮಂಡಿಸಲಾಗುತ್ತದೆ. ಆ ಕುರಿತು ಚರ್ಚೆಗಳು ಸಹ ನಡೆಯಬೇಕಿದೆ. ಆದ್ದರಿಂದ ಬಜೆಟ್ ಮಂಡನೆ, ರಾಷ್ಟ್ರಪತಿಗಳ ಭಾಷಣದ ಮೇಲಿನ ಚರ್ಚೆಯನ್ನು ಅಧಿವೇಶನದ ಮೊದಲ ಹಂತ ಎಂದು ಪ್ರಸ್ತಾಪಿಸಲಾಗಿದೆ.
2ನೇ ಹಂತದ ಅಧಿವೇಶನದಲ್ಲಿ ವಿವಿಧ ಮಸೂದೆಗಳ ಮಂಡನೆ, ಅವುಗಳ ಮೇಲಿನ ಚರ್ಚೆ, ಪ್ರಧಾನಿಗಳ ಉತ್ತರ ಎಂದು ಪ್ರಸ್ತಾಪಿಸಲಾಗಿದೆ. ಆದರೆ ಕೇಂದ್ರ ಸರ್ಕಾರ ಇನ್ನೂ ಬಜೆಟ್ ಅಧಿವೇಶನದ ಅಂತಿಮ ದಿನಾಂಕ ಪ್ರಕಟಿಸಿಲ್ಲ. ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಅಂತಿಮ ತೀರ್ಮಾನ ಕೈಗೊಳ್ಳುವ ನಿರೀಕ್ಷೆ ಇದೆ.
ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಈಗಾಗಲೇ ಬಜೆಟ್ ಮಂಡನೆ ತಯಾರಿ ಆರಂಭಿಸಿದ್ದು, ಹಲವಾರು ಸಭೆಗಳನ್ನು ನಡೆಸುತ್ತಿದ್ದಾರೆ. ವಿವಿಧ ವಲಯಗಳ ಬಜೆಟ್ ಬೇಡಿಕೆಗಳ ಕುರಿತು ಮಾಹಿತಿ ಸಂಗ್ರಹ ಮಾಡುತ್ತಿದ್ದಾರೆ.

