ಬ್ರಿಟನ್ ಸಂಸತ್ತು ಐತಿಹಾಸಿಕ ‘ತಂಬಾಕು ಮತ್ತು ವೇಪ್ಸ್ ಮಸೂದೆ’ಯನ್ನು (Tobacco and Vapes Bill) ಅಂಗೀಕರಿಸುವ ಮೂಲಕ ಜಗತ್ತಿನಲ್ಲೇ ಅತ್ಯಂತ ಕಟ್ಟುನಿಟ್ಟಾದ ಧೂಮಪಾನ ವಿರೋಧಿ ನಿಯಮವನ್ನು ಜಾರಿಗೆ ತರಲು ಮುಂದಾಗಿದೆ. ಈ ಹೊಸ ಕಾನೂನಿನ ಪ್ರಕಾರ, ಡಿಸೆಂಬರ್ 31, 2008ರ ನಂತರ ಜನಿಸಿದ ಯಾವುದೇ ವ್ಯಕ್ತಿಗೆ ಸಿಗರೇಟ್ ಅಥವಾ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಯುವ ಪೀಳಿಗೆಯ ರಕ್ಷಣೆಯೇ ಗುರಿ: ಬ್ರಿಟನ್‌ನಲ್ಲಿ ಈಗಾಗಲೇ 18 ವರ್ಷದೊಳಗಿನವರಿಗೆ ಸಿಗರೇಟ್ ಮಾರಾಟ ಮಾಡುವುದು ಕಾನೂನುಬಾಹಿರವಾಗಿದೆ. ಆದರೆ, ಹೊಸ ಮಸೂದೆಯು ಧೂಮಪಾನ ಮುಕ್ತ ಸಮಾಜವನ್ನು ನಿರ್ಮಿಸುವ ಗುರಿ ಹೊಂದಿದ್ದು, ಪ್ರತಿ ವರ್ಷ ಧೂಮಪಾನ ಮಾಡುವ ವಯೋಮಿತಿಯನ್ನು ಹೆಚ್ಚಿಸುತ್ತಾ ಹೋಗುತ್ತದೆ. ಇದರಿಂದಾಗಿ ಇಂದಿನ ಯುವ ಪೀಳಿಗೆಯು ಅವರ ಜೀವಮಾನವಿಡೀ ಕಾನೂನುಬದ್ಧವಾಗಿ ತಂಬಾಕು ಖರೀದಿಸಲು ಸಾಧ್ಯವಾಗುವುದಿಲ್ಲ. ಈ ಮಸೂದೆಯು ಈಗ ಕಿಂಗ್ ಚಾರ್ಲ್ಸ್ III ಅವರ ಅನುಮೋದನೆಗಾಗಿ ಕಳುಹಿಸಲಾಗಿದೆ.
ಮಸೂದೆಯ ಪ್ರಮುಖ ಅಂಶಗಳು:
- ಈ ಕಾನೂನು ಜಾರಿಗೆ ಬಂದ ನಂತರ ಸರ್ಕಾರಕ್ಕೆ ತಂಬಾಕು, ಇ-ಸಿಗರೇಟ್ ಮತ್ತು ನಿಕೋಟಿನ್ ಉತ್ಪನ್ನಗಳನ್ನು ನಿಯಂತ್ರಿಸುವ ಹೆಚ್ಚಿನ ಅಧಿಕಾರ ಸಿಗಲಿದೆ.
- ಯುವಕರನ್ನು ಆಕರ್ಷಿಸುವ ಸಿಗರೇಟ್‌ನ ಫ್ಲೇವರ್‌ಗಳು (Flavors) ಮತ್ತು ಆಕರ್ಷಕ ಪ್ಯಾಕೇಜಿಂಗ್‌ಗಳ ಮೇಲೆ ಕಟ್ಟುನಿಟ್ಟಿನ ನಿಯಂತ್ರಣ ಹೇರಲು ಮಂತ್ರಿಗಳಿಗೆ ಅಧಿಕಾರ ನೀಡಲಾಗಿದೆ.
- 1970ರ ದಶಕದಿಂದ ಬ್ರಿಟನ್‌ನಲ್ಲಿ ಧೂಮಪಾನಿಗಳ ಸಂಖ್ಯೆ ಮೂರನೇ ಎರಡರಷ್ಟು ಕಡಿಮೆಯಾಗಿದ್ದು, ಪ್ರಸ್ತುತ ದೇಶದ ಶೇ. 13ರಷ್ಟು ಜನಸಂಖ್ಯೆ (ಸುಮಾರು 64 ಲಕ್ಷ ಜನರು) ಧೂಮಪಾನ ಮಾಡುತ್ತಾರೆ.
ಐತಿಹಾಸಿಕ ಮೈಲಿಗಲ್ಲು: ಈ ನಿರ್ಧಾರವನ್ನು ಆರೋಗ್ಯ ಸಂಸ್ಥೆಗಳು ಮತ್ತು ಕ್ಯಾನ್ಸರ್ ಸಂಶೋಧನಾ ಕೇಂದ್ರಗಳು ಸ್ವಾಗತಿಸಿವೆ. “ಇದು ನಮ್ಮ ಮಕ್ಕಳನ್ನು ತಂಬಾಕು ವ್ಯಸನದ ಭೀಕರತೆಯಿಂದ ರಕ್ಷಿಸುವ ಮತ್ತು ಧೂಮಪಾನದಿಂದ ಉಂಟಾಗುವ ಕ್ಯಾನ್ಸರ್ ತಡೆಗಟ್ಟುವ ನಿಟ್ಟಿನಲ್ಲಿ ದೊಡ್ಡ ಸಾಧನೆ” ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ಮಸೂದೆಯನ್ನು ಮೊದಲು ರಿಷಿ ಸುನಕ್ ನೇತೃತ್ವದ ಸರ್ಕಾರ ಪ್ರಸ್ತಾಪಿಸಿತ್ತು, ನಂತರ ಬಂದ ಲೇಬರ್ ಪಾರ್ಟಿ ಸರ್ಕಾರವು ಇದನ್ನು ಮತ್ತಷ್ಟು ಬಲಪಡಿಸಿ ಜಾರಿಗೆ ತಂದಿದೆ.
ಪಬ್ ಗಾರ್ಡನ್ ಮತ್ತು ಇತರ ಹೊರಾಂಗಣ ಪ್ರದೇಶಗಳಲ್ಲಿ ಧೂಮಪಾನ ನಿಷೇಧಿಸುವ ಪ್ರಸ್ತಾಪವನ್ನು ಸರ್ಕಾರ ಸದ್ಯಕ್ಕೆ ಕೈಬಿಟ್ಟಿದೆ.

