ಬೆಂಗಳೂರು: ಹಿಂದೂಗಳ ಹೊಸ ವರ್ಷದ ಆರಂಭ ಅಂದರೆ ಅದು ಸಡಗರದ ‘ಯುಗಾದಿ‘. ಈ ಬಾರಿ ಮಾರ್ಚ್ 19ರಂದು (ಗುರುವಾರ) ನಾಡಿನಾದ್ಯಂತ ಯುಗಾದಿ ಹಬ್ಬವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಪುರಾಣಗಳ ಪ್ರಕಾರ ಬ್ರಹ್ಮದೇವ ಈ ಸೃಷ್ಟಿಯನ್ನು ಆರಂಭಿಸಿದ ದಿನವಿದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ಶುಭ ದಿನದಂದು ಕೆಲವು ನಿರ್ದಿಷ್ಟ ವಸ್ತುಗಳನ್ನು ಮನೆಗೆ ತರುವುದರಿಂದ ಆರ್ಥಿಕ ಪ್ರಗತಿ, ಸುಖ-ಶಾಂತಿ ಮತ್ತು ಸಮೃದ್ಧಿ ನೆಲೆಸುತ್ತದೆ ಎಂಬ ಅಚಲ ನಂಬಿಕೆಯಿದೆ.
ಹಾಗಾದರೆ, ಈ ಯುಗಾದಿಯಂದು ನಿಮ್ಮ ಅದೃಷ್ಟ ಬದಲಿಸಲು ಮನೆಗೆ ತರಬೇಕಾದ ಆ 5 ಅದೃಷ್ಟದ ವಸ್ತುಗಳು ಯಾವುವು? ಇಲ್ಲಿದೆ ನೋಡಿ ಕಂಪ್ಲೀಟ್ ಡಿಟೇಲ್ಸ್…
1. ಸಮೃದ್ಧಿಯ ಸಂಕೇತ ಕಲ್ಲು ಉಪ್ಪು
ಹಳೆಯ ಕಾಲದಿಂದಲೂ ಉಪ್ಪನ್ನು ಲಕ್ಷ್ಮಿಯ ಸ್ವರೂಪ ಮತ್ತು ಶುದ್ಧತೆಯ ಸಂಕೇತ ಎನ್ನಲಾಗುತ್ತದೆ. ಯುಗಾದಿಯ ದಿನ ಹೊಸದಾಗಿ ಒಂದು ಪ್ಯಾಕೆಟ್ ಕಲ್ಲು ಉಪ್ಪು ಖರೀದಿಸಿ ಮನೆಗೆ ತಂದರೆ ಹಣಕಾಸಿನ ಹರಿವು ಸುಗಮವಾಗುತ್ತದೆ. ಇದು ಮನೆಯಲ್ಲಿರುವ ನಕಾರಾತ್ಮಕ ಶಕ್ತಿಯನ್ನು ಹೊರಹಾಕಿ, ಶಾಂತಿ ನೆಲೆಸುವಂತೆ ಮಾಡುತ್ತದೆ.
2. ಲಕ್ಷ್ಮಿಯ ರೂಪ ಅಕ್ಕಿ
ಅಕ್ಕಿಯನ್ನು ಅನ್ನಪೂರ್ಣೇಶ್ವರಿಯ ಸ್ವರೂಪವೆಂದು ಪರಿಗಣಿಸಲಾಗುತ್ತದೆ. ಯುಗಾದಿ ದಿನ ಹೊಸ ಅಕ್ಕಿಯನ್ನು ಮನೆಗೆ ತಂದು, ತಟ್ಟೆಯಲ್ಲಿ ಹರಡಿ ಅರಿಶಿನ-ಕುಂಕುಮದಿಂದ ಪೂಜಿಸಿ ಹಣ ಇಡುವ ಜಾಗದಲ್ಲಿ ಇಟ್ಟರೆ, ಮನೆಯಲ್ಲಿ ಧನ-ಧಾನ್ಯಗಳಿಗೆ ಎಂದಿಗೂ ಕೊರತೆಯಾಗುವುದಿಲ್ಲ ಎಂಬ ನಂಬಿಕೆಯಿದೆ.
3. ಸೌಭಾಗ್ಯ ತರುವ ಅರಿಶಿನದ ಕೊಂಬು
ಮಹಾಲಕ್ಷ್ಮಿ ಮತ್ತು ವಿಷ್ಣುವಿಗೆ ಅತ್ಯಂತ ಪ್ರಿಯವಾದ ಅರಿಶಿನ ಸಕಲ ಶುಭ ಕಾರ್ಯಗಳ ಮೂಲ. ಯುಗಾದಿಯಂದು ಸಮ ಸಂಖ್ಯೆಯಲ್ಲಿ (ಉದಾಹರಣೆಗೆ 2, 4, 6…) ಅರಿಶಿನದ ಕೊಂಬುಗಳನ್ನು ತಂದು, ತೋರಣ ಮಾಡಿ ಮುಖ್ಯದ್ವಾರಕ್ಕೆ ಕಟ್ಟಬೇಕು. ಇದರಿಂದ ಮನೆಯೊಳಗೆ ಧನ ಆಕರ್ಷಣೆಯಾಗಿ ವ್ಯಾಪಾರ-ವ್ಯವಹಾರದಲ್ಲಿ ಲಾಭ ಉಂಟಾಗುತ್ತದೆ.
4. ದೈವಿಕ ಶಕ್ತಿಯ ಶಂಖ
ಶಂಖವು ಪವಿತ್ರತೆ ಮತ್ತು ವಿಜಯದ ಸಂಕೇತ. ಯುಗಾದಿಯಂದು ದಕ್ಷಿಣಾವರ್ತಿ ಶಂಖವನ್ನು ಮನೆಗೆ ತಂದು ಪೂಜಾ ಕೋಣೆಯಲ್ಲಿ ಇರಿಸುವುದರಿಂದ ಆರ್ಥಿಕ ಸಂಕಷ್ಟಗಳು ದೂರವಾಗುತ್ತವೆ. ಇದು ಮನೆಯ ವಾತಾವರಣವನ್ನು ಶುದ್ಧೀಕರಿಸಿ ದೈವಿಕ ಶಕ್ತಿಯನ್ನು ಆಕರ್ಷಿಸುತ್ತದೆ.
5. ಅದೃಷ್ಟದ ಒಂಟಿ ಕಣ್ಣಿನ ತೆಂಗಿನಕಾಯಿ
ಸಾಮಾನ್ಯವಾಗಿ ತೆಂಗಿನಕಾಯಿಗೆ ಮೂರು ಕಣ್ಣುಗಳಿರುತ್ತವೆ. ಆದರೆ ಅಪರೂಪವಾಗಿ ಸಿಗುವ ‘ಏಕಾಕ್ಷಿ’ ಅಥವಾ ಒಂಟಿ ಕಣ್ಣಿನ ತೆಂಗಿನಕಾಯಿ ಅತ್ಯಂತ ಶಕ್ತಿಶಾಲಿ. ಯುಗಾದಿಯ ಶುಭ ಮುಹೂರ್ತದಲ್ಲಿ ಇದನ್ನು ಮನೆಗೆ ತಂದು ಪೂಜಿಸಿದರೆ, ನಿಮ್ಮ ಜೀವನದ ಎಲ್ಲಾ ಅಡೆತಡೆಗಳು ನಿವಾರಣೆಯಾಗಿ ಅದೃಷ್ಟ ಖುಲಾಯಿಸುತ್ತದೆ.

