ದೇಶಾದ್ಯಂತ ಬ್ಯಾಂಕ್‌ಗಳಲ್ಲಿ ಕೆಲಸದ ದಿನಗಳನ್ನು ವಾರಕ್ಕೆ ಐದು ದಿನಗಳಿಗೆ ಸೀಮಿತಗೊಳಿಸುವಂತೆ ಆಗ್ರಹಿಸಿ ಬ್ಯಾಂಕ್ ನೌಕರರ ಸಂಘಟನೆಗಳು ಹೋರಾಟಕ್ಕೆ ಮುಂದಾಗಿವೆ. 2024ರ ಒಪ್ಪಂದದಲ್ಲಿ ಒಪ್ಪಿಗೆಯಾಗಿದ್ದರೂ 5 ದಿನಗಳ ಬ್ಯಾಂಕಿಂಗ್ ವ್ಯವಸ್ಥೆ ಇನ್ನೂ ಜಾರಿಯಾಗದಿರುವುದು, ಪರಿಷ್ಕೃತ PLI ಯೋಜನೆಗೆ ವಿರೋಧ ಹಾಗೂ ಪಿಂಚಣಿ ಸೇರಿದಂತೆ ಹಲವು ಬಾಕಿ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ UFBU ಸೆಪ್ಟೆಂಬರ್ 11ರಂದು ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿದೆ. ಬೇಡಿಕೆಗಳು ಈಡೇರದಿದ್ದರೆ ಸೆಪ್ಟೆಂಬರ್ 28ರಿಂದ 30ರವರೆಗೆ ಮೂರು ದಿನಗಳ ಮುಷ್ಕರ ಹಾಗೂ ಅಕ್ಟೋಬರ್ 26ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ ಎಚ್ಚರಿಸಿದೆ.
ಹೌದು. ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ (UFBU) ದೇಶಾದ್ಯಂತ ಬ್ಯಾಂಕ್ ಮುಷ್ಕರಕ್ಕೆ ಕರೆ ನೀಡಿದೆ. ಬ್ಯಾಂಕ್‌ಗಳಿಗೆ 5 ದಿನಗಳ ಕೆಲಸದ ವಾರ ಜಾರಿಗೆ ತರುವುದು, ಪರಿಷ್ಕೃತ ಕಾರ್ಯಕ್ಷಮತೆ ಆಧಾರಿತ ಪ್ರೋತ್ಸಾಹಧನ (PLI) ಯೋಜನೆ ಹಿಂಪಡೆಯುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಈ ಮುಷ್ಕರಕ್ಕೆ ಕರೆ ನೀಡಲಾಗಿದೆ.
5 ದಿನಗಳ ಕೆಲಸದ ವಾರಕ್ಕೆ ಬೇಡಿಕೆ ಏಕೆ?
ಬ್ಯಾಂಕ್ ನೌಕರರ ಸಂಘಟನೆಗಳ ಬಹುಕಾಲದ ಬೇಡಿಕೆಯಾದ 5 ದಿನಗಳ ಬ್ಯಾಂಕಿಂಗ್ ವ್ಯವಸ್ಥೆ ಜಾರಿಗೆ ಸಂಬಂಧಿಸಿದಂತೆ 2024ರ ಮಾರ್ಚ್‌ನಲ್ಲಿ ನಡೆದ 12ನೇ ದ್ವಿಪಕ್ಷೀಯ ಒಪ್ಪಂದ (12th Bipartite Settlement) ಹಾಗೂ 9ನೇ ಜಾಯಿಂಟ್ ನೋಟ್‌ನಲ್ಲಿ ಒಪ್ಪಂದವಾಗಿತ್ತು. ಇದರ ಪ್ರಕಾರ, ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿದಿನದ ಕೆಲಸದ ಅವಧಿಯನ್ನು 40 ನಿಮಿಷ ಹೆಚ್ಚಿಸಿ, ಶನಿವಾರ ಮತ್ತು ಭಾನುವಾರ ರಜೆ ನೀಡುವ ಪ್ರಸ್ತಾವವಿತ್ತು.
ಈ ಪ್ರಸ್ತಾವನೆಯನ್ನು ಭಾರತೀಯ ಬ್ಯಾಂಕ್‌ಗಳ ಸಂಘಟನೆ (IBA) ಸರ್ಕಾರಕ್ಕೆ ಶಿಫಾರಸು ಮಾಡಿದ್ದರೂ, ಎರಡು ವರ್ಷಕ್ಕೂ ಹೆಚ್ಚು ಕಾಲ ಕಳೆದರೂ ಸರ್ಕಾರದ ಅನುಮೋದನೆ ದೊರೆತಿಲ್ಲ ಎಂದು UFBU ಆರೋಪಿಸಿದೆ. ಹೀಗಾಗಿ ಒಪ್ಪಂದವನ್ನು ಶೀಘ್ರ ಜಾರಿಗೆ ತರಬೇಕು ಎಂಬುದು ಸಂಘಟನೆಗಳ ಪ್ರಮುಖ ಬೇಡಿಕೆಯಾಗಿದೆ.
PLI ಯೋಜನೆಗೂ ವಿರೋಧ
ಪರಿಷ್ಕೃತ Performance Linked Incentive (PLI) ಯೋಜನೆಯನ್ನೂ ಬ್ಯಾಂಕ್ ಯೂನಿಯನ್‌ಗಳು ವಿರೋಧಿಸಿವೆ. UFBU ಪ್ರಕಾರ, ಹಿರಿಯ ಅಧಿಕಾರಿಗಳಿಗೆ ಹೆಚ್ಚಿನ ಪ್ರಮಾಣದ ಪ್ರೋತ್ಸಾಹಧನ ನೀಡುವ ಮತ್ತು ಇತರ ಸಿಬ್ಬಂದಿಗೆ ಕಡಿಮೆ ಮಿತಿಯನ್ನು ನಿಗದಿಪಡಿಸುವ ಈ ವ್ಯವಸ್ಥೆ ತಾರತಮ್ಯದಿಂದ ಕೂಡಿದೆ.
ಸಂಘಟನೆಗಳ ಪ್ರಕಾರ, Scale IV ಮತ್ತು ಅದಕ್ಕಿಂತ ಮೇಲಿನ ಅಧಿಕಾರಿಗಳಿಗೆ ಗರಿಷ್ಠ 365 ದಿನಗಳ ಮೂಲ ವೇತನ + ತುಟ್ಟಿಭತ್ಯೆ (DA) ಮಟ್ಟದ PLI ದೊರೆಯಬಹುದಾದರೆ, Scale IIIವರೆಗೆ ಇರುವ ಅಧಿಕಾರಿಗಳು ಮತ್ತು ಇತರ ಸಿಬ್ಬಂದಿಗೆ ಗರಿಷ್ಠ 15 ದಿನಗಳ ವೇತನದ ಮಿತಿ ಇರಲಿದೆ. ಈ ವ್ಯವಸ್ಥೆಯನ್ನು ಮರುಪರಿಶೀಲಿಸಬೇಕು ಎಂದು ಯೂನಿಯನ್‌ಗಳು ಒತ್ತಾಯಿಸಿವೆ.
ಬ್ಯಾಂಕ್ ಮುಷ್ಕರದ ದಿನಾಂಕಗಳು
-
ಸೆಪ್ಟೆಂಬರ್ 11, 2026 – ಒಂದು ದಿನದ ರಾಷ್ಟ್ರವ್ಯಾಪಿ ಮುಷ್ಕರ
-
ಸೆಪ್ಟೆಂಬರ್ 28ರಿಂದ 30ರವರೆಗೆ – ಮೂರು ದಿನಗಳ ರಾಷ್ಟ್ರವ್ಯಾಪಿ ಮುಷ್ಕರ
-
ಅಕ್ಟೋಬರ್ 26, 2026ರಿಂದ – ಬೇಡಿಕೆ ಈಡೇರದಿದ್ದರೆ ಅನಿರ್ದಿಷ್ಟಾವಧಿ ರಾಷ್ಟ್ರವ್ಯಾಪಿ ಮುಷ್ಕರ
ಇದರ ಜೊತೆಗೆ ಪಿಂಚಣಿ ಮತ್ತು ಇತರ ಸೇವಾ ಸಂಬಂಧಿತ ಬಾಕಿ ಬೇಡಿಕೆಗಳನ್ನೂ UFBU ಮುಂದಿಟ್ಟಿದೆ. ಸರ್ಕಾರ ಮತ್ತು ಬ್ಯಾಂಕ್ ಆಡಳಿತ ಮಂಡಳಿಗಳು ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ಸಂಘಟನೆಗಳು ಎಚ್ಚರಿಸಿವೆ. ಇದರ ಜೊತೆ ಸೆಪ್ಟೆಂಬರ್ ತಿಂಗಳಿನಲ್ಲಿ ಬ್ಯಾಂಕ್ ಗೆ ಸಾಲು ಸಾಲು ಸರ್ಕಾರಿ ರಜೆಯಿದ್ದು, ಗ್ರಾಹಕರು ಬ್ಯಾಂಕ್ ಕೆಲಸಗಳಿದ್ದರೆ ಆದಷ್ಟು ಬೇಗ ಮುಗಿಸಿಕೊಳ್ಳುವುದು ಒಳಿತು.

