ಉಡುಪಿ: ಅರಬ್ಬಿ ಸಮುದ್ರದಲ್ಲಿ ಟೂರಿಸ್ಟ್ ಬೋಟ್ ಮುಳುಗಿ ಇಬ್ಬರು ಪ್ರವಾಸಿಗರು ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತನಿಖೆಗೆ ಸೂಚಿಸಿದ್ದಾರೆ.
ಉಡುಪಿ ಜಿಲ್ಲೆಯ ಮಲ್ಪೆ ಕೋಡಿಬೆಂಗ್ರೆಯಲ್ಲಿ ಪ್ರವಾಸಿಗರ ಬೋಟ್ ಮುಳುಗಿ ಇಬ್ಬರು ಮೃತಪಟ್ಟಿದ್ದಾರೆ. ಇಬ್ಬರ ಸ್ಥಿತಿ ಗಂಭೀರವಾಗಿದೆ. ಘಟನೆಯ ಬಗ್ಗೆ ತೀವ್ರ ಸಂತಾಪ ಸೂಚಿಸಿರುವ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಪ್ರವಾಸಿಗರ ಬೋಟ್ ಮುಳುಗಿ ಸಾವನ್ನಪ್ಪಿರುವ ಘಟನೆ ಆಘಾತ ತಂದಿದೆ ಎಂದಿದ್ದಾರೆ.
ಘಟನೆಯಲ್ಲಿ ಗಾಯಗೊಂಡವರು ಶೀಘ್ರ ಗುಣಮುಖರಾಗಲಿ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಪ್ರಾರ್ಥಿಸಿದ್ದಾರೆ. ಇದೇ ವೇಳೆ ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಹಾಗೂ ಬೋಟ್ ಮುಳುಗಿ ಸಾವು ಪ್ರಕರಣದ ಬಗ್ಗೆ ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.
ಉಡುಪಿ ಜಿಲ್ಲೆಯ ಮಲ್ಪೆ ಕೋಡಿಬೆಂಗ್ರೆ ಬಳಿ ಪ್ರವಾಸಿಗರ ಬೋಟ್ ಮುಳುಗಡೆಯಾಗಿ ಶಂಕ್ರಪ್ಪ (22) ಹಾಗೂ ದಿಶಾ (23) ಎಂಬುವವರು ಮೃತಪಟ್ಟಿದ್ದಾರೆ. ಇಬ್ಬರ ಸ್ಥಿತಿ ಗಂಭೀರವಾಗಿದೆ. ಮೃತರು ಮೈಸೂರು ಜಿಲ್ಲೆಯ ಸರಸ್ವತಿಪುರಂ ಮೂಲದವರಾಗಿದ್ದು, ಅಲ್ಲಿನ ಕಾಲ್ ಸೆಂಟರ್ ನಲ್ಲಿ ಕೆಲಸಮಾಡುತ್ತಿದ್ದರು.
ಒಟ್ಟು 15 ಜನ ಪ್ರವಾಸಿಗರು ಉಡುಪಿ ಪ್ರವಾಸಕ್ಕೆ ಬಂದಿದ್ದರು. ಈ ವೇಳೆ ಕೋಡಿಬಂಗ್ರೆ ಡೆಲ್ಟಾ ಬೀಚ್ ನಿಂದ ಟೂರಿಸ್ಟ್ ಬೋಟ್ ನಲ್ಲಿ ವಿಹಾರಕ್ಕೆ ಹೋಗಿದ್ದಾಗ ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿದ ದೋಣಿ ಪಲ್ಟಿಯಾಗಿದೆ. ಹಂಗಾರಕಟ್ಟೆಯ ಶಿಪ್ ಬಿಲ್ಡಿಂಗ್ ಪ್ರದೇಶದ ಬಳಿ ನದಿ-ಸಮುದ್ರ ಸೇರುವ ಸ್ಥಳದಲ್ಲಿ ಬೋಟ್ ಏಕಾಏಕಿ ಪಲ್ಟಿಯಾಗಿದೆ. ದೋಣಿಯಲ್ಲಿದ್ದ 15 ಜನರು ಸಮುದ್ರಕ್ಕೆ ಬಿದ್ದಿದ್ದಾರೆ. ಬೋಟ್ ನಲ್ಲಿದ್ದ ಕೆಲವರು ಲೈಫ್ ಜಾಕೇಟ್ ಧರಿಸಿದ್ದರಿಂದ ಬಚಾವ್ ಆಗಿದ್ದಾರೆ. ಇನ್ನೊಂದು ದೋಣಿಯಲ್ಲಿದ್ದವರು ನೀರುಪಾಲಾಗುತ್ತಿರುವವರನ್ನು ರಕ್ಷಿಸಿ ದಡಕ್ಕೆ ಕರೆತಂದಿದ್ದಾರೆ. ಅಷ್ಟೊತ್ತಿಗಾಗಲೇ ನಾಲ್ವರ ಸ್ಥಿತಿ ಗಂಭೀರವಾಗಿತ್ತು. ಅವರಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಇನ್ನಿಬ್ಬರ ಸ್ಥಿತಿ ಗಂಭೀರವಾಗಿದೆ. ಅಸ್ವಸ್ಥರನ್ನು ಉಡುಪಿ ಆಸ್ಪತ್ರೆಗೆ ದಾಖಲಿಸಲಾಗಿದೆ.

