ಕರ್ನಾಟಕದಲ್ಲಿ ಹಲವಾರು ವಿಮಾನ ನಿಲ್ದಾಣ ಯೋಜನೆಗಳ ಕುರಿತು ಚರ್ಚೆಗಳು ನಡೆಯುತ್ತಿವೆ. ಬೆಂಗಳೂರು ನಗರದಲ್ಲಿ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸರ್ಕಾರ ಆಸಕ್ತಿ ತೋರಿದೆ.
ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಕೆಲವೇ ದಿನಗಳಲ್ಲಿ ಲೋಕಾರ್ಪಣೆಯಾಗಲಿದೆ. ಹಾಸನ ವಿಮಾನ ನಿಲ್ದಾಣ ಕಾಮಗಾರಿ ನಡೆಯುತ್ತಿದೆ. ಮೈಸೂರು ವಿಮಾನದ ರನ್ ವೇ ವಿಸ್ತರಣೆ ಕುರಿತು ಚರ್ಚೆಗಳು ಸಾಗಿವೆ.
ಈಗ ಉಡುಪಿ ಜಿಲ್ಲೆಯ ವಿಮಾನ ನಿಲ್ದಾಣದ ಕುರಿತು ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅಪ್‌ಡೇಟ್ ನೀಡಿದ್ದಾರೆ. ಸದ್ಯ ಉಡುಪಿಗೆ ಹತ್ತಿರ ಇರುವ ವಿಮಾನ ನಿಲ್ದಾಣಗಳು ಮಂಗಳೂರು, ಶಿವಮೊಗ್ಗ.
ಕೋಟ ಶ್ರೀನಿವಾಸ ಪೂಜಾರಿ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದು, ಕರ್ನಾಟಕ ಸರಕಾರ ಸಹಕಾರ ನೀಡಿದರೆ ಪಡುಬಿದ್ರೆ ಎರ್ಮಾಳು ವಿಮಾನ ನಿಲ್ದಾಣ. ನನ್ನ ಮನವಿಗೆ ಕೇಂದ್ರ ವಿಮಾನಯಾನ ಸಚಿವರಿಂದ ಪತ್ರ ಎಂದು ಹೇಳಿದ್ದಾರೆ.
ಕರ್ನಾಟಕ ರಾಜ್ಯ ಸರ್ಕಾರ ಸೂಕ್ತ ನೆರವು ನೀಡಿದರೆ ಮುಂದಿನ ದಿನಗಳಲ್ಲಿ ಉಡುಪಿ ಜಿಲ್ಲೆಯ, ಪಡುಬಿದ್ರೆ ಬಳಿಯ ಎರ್ಮಾಳಿನ ವಿಮಾನ ನಿಲ್ದಾಣ ಯೋಜನೆಯನ್ನು ಕೈಗೆತ್ತಿಕೊಳ್ಳಬಹುದಾಗಿದೆ ಎಂದು ವಿಮಾನಯಾನ ಸಚಿವ ಕಿಂಜರಪು ರಾಮ್ ಮೋಹನ್ ನಾಯ್ಡು ನನ್ನ ಮನವಿಗೆ ಸ್ಪಂದಿಸಿ ಬರೆದ ಪತ್ರದಲ್ಲಿ ತಿಳಿಸಿದ್ದಾರೆ ಎಂದು ಸಂಸದರು ಪೋಸ್ಟ್‌ನಲ್ಲಿ ಮಾಹಿತಿ ನೀಡಿದ್ದಾರೆ.
ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರ ಕೋರಿಕೆಯ ಮೇರೆಗೆ ನಾನು ಎರ್ಮಾಳಿನಲ್ಲಿ ನೂತನ ವಿಮಾನ ನಿಲ್ದಾಣಕ್ಕೆ ಕೇಂದ್ರ ಸಚಿವರಿಗೆ ಮನವಿ ಸಲ್ಲಿಸಿದ್ದೆ. ಈ ಬಗ್ಗೆ ಸಚಿವರು ನನಗೆ ಬರೆದ ಪತ್ರದಲ್ಲಿ ಉಡಾನ್ ಯೋಜನೆಯಾದ ವಿಮಾನ ನಿಲ್ದಾಣ ಅಭಿವೃದ್ಧಿ ಮತ್ತು ಸುಧಾರಣೆಗಾಗಿ ಕೇಂದ್ರದ ಸಹಕಾರ ನೀಡಲು ಸಮ್ಮತಿ ಇದ್ದು ಸೂಕ್ತವಾದ ಸ್ಥಳವನ್ನು ಗುರುತಿಸಿ, ಯೋಜನೆಯ ಕಾರ್ಯ ಸಾಧ್ಯತೆಯ ಅಧ್ಯಯನ ನಡೆಸಿ, ಕೇಂದ್ರ ಸರಕಾರಕ್ಕೆ ಪ್ರಸ್ತಾಪನೆ ಸಲ್ಲಿಸುವಂತೆ ಸಲಹೆ ನೀಡಿದ್ದಾರೆ ಎಂದು ವಿವರಣೆ ನೀಡಿದ್ದಾರೆ.
ಭಾರತ ಸರಕಾರದ ಗ್ರೀನ್ ಫೀಲ್ಡ್ ನೀತಿಯಂತೆ ಕೇಂದ್ರ ಸರಕಾರ ನೆರವು ನೀಡಲಿದೆ ಎಂದು ಕೇಂದ್ರ ವಿಮಾನಯಾನ ಸಚಿವ ಕಿಂಜರಪು ರಾಮ್ ಮೋಹನ್ ನಾಯ್ಡು ಬರೆದ ಪತ್ರದಲ್ಲಿ ತಿಳಿಸಿದ್ದಾರೆ. ನನ್ನ ಮನವಿಗೆ ಸೂಕ್ತವಾಗಿ ಸ್ಪಂದಿಸಿದ ಗೌರವಾನ್ವಿತ ಸಚಿವರಿಗೆ ಧನ್ಯವಾದಗಳು. ಈ ಬಗ್ಗೆ ರಾಜ್ಯ ಸರ್ಕಾರದ ಗಮನ ಸೆಳೆಯಲಾಗುವುದು ಎಂದು ಸಂಸದರು ಹೇಳಿದ್ದಾರೆ.
ಕೊಲ್ಲೂರು ಮೂಕಾಂಬಿಕಾ ಕಾರಿಡಾರ್: ಉಡುಪಿ ಜಿಲ್ಲೆ ಪ್ರವಾಸೋದ್ಯಮ, ದೇವಾಲಯಗಳಿಗೆ ಪ್ರಸಿದ್ಧಿಯನ್ನು ಪಡೆದಿದೆ. ಕೊಲ್ಲೂರು ಮೂಕಾಂಬಿಕಾ ದೇವಾಲಯ ಜಿಲ್ಲೆಯ ಬೈಂದೂರು ತಾಲೂಕಿನಲ್ಲಿದೆ. ಕರ್ನಾಟಕ ಮಾತ್ರವಲ್ಲದೇ ವಿವಿಧ ರಾಜ್ಯಗಳ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ.
ಇದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುತ್ತದೆ. ಆದ್ದರಿಂದ ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ‘ಕೊಲ್ಲೂರು ಮೂಕಾಂಬಿಕಾ ಕಾರಿಡಾರ್’ ಯೋಜನೆಯನ್ನು ಕೇಂದ್ರ ಸರ್ಕಾರದ ಮುಂದೆ ಪ್ರಸ್ತಾಪಿಸಿದ್ದಾರೆ.
ಸಂಸದ ಬಿ. ವೈ. ರಾಘವೇಂದ್ರ ಈ ಕುರಿತು ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್, ಕೇಂದ್ರ ವಿಮಾನಯಾನ ಸಚಿವ ಕಿಂಜರಾಪು ರಾಮ ಮೋಹನ ನಾಯ್ಡು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಈ ಯೋಜನೆಯಲ್ಲಿ ಬೈಂದೂರಿನಲ್ಲಿ ‘ಮೂಕಾಂಬಿಕಾ ವಿಮಾನ ನಿಲ್ದಾಣ’ ನಿರ್ಮಾಣ ಮಾಡುವುದು ಸೇರಿದೆ. ಬೈಂದೂರು ವಿಧಾನಸಭಾ ವ್ಯಾಪ್ತಿಯ ಒತ್ತಿನೆಣೆಯಲ್ಲಿ ಮೂಕಾಂಬಿಕಾ ವಿಮಾನ ನಿಲ್ದಾಣ ಮಂಜೂರು ಮಾಡಲು ಮನವಿ ಸಲ್ಲಿಸಲಾಗಿದೆ.
ಮೂಕಾಂಬಿಕಾ ದೇವಾಲಯವು ದಕ್ಷಿಣ ಭಾರತದ ಪ್ರಸಿದ್ಧ ಯಾತ್ರಾ ಕೇಂದ್ರ. ವಿವಿಧ ರಾಜ್ಯಗಳಿಂದ ಹಾಗೂ ಹೊರದೇಶಗಳಿಂದ ಪ್ರತಿದಿನ 10,000ಕ್ಕೂ ಹೆಚ್ಚು ಭಕ್ತರು ದೇವಾಲಯಕ್ಕೆ ಭೇಟಿ ನೀಡುತ್ತಾರೆ ಎಂದು ಸಚಿವರಿಗೆ ಸಂಸದರು ವಿವರಣೆ ನೀಡಿದ್ದಾರೆ.
ಬೈಂದೂರು ಮೂಕಾಂಬಿಕಾ ರೋಡ್ ರೈಲ್ವೆ ನಿಲ್ದಾಣ ಹಾಗೂ ಬಸ್ ನಿಲ್ದಾಣದ ಅತೀ ಸಮೀಪವಿರುವ ಒತ್ತಿನೆಣೆಯಲ್ಲಿ ಸುಮಾರು 500 ಎಕರೆಗೂ ಅಧಿಕ ಸ್ಥಳ ಲಭ್ಯವಿದೆ. ಅಲ್ಲಿ ವಿಮಾನ ನಿಲ್ದಾಣ ನಿರ್ಮಿಸಿದರೆ ಭಕ್ತಾದಿಗಳಿಗೆ ಅನುಕೂಲವಾಗಲಿದೆ ಎಂದು ಮನವಿ ಸಲ್ಲಿಕೆ ಮಾಡಲಾಗಿದೆ.

