ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನಿರ್ಗಮಿಸುವ ಪ್ರಯಾಣಿಕರಿಂದ ವಸೂಲಿ ಮಾಡುತ್ತಿದ್ದ ಬಳಕೆದಾರರ ಅಭಿವೃದ್ಧಿ ಶುಲ್ಕ(ಯುಡಿಎಫ್) ಇಳಿಕೆ ಮಾಡಲಾಗಿದೆ.
2026- 27ರಿಂದ 2030- 31ರವರೆಗಿನ ಬಳಕೆದಾರರ ಅಭಿವೃದ್ಧಿ ಶುಲ್ಕ(ಯುಡಿಎಫ್) ಇಳಿಕೆ ಮಾಡಲಾಗಿದೆ. ದೇಶಿಯ ಪ್ರಯಾಣಿಕರ ನಿರ್ಗಮನಕ್ಕೆ 300 ರೂ. ಮತ್ತು ಆಗಮನಕ್ಕೆ 125 ರೂ., ಅಂತರಾಷ್ಟ್ರೀಯ ಪ್ರಯಾಣಿಕರ ನಿರ್ಗಮನಕ್ಕೆ 997 ರೂಪಾಯಿ ಮತ್ತು ಆಗಮನಕ್ಕೆ 426 ರೂಪಾಯಿ ಯುಡಿಎಫ್ ಪಾವತಿಸಬೇಕಿದೆ.
ಈ ಹಿಂದೆ ಆಗಮನ ಮತ್ತು ನಿರ್ಗಮನ ಪ್ರಯಾಣಿಕರಿಗೆ ಎರಡನ್ನೂ ಸೇರಿಸಿ ಯುಡಿಎಫ್ ಶುಲ್ಕ ವಿಧಿಸಲಾಗುತ್ತಿತ್ತು. ನೂತನ ಆದೇಶದಿಂದ ಎರಡನ್ನು ಪ್ರತ್ಯೇಕಗೊಳಿಸಿ ಪರಿಚಯಿಸಲಾಗಿದೆ. ಈ ಹಿಂದೆ ದೇಶಿಯ ವಿಮಾನದಲ್ಲಿ ನಿರ್ಗಮಿಸುವ ಪ್ರಯಾಣಿಕರಿಗೆ 550 ಶುಲ್ಕ ರೂ. ವಿಧಿಸಲಾಗುತ್ತಿತ್ತು. ಇನ್ನು ಮುಂದೆ ಅದು 300 ರೂ. ಆಗಿರುತ್ತದೆ ಮತ್ತು 125 ರೂ. ಸೇರಿಸಿ 425 ರೂ. ಗಳಾಗಲಿದೆ.
ಅದೇ ರೀತಿ ಅಂತರಾಷ್ಟ್ರೀಯ ವಿಮಾನದಲ್ಲಿ ನಿರ್ಗಮಿಸುವ ಪ್ರಯಾಣಿಕರಿಗೆ ಈ ಹಿಂದೆ 1,500 ರೂ. ನಿಗದಿ ಮಾಡಲಾಗಿತ್ತು. ಅದು ಈಗ 1423 ರೂ.ಗೆ ಇಳಿಕೆಯಾಗಿದೆ. ದೇಶಿಯ ಪ್ರಯಾಣಿಕರಿಗೆ ಯುಡಿಎಫ್ ಪ್ರಮಾಣವನ್ನು 125 ರೂ. ವಿದೇಶದಿಂದ ಆಗಮಿಸುವ ಪ್ರಯಾಣಿಕರಿಗೆ 426 ರೂ. ಎಂದು ನಿಗದಿಪಡಿಸಲಾಗಿದ್ದು, ಸೆಪ್ಟೆಂಬರ್ 1ರಿಂದ ಹೊಸ ನಿಯಮ ಜಾರಿಯಾಗಲಿದೆ.

