ಚಿಕ್ಕಮಗಳೂರು: ಕೃಷಿ ಜಮೀನಿನ ಸರ್ವೆ ಕಾರ್ಯಕ್ಕೆ ₹10 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟು, ಮೊದಲ ಕಂತಿನ ₹2 ಲಕ್ಷ ಸ್ವೀಕರಿಸುತ್ತಿದ್ದ ವೇಳೆ ಚಿಕ್ಕಮಗಳೂರಿನ ಇಬ್ಬರು ಸರ್ವೇಯರ್‌ಗಳು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಚಿಕ್ಕಮಗಳೂರು ತಾಲೂಕಿನ ಸರ್ವೇಯರ್‌ಗಳಾದ ದೊರೆರಾಜ್ ಹಾಗೂ ರಂಗನಾಥ್ ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದವರು. ಚಿಕ್ಕಮಗಳೂರು ಹೊರವಲಯದ ಇಂದಾವರ ನಿವಾಸಿ ಧರಣೇಶ್ ಎಂಬುವವರ ಕೃಷಿ ಜಮೀನಿನ ಸರ್ವೆ ಕಾರ್ಯಕ್ಕಾಗಿ ಆರೋಪಿಗಳು ₹10 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.
ಇದರ ಮೊದಲ ಕಂತಾಗಿ ₹2 ಲಕ್ಷ ನೀಡುವಂತೆ ಕೇಳಿದ್ದು, ಕಚೇರಿಯಲ್ಲಿ ಹಣ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಇಬ್ಬರನ್ನೂ ರೆಡ್‌ಹ್ಯಾಂಡ್ ಆಗಿ ವಶಕ್ಕೆ ಪಡೆದಿದ್ದಾರೆ.
ಚಿಕ್ಕಮಗಳೂರು ಲೋಕಾಯುಕ್ತ ಡಿವೈಎಸ್‌ಪಿ ತಿರುಮಲೇಶ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ತನಿಖೆ ಮುಂದುವರಿದಿದೆ.

