ಯುಎಪಿಎ (UAPA) ಪ್ರಕರಣ: ಒಂದು ವರ್ಷದೊಳಗೆ ವಿಚಾರಣೆ ಪೂರ್ಣಗೊಳಿಸಲು ವಿಶೇಷ ನ್ಯಾಯಾಲಯಕ್ಕೆ ಸುಪ್ರೀಂ ಕೋರ್ಟ್ ಕಟ್ಟುನಿಟ್ಟಿನ ಸೂಚನೆ
ನವದೆಹಲಿ-ಸೈಬರ್ ಜಾಗವನ್ನು ದುರ್ಬಳಕೆ ಮಾಡಿಕೊಂಡು ‘ಐಸಿಸ್’ (ISIS) ನಂತಹ ನಿಷೇಧಿತ ಭಯೋತ್ಪಾದಕ ಸಂಘಟನೆಗಳ ಸಿದ್ಧಾಂತದತ್ತ ಯುವಕರನ್ನು ಪ್ರೇರೇಪಿಸಿದ ಹಾಗೂ ಭಯೋತ್ಪಾದಕ ಚಟುವಟಿಕೆಗಳಿಗೆ ಆರ್ಥಿಕ ನೆರವು ನೀಡಿದ ಗಂಭೀರ ಆರೋಪಕ್ಕೆ ಸಂಬಂಧಿಸಿದ ಯುಎಪಿಎ (UAPA) ಪ್ರಕರಣದ ವಿಚಾರಣೆಯನ್ನು ಒಂದು ವರ್ಷದೊಳಗೆ ಪೂರ್ಣಗೊಳಿಸುವಂತೆ ಸುಪ್ರೀಂ ಕೋರ್ಟ್ ದೆಹಲಿಯ ವಿಶೇಷ ನ್ಯಾಯಾಲಯಕ್ಕೆ ಸ್ಪಷ್ಟ ನಿರ್ದೇಶನ ನೀಡಿದೆ.
ಈ ಪ್ರಕರಣದಲ್ಲಿ ದೆಹಲಿ ಹೈಕೋರ್ಟ್ ಜಾಮೀನು ನಿರಾಕರಿಸಿರುವುದನ್ನು ಪ್ರಶ್ನಿಸಿ, ಪ್ರಮುಖ ಆರೋಪಿ ಮೊಹಮ್ಮದ್ ಹೆದಾಯತುಲ್ಲಾ ಸಲ್ಲಿಸಿದ್ದ ವಿಶೇಷ ಅನುಮತಿ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸಿತು. ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಹಾಗೂ ನ್ಯಾಯಮೂರ್ತಿಗಳಾದ ಜಾಯ್ಮಾಲ್ಯ ಬಾಗ್ಚಿ ಮತ್ತು ವಿ. ಮೋಹನಾ ಅವರನ್ನೊಳಗೊಂಡ ತ್ರಿ ಸದಸ್ಯ ಪೀಠ ಈ ಮಹತ್ವದ ಆದೇಶ ಹೊರಡಿಸಿದೆ.:
ಪ್ರಕರಣದ ಹಿನ್ನೆಲೆ ಮತ್ತು ಆರೋಪಗಳು
ಎಫ್‌ಐಆರ್ ದಾಖಲು: 2021ರಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಾಗಿತ್ತು.ಬಂಧನ: ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಅಧಿಕಾರಿಗಳು ಅಕ್ಟೋಬರ್ 2022ರಲ್ಲಿ ಮೊಹಮ್ಮದ್ ಹೆದಾಯತುಲ್ಲಾನನ್ನು ಬಂಧಿಸಿದ್ದರು.
ಸೈಬರ್ ಜಾಗ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ಐಸಿಸ್ ಉಗ್ರ ಸಂಘಟನೆಯ ಸಿದ್ಧಾಂತವನ್ನು ತೀವ್ರವಾಗಿ ಪ್ರಚಾರ ಮಾಡುವುದು.ಜಾಲತಾಣಗಳಲ್ಲಿ ನಿರ್ದಿಷ್ಟ ಸಮುದಾಯಗಳ ವಿರುದ್ಧ ದ್ವೇಷವನ್ನು ಬಿತ್ತುವ ಮೂಲಕ ಭಾರತ ಸರ್ಕಾರದ ವಿರುದ್ಧ ಅಶಾಂತಿ ಹಾಗೂ ದ್ವೇಷಭಾವನೆಯನ್ನು ಹರಡುವುದು.ತನ್ನ ಬ್ಯಾಂಕ್ ಖಾತೆಗಳ ಮೂಲಕ ಐಸಿಸ್ ಸಂಘಟನೆಗೆ ಹಣಕಾಸಿನ ನೆರವು ಹಾಗೂ ದೇಣಿಗೆಯನ್ನು ವರ್ಗಾಯಿಸಿರುವುದು.ವಶಪಡಿಸಿಕೊಳ್ಳಲಾದ ಎಲೆಕ್ಟ್ರಾನಿಕ್ ಸಾಧನಗಳಲ್ಲಿ ದೇಶವಿರೋಧಿ ಮತ್ತು ಆಕ್ಷೇಪಾರ್ಹ ಡಿಜಿಟಲ್ ಸಾಮಗ್ರಿಗಳು ಪತ್ತೆಯಾಗಿರುವುದು.
ದೆಹಲಿ ಹೈಕೋರ್ಟ್‌ನ ತೀರ್ಪು
ದೆಹಲಿ ಹೈಕೋರ್ಟ್ ತನ್ನ ತೀರ್ಪಿನಲ್ಲಿ, “ಅಪೀಲುದಾರನು 2018ರಲ್ಲಿ ಅಬು ಬಕರ್ ಅಲ್-ಬಾಗ್ದಾದಿ ಮತ್ತು ಅಬು ಅಲ್-ಹಸನ್ ಅಲ್-ಹಶಿಮಿ ಅಲ್-ಖುರೈಶಿ ಅವರ ಹೆಸರಿನಲ್ಲಿ ನಿಷ್ಠೆಯ ಪ್ರಮಾಣವಚನ (ಬಯತ್) ಸ್ವೀಕರಿಸಿದ್ದನು” ಎಂಬುದನ್ನು ಉಲ್ಲೇಖಿಸಿ, ಈ ಕೃತ್ಯದ ಗಂಭೀರತೆಯನ್ನು ಪರಿಗಣಿಸಿ ಜಾಮೀನು ಅರ್ಜಿ ವಜಾಗೊಳಿಸಿತ್ತು.
ಸುಪ್ರೀಂ ಕೋರ್ಟ್‌ನ ನಿರ್ದೇಶನಗಳು
ಮಂಗಳವಾರ ನಡೆದ ವಿಚಾರಣೆಯ ಸಂದರ್ಭದಲ್ಲಿ ಪ್ರಕರಣದ ನೈಜ ಸ್ಥಿತಿಗತಿಯನ್ನು ಪರಿಗಣಿಸಲಾಯಿತು. ಒಟ್ಟು 12 ಮಂದಿ ಆರೋಪಿಗಳಿದ್ದು, ನಾಲ್ವರು ತಲೆಮರೆಸಿಕೊಂಡಿದ್ದಾರೆ. ಉಳಿದ 8 ಮಂದಿ ಆರೋಪಿಗಳ ವಿರುದ್ಧ ಈಗಾಗಲೇ ಎನ್‌ಐಎ (NIA) ದೋಷಾರೋಪಪಟ್ಟಿ (Chargesheet) ಸಲ್ಲಿಸಿದೆ. ಈ ಪ್ರಕರಣದಲ್ಲಿ ಒಟ್ಟು 14 ಮಂದಿ ಸಂರಕ್ಷಿತ ಸಾಕ್ಷಿಗಳಿದ್ದು, ಪ್ರಮುಖ ಸಾಕ್ಷಿಗಳ ವಿಚಾರಣೆಯನ್ನು ಆರು ತಿಂಗಳೊಳಗೆ ಮುಗಿಸಬೇಕು. ಇಡೀ ಪ್ರಕರಣದ ವಿಚಾರಣೆಯನ್ನು ಕಟ್ಟುನಿಟ್ಟಾಗಿ ಒಂದು ವರ್ಷದೊಳಗೆ ಪೂರ್ಣಗೊಳಿಸಬೇಕು.
ವಿಳಂಬ ಧೋರಣೆಗೆ ಅವಕಾಶವಿಲ್ಲದಂತೆ, ಅಗತ್ಯಬಿದ್ದರೆ ವಿಶೇಷ ನ್ಯಾಯಾಲಯವು ದಿನನಿತ್ಯದ ಆಧಾರದ ಮೇಲೆ (Day-to-day basis) ವಿಚಾರಣೆ ನಡೆಸಬಹುದು ಎಂದು ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ.
ಕಳೆದ ನಾಲ್ಕು ವರ್ಷಗಳಿಂದ ಸೆರೆವಾಸದಲ್ಲಿದ್ದು ಜಾಮೀನು ಕೋರಿರುವ ಅರ್ಜಿದಾರರ ಪರ ವಕೀಲರ ವಾದ ಹಾಗೂ ಎನ್‌ಐಎ ಪರ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭಾಟಿ ಅವರ ವಾದಗಳನ್ನು ಆಲಿಸಿದ ಬಳಿಕ ಸುಪ್ರೀಂ ಕೋರ್ಟ್ ತ್ವರಿತ ವಿಚಾರಣೆಗೆ ಈ ಸೂಚನೆ ನೀಡಿದೆ.

