ಕರ್ನಾಟಕ ರಾಜ್ಯ ಮಾರುಕಟ್ಟೆ ಸಂವಹನ ಮತ್ತು ಜಾಹೀರಾತು ಲಿಮಿಟೆಡ್ (KSMCA) ವತಿಯಿಂದ ರಾಜ್ಯದ ಎರಡು ಗ್ರಾಮಗಳನ್ನು ಸ್ಮಾರ್ಟ್ ವಿಲೇಜ್ ಆಗಿ ಅಭಿವೃದ್ಧಿ ಮಾಡಲಾಗುತ್ತದೆ. ಈ ಯೋಜನೆಗೆ ಪ್ರಾಯೋಗಿಕವಾಗಿ ಉತ್ತರ ಕನ್ನಡ ಜಿಲ್ಲೆಯ ಎರಡು ಗ್ರಾಮಗಳನ್ನ ಆಯ್ಕೆ ಮಾಡಲಾಗಿದೆ.
ಈ ಕುರಿತು ಕಾರವಾರ ಶಾಸಕ, ಕೆಎಸ್‌ಎಂಸಿಎ ಅಧ್ಯಕ್ಷ ಸತೀಶ ಸೈಲ್ ಮಾಹಿತಿ ನೀಡಿದ್ದಾರೆ. “ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಬೇಳೂರು ಹಾಗೂ ಅಂಕೋಲಾ ತಾಲೂಕಿನ ಬೆಳಸೆ ಗ್ರಾಮಗಳನ್ನು ಸ್ಮಾರ್ಟ್ ವಿಲೇಜ್‌ಗಳನ್ನಾಗಿ ಅಭಿವೃದ್ಧಿಪಡಿಸುವ ಪ್ರಾಯೋಗಿಕ ಕಾರ್ಯಕ್ರಮವನ್ನು ಆರಂಭಿಸಲಾಗುವುದು” ಎಂದು ತಿಳಿಸಿದ್ದಾರೆ.
“ಈ ಯೋಜನೆಯು ಗ್ರಾಮೀಣ ಪ್ರದೇಶಗಳಲ್ಲಿ ಸ್ಥಳೀಯ ಉದ್ಯಮಶೀಲತೆಯನ್ನು ಉತ್ತೇಜಿಸುವುದು, ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು ಹಾಗೂ ಗ್ರಾಮೀಣ ಉತ್ಪನ್ನಗಳಿಗೆ ಸಂಘಟಿತ ಮಾರುಕಟ್ಟೆ ಪ್ರವೇಶವನ್ನು ಒದಗಿಸುವುದರ ಮೂಲಕ ಗ್ರಾಮಗಳನ್ನು ಆರ್ಥಿಕವಾಗಿ ಸ್ವಾವಲಂಬಿಗಳಾಗಿಸುವ ಉದ್ದೇಶ ಹೊಂದಿದೆ” ಎಂದು ಶಾಸಕರು ಹೇಳಿದರು.
ಈ ಕಾರ್ಯಕ್ರಮದ ಅಡಿಯಲ್ಲಿ ಕೃಷಿ ಮತ್ತು ಸಹಾಯಕ ಚಟುವಟಿಕೆಗಳು, ಮೀನುಗಾರಿಕೆ, ಪಾರಂಪರಿಕ ಉತ್ಪನ್ನಗಳು, ಕರಕುಶಲ ವಸ್ತುಗಳು ಹಾಗೂ ಮಹಿಳಾ ಸ್ವಸಹಾಯ ಸಂಘಗಳ ಆಧಾರಿತ ಉದ್ಯಮಗಳನ್ನು ಗುರುತಿಸಿ ಬೆಂಬಲ ನೀಡಲಾಗುವುದು.
ಮಹಿಳೆಯರು ಮತ್ತು ಯುವಕರ ಸಬಲೀಕರಣ ಹಾಗೂ ಸ್ಥಳೀಯ ಮಟ್ಟದಲ್ಲಿ ಉದ್ಯೋಗ ಸೃಷ್ಟಿವುದು ಈ ಕಾರ್ಯಕ್ರಮದ ಪ್ರಮುಖ ಗುರಿಯಾಗಿವೆ. ಈ ಯೋಜನೆಗೆ SAMPATTI ಕಾರ್ಯಕ್ರಮದ ಅಡಿಯಲ್ಲಿ ತರಬೇತಿ, ಮಾರ್ಗದರ್ಶನ, ಬ್ರಾಂಡಿಂಗ್, ಪ್ಯಾಕೇಜಿಂಗ್ ಮತ್ತು ಮಾರುಕಟ್ಟೆ ಸಂರ್ಪಕದ ಸಮಗ್ರ ಬೆಂಬಲ ಒದಗಿಸಲಾಗುತ್ತದೆ.
12 ವಾರಗಳ ಅವಧಿಯಲ್ಲಿ ಈ ಯೋಜನೆಯಡಿ ಮೂಲ ಸಮೀಕ್ಷೆ, ಉದ್ಯಮ ಗುರುತಿಸುವುದು, ಸಾಮರ್ಥ್ಯ ವೃದ್ದಿ, ಡಿಜಿಟಲ್ ಸಬಲೀಕರಣ ಹಾಗೂ ಜಿಲ್ಲಾ ರಾಜ್ಯ ಮಟ್ಟದ ಮಾರುಕಟ್ಟೆಗಳಿಗೆ ಸಂರ್ಪಕ ಕಲ್ಪಿಸಲಾಗುತ್ತದೆ.
ಯೋಜನೆಯನ್ನು ಗ್ರಾಮ ಪಂಚಾಯತಿಗಳು ಹಾಗೂ ಸಂಬಂಧಿತ ಇಲಾಖೆಗಳ ಸಮನ್ವಯ ಸಾಧಿಸಿ ಅನುಷ್ಠಾನಗೊಳಿಸಲಾಗುತ್ತದೆ. ಬೇಳೂರು ಮತ್ತು ಬೆಳಸೆ ಗ್ರಾಮಗಳಲ್ಲಿ ಜಾರಿಗೆ ಬರುತ್ತಿರುವ ಈ ಸ್ಮಾರ್ಟ್ ವಿಲೇಜ್ ಪೈಲಟ್ ಕಾರ್ಯಕ್ರಮವು ಉತ್ತರ ಕನ್ನಡ ಜಿಲ್ಲೆ ಹಾಗೂ ರಾಜ್ಯದ ಇತರ ಗ್ರಾಮಗಳಿಗೆ ಮಾದರಿಯಾಗಿ ವಿಸ್ತರಿಸಬಹುದಾದ ಯೋಜನೆಯಾಗಲಿದೆ.
ಈ ಯೋಜನೆಯಿಂದ 30-50 ಗ್ರಾಮ ಮಟ್ಟದ ಸ್ಥಿರ ಉದ್ಯಮಗಳು ಮತ್ತು ಕುಟುಂಬ ಆದಾಯದಲ್ಲಿ ಹೆಚ್ಚಳ ಹಾಗೂ ಗ್ರಾಮದಿಂದ ಮಾರುಕಟ್ಟೆಗೂ ಬಲವಾದ ಸಂರ್ಪಕ ಸಾಧಿಸುವ ನಿರೀಕ್ಷೆಯಿದೆ.

