ಬೆಂಗಳೂರು: ಅಕ್ರಮವಾಗಿ ಪಿಸ್ತೂಲ್ ಹೊಂದಿದ್ದ ಇಬ್ಬರು ಕುಖ್ಯಾತ ರೌಡಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬನ್ನೇರುಘಟ್ಟ ನಿವಾಸಿ ನಾಗೇಂದ್ರ ಮತ್ತು ಮೈಸೂರಿನ ಸುಹೇಲ್ ಖಾನ್ ಬಂಧಿತರು. ಆರೋಪಿಗಳಿಂದ ಎರಡು ಪಿಸ್ತೂಲ್, 3 ಜೀವಂತ ಗುಂಡು ಜಪ್ತಿ ಮಾಡಲಾಗಿದೆ.
ಕಾನೂನುಬಾಹಿರವಾಗಿ ಪಿಸ್ತೂಲ್ ಹೊಂದಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಬನ್ನೇರುಘಟ್ಟ ರಸ್ತೆಯ ನಾಗೇಂದ್ರ ಮನೆ ಮೇಲೆ ದಾಳಿ ನಡೆಸಿದ್ದು, ಪಿಸ್ತೂಲ್ ಹಾಗೂ ಗುಂಡುಗಳು ಪತ್ತೆಯಾಗಿವೆ. ನಾಗೇಂದ್ರ ವಿರುದ್ಧ ಕೊಲೆ, ದರೋಡೆ ಸೇರಿದಂತೆ ಇತರೆ ಪ್ರಕರಣ ದಾಖಲಾಗಿವೆ. ಕ್ರಿಮಿನಲ್ ಚಟುವಟಿಕೆ ಹಿನ್ನೆಲೆಯಲ್ಲಿ ಆತನ ವಿರುದ್ಧ ಎಚ್ಎಎಲ್ ಠಾಣೆಯಲ್ಲಿ ರೌಡಿ ಶೀಟ್ ತೆರೆಯಲಾಗಿದೆ. ಕಾಡುಬೀಸನಹಳ್ಳಿ ರೋಹಿತ್ ನ ಸಹಚರನಾಗಿ ಈತ ಗುರುತಿಸಿಕೊಂಡಿದ್ದ.
ಮೈಸೂರಿನಲ್ಲಿ ಅಕ್ರಮ ಕೃತ್ಯಗಳಲ್ಲಿ ಸುಹೇಲ್ ಖಾನ್ ಭಾಗಿಯಾಗಿದ್ದು, ಉದಯಗಿರಿ ಠಾಣೆಯಲ್ಲಿ ರೌಡಿ ಪಟ್ಟಿಯಲ್ಲಿದ್ದಾನೆ. ಸ್ನೇಹಿತನ ಮೂಲಕ ನಾಗೇಂದ್ರನಿಗೆ ಸುಹೇಲ್ ಪರಿಚಯವಾಗಿದೆ. ನಂತರ ಇಬ್ಬರಲ್ಲಿ ಆತ್ಮೀಯತೆ ಬೆಳೆದಿದ್ದು, ಜೀವ ಭೀತಿ ಇರುವುದರಿಂದ ಪಿಸ್ತೂಲ್ ತರಿಸಿ ಕೊಡುವಂತೆ ನಾಗೇಂದ್ರ ಹೇಳಿದ್ದ. ಈ ಮಾತಿಗೆ ಒಪ್ಪಿದ ಆತ ತನ್ನ ಸಂಪರ್ಕ ಬಳಸಿ ಗುಜರಾತ್ ನ ಅಹ್ಮದಾಬಾದ್ ನಿಂದ ಪಿಸ್ತೂಲ್ ತರಿಸಿ ಕೊಟ್ಟಿದ್ದ. ಈ ಬಗ್ಗೆ ಖಚಿತ ಮಾಹಿತಿ ಪಡೆದು ಸಿಸಿಬಿಯಿಂದ ಕಾರ್ಯಾಚರಣೆ ನಡೆಸಲಾಗಿದ್ದು, ಪಿಸ್ತೂಲ್ ಗಳು ಹಾಗೂ ಜೀವಂತ ಗುಂಡುಗಳನ್ನು ಜಪ್ತಿ ಮಾಡಲಾಗಿದೆ.

