ದಾವಣಗೆರೆ: ನಕಲಿ ದಾಖಲೆ ನೀಡಿ ಬ್ಯಾಂಕುಗಳಲ್ಲಿ ಖಾತೆಗಳನ್ನು ತೆರೆದು ಸೈಬರ್ ವಂಚಕರಿಗೆ ಸಹಕರಿಸುತ್ತಿದ್ದ ಆರೋಪದ ಮೇರೆಗೆ ಎಂಜಿನಿಯರಿಂಗ್ ವಿದ್ಯಾರ್ಥಿ ಸೇರಿ ಇಬ್ಬರು ಆರೋಪಿಗಳನ್ನು ದಾವಣಗೆರೆ ಸೈಬರ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ದಾವಣಗೆರೆಯ ಪರಶುರಾಮ್(30) ಮತ್ತು 19 ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿಯನ್ನು ಬಂಧಿಸಲಾಗಿದ್ದು, ಬಂಧಿತರಿಂದ ಲ್ಯಾಪ್ಟಾಪ್ ಮತ್ತು ಎರಡು ಮೊಬೈಲ್ ಫೋನ್ ಜಪ್ತಿ ಮಾಡಲಾಗಿದೆ. ನಕಲಿ ಖಾತೆಗಳ ಕುರಿತಂತೆ ಪೊಲೀಸರು ತನಿಖೆ ನಡೆಸಿದಾಗ ಸೈಬರ್ ವಂಚನೆ ಜಾಲ ಪತ್ತೆಯಾಗಿದೆ. ಸೈಬರ್ ವಂಚನೆಯ ಹಣವನ್ನು ವರ್ಗಾವಣೆ ಮಾಡುವ ಉದ್ದೇಶದಿಂದ ಆರೋಪಿಗಳು ಈ ಖಾತೆಗಳನ್ನು ಬಳಸುತ್ತಿದ್ದರು. ದೇಶದ ವಿವಿಧಡೆ ಕೋಟ್ಯಂತರ ರೂಪಾಯಿ ವಂಚನೆ ಮಾಡಿರುವುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ.
ಪರಶುರಾಮ್ ಸುಳ್ಳು ಮಾಹಿತಿ ನೀಡಿ ಆರು ಕಡೆ ಬ್ಯಾಂಕ್ ಖಾತೆ ತೆರೆದಿದ್ದಾನೆ. ಈ ಮೂಲಕ ನಡೆದಿದ್ದ ವಂಚನೆಯ ವಿರುದ್ಧ ದೇಶದ ವಿವಿಧ ಠಾಣೆಗಳಲ್ಲಿ 95 ಪ್ರಕರಣ ದಾಖಲಾಗಿವೆ. ಎಂಜಿನಿಯರಿಂಗ್ ವಿದ್ಯಾರ್ಥಿ ಎರಡು ಬ್ಯಾಂಕ್ ಖಾತೆ ಹೊಂದಿದ್ದು 8 ಪ್ರಕರಣಗಳಲ್ಲಿ ಶಾಮೀಲಾಗಿದ್ದಾನೆ ಎನ್ನುವುದು ಗೊತ್ತಾಗಿದೆ.

