ಮೈಸೂರು: ಅಪಘಾತದಲ್ಲಿ ಗಾಯಗೊಂಡು ಬಿದ್ದಿದ್ದ ವ್ಯಕ್ತಿಯಿಂದ 80 ಸಾವಿರ ರೂ. ದೋಚಿದ್ದ ಇಬ್ಬರನ್ನು ಮೈಸೂರು ಪೊಲೀಸರು ಬಂಧಿಸಿದ್ದಾರೆ.
ರಮೇಶ ಮತ್ತು ಮನು ಬಂಧಿತ ಆರೋಪಿಗಳು. ಮೈಸೂರು ತಾಲೂಕಿನ ಕಡಕೋಳದ ಬಳಿ ಡಿಸೆಂಬರ್ 19 ರಂದು ಗಣೇಶ ಎಂಬುವರು ಅಪಘಾತದಲ್ಲಿ ಗಾಯಗೊಂಡು ಬಿದ್ದಿದ್ದರು. ಫ್ಯಾಕ್ಟರಿಯಲ್ಲಿ ಕೆಲಸ ಮುಗಿಸಿ ಮಧ್ಯರಾತ್ರಿ ಮನೆಗೆ ಬರುವಾಗ ಅಪಘಾತವಾಗಿತ್ತು. ಅವರನ್ನು ಆಸ್ಪತ್ರೆಗೆ ಸೇರಿಸುವ ನೆಪದಲ್ಲಿ ಬಂದಿದ್ದ ರಮೇಶ ಮತ್ತು ಮನು ಅವರು ಗಣೇಶ ಮೊಬೈಲ್ ಪಡೆದುಕೊಂಡು ಯುಪಿಐ ಮೂಲಕ 80 ಸಾವಿರ ರೂ. ಹಣ ವರ್ಗಾವಣೆ ಮಾಡಿಕೊಂಡು ಆಸ್ಪತ್ರೆಗೆ ಸೇರಿಸದೆ ಪರಾರಿಯಾಗಿದ್ದಾರೆ.
ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಗಣೇಶ ಅವರ ಸಹೋದರ ಆಸ್ಪತ್ರೆಗೆ ದಾಖಲಿಸಿ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಹಣ ವರ್ಗಾವಣೆ ಬಗ್ಗೆ ತನಿಖೆ ಕೈಗೊಂಡ ಪೊಲೀಸರು ಮೈಸೂರು ಮಹದೇವಪುರ ನಿವಾಸಿಗಳಾದ ರಮೇಶ ಮತ್ತು ಮನು ಅವರನ್ನು ಬಂಧಿಸಿದ್ದಾರೆ. ಬಂಧಿತರಿಂದ 80 ಸಾವಿರ ರೂ. ಮತ್ತು 2 ಮೊಬೈಲ್ ವಶಕ್ಕೆ ಪಡೆಯಲಾಗಿದೆ.

