ತುಮಕೂರು: ಸ್ನೇಹಿತರೊಂದಿಗೆ ಕೆರೆ ನೀರಿನಲ್ಲಿ ಆಟವಾಡಲು ಹೋಗಿ ದ್ವಿತೀಯ ಪಿಯುಸಿ ವಿದ್ಯಾರ್ಥಿ ನೀರುಪಾಲಾಗಿರುವ ಘಟನೆ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಬಳಿಯ ದೇವರಮರಡಿ ಕೆರೆಯಲ್ಲಿ ನಡೆದಿದೆ.
ಗೌತಮ್ ಮೃತ ವಿದ್ಯಾರ್ಥಿ. ಮಜುರೆ ಗಿಲ್ಯಾನಾಯಕನ ತಾಂಡಾ ನಿವಾಸಿ. ಗೌತಮ್ ನಿನ್ನೆ ಸಂಜೆ ಸಹೋದರ ಹಾಗೂ ಸ್ನೇಹಿತರೊಂದಿಗೆ ಕೆರೆ ಬಳಿ ಹೋಗಿದ್ದ. ಈ ವೇಳೆ ಕೆರೆ ನೀರಿನಲ್ಲಿ ಆಟವಾಡುತ್ತಾ, ಕೆರೆಯಲ್ಲಿ ತೇಲುತ್ತಿದ್ದ ತೆಪ್ಪವನ್ನು ಹತ್ತಿದ್ದ. ತೇಲುತ್ತಿದ್ದ ತೆಪ್ಪದ ಮೇಲೆ ಸಂಭ್ರಮಿಸುತ್ತಿದ್ದಾಗ ಏಕಾಏಕಿ ತೆಪ್ಪ ಮಗುಚಿ ಬಿದ್ದಿದೆ.
ಪರಿಣಾಮ ಕೆರೆ ನೀರಿನಲ್ಲಿ ಮುಳುಗಿದ್ದಾನೆ. ಎಷ್ಟೇ ಹುಡುಕಾಟ ನಡೆಸಿದರೂ ಗೌತಮ್ ಪತ್ತೆಯಾಗಿರಲಿಲ್ಲ. ಇಂದು ಗೌತಮ್ ಮೃತದೇಹ ಕೆರೆಯಲ್ಲಿ ಪತ್ತೆಯಾಗಿದ್ದು, ಅಗ್ನಿಶಾಮಕ ಸಿಬ್ಬಂದಿ ಮೃತದೇಹವನ್ನು ಹೊರತೆಗೆದಿದ್ದಾರೆ. ಹುಳಿಯಾರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

