ತುಮಕೂರು: ನಿವೃತ್ತ ಹಾಗೂ ಮರಣ ಹೊಂದಿದ ಸರ್ಕಾರಿ ನೌಕರರ ಹೆಸರನ್ನು ದುರುಪಯೋಗಪಡಿಸಿಕೊಂಡು 4.24 ಕೋಟಿ ರೂ. ಅಕ್ರಮವೆಸಗಿರುವ ಆರೋಪ ಕೇಳಿಬಂದಿದ್ದು, ದ್ವಿತೀಯ ದರ್ಜೆ ಸಹಾಯಕಿಯನ್ನು ಅಮಾನತುಗೊಳಿಸಲಾಗಿದೆ.
ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕು ಪಂಚಾಯಿತಿಯಲ್ಲಿ ಈ ಘಟನೆ ನಡೆದಿದೆ. ಕಳೆದ ಐದು ವರ್ಷಗಳಿಂದ ನಕಲಿ ಖಾತೆಗಳ ಮೂಲಕ ಹಣ ವರ್ಗಾವಣೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಮಧುಗಿರಿ ತಾಲ್ಲೂಕು ಪಂಚಾಯಿತಿಯಲ್ಲಿ ದ್ವಿತೀಯ ದರ್ಜೆ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದ ಸೌಮ್ಯ ಅಮಾನತುಗೊಂಡವರು.
ಪಂಚಾಯಿತಿ ವ್ಯಾಪ್ತಿಯ ನಿವೃತ್ತಿ ಮತ್ತು ಮರಣ ಹೊಂದಿದ ನೌಕರರ ಗಳಿಕೆ ರಜೆ ನಗದೀಕರಣ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂಬ ಅನುಮಾನ ಮೊದಲಿಗೆ ಮೂಡಿತ್ತು. ಬಳಿಕ ಬೆಂಗಳೂರಿನ ಕೇಂದ್ರ ಕಚೇರಿಯಿಂದ ನಡೆದ ಆಡಿಟ್ ವೇಳೆ ದಾಖಲೆಗಳಲ್ಲಿ ವ್ಯತ್ಯಾಸ ಪತ್ತೆಯಾಯಿತು. ಈ ಮಾಹಿತಿ ತುಮಕೂರು ಜಿಲ್ಲಾ ಪಂಚಾಯಿತಿ ಸಿಇಒ ಅಶ್ವಿಜಾ ಅವರಿಗೆ ತಲುಪಿದ ನಂತರ ಸಮಗ್ರ ಪರಿಶೀಲನೆ ಕೈಗೊಳ್ಳಲಾಯಿತು.
ತನಿಖೆಯಲ್ಲಿ ನೌಕರರ ರೆಸಿಪಿಯಂಟ್ ಐಡಿ ಮತ್ತು ಹಣ ವರ್ಗಾವಣೆಯಾಗಿರುವ ಬ್ಯಾಂಕ್ ಖಾತೆದಾರರ ಹೆಸರಿನಲ್ಲಿ ವ್ಯತ್ಯಾಸ ಕಂಡುಬಂದಿದೆ. ಒಟ್ಟು 21 ನೌಕರರ ಹೆಸರಿನಲ್ಲಿ ನಕಲಿ ಖಾತೆಗಳನ್ನು ಸೃಷ್ಟಿಸಿ, 18 ನಿವೃತ್ತ ಹಾಗೂ 3 ಮರಣ ಹೊಂದಿದ ನೌಕರರ ಹೆಸರನ್ನು ಬಳಸಿಕೊಂಡು ಅಕ್ರಮ ನಡೆದಿದೆ ಎಂಬುದು ಬಹಿರಂಗವಾಗಿದೆ.
ಕಳೆದ ಐದು ವರ್ಷಗಳಲ್ಲಿ 29 ಬ್ಯಾಂಕ್ ಖಾತೆಗಳ ಮೂಲಕ 118 ವ್ಯವಹಾರಗಳ ಮೂಲಕ ಸುಮಾರು 4.24 ಕೋಟಿ ರೂಪಾಯಿ ಸೌಮ್ಯ ಮತ್ತು ಆಕೆಯ ಕುಟುಂಬದ ಐದು ಸದಸ್ಯರಿಗೆ ವರ್ಗಾವಣೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಣವನ್ನು ಹಂತ ಹಂತವಾಗಿ ವರ್ಗಾಯಿಸಿ ಅಂತಿಮವಾಗಿ ಕುಟುಂಬದ ಖಾತೆಗಳಿಗೆ ಸೇರಿಸಲಾಗಿದೆ.
ಮಧುಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣದಲ್ಲಿ ಇತರ ಅಧಿಕಾರಗಳ ಕೈವಾಡ ಇರುವ ಶಂಕೆ ಇದ್ದು, ತನಿಖೆ ಮುಂದುವರೆದಿದೆ.

