ಬೆಂಗಳೂರು: ರಾಜ್ಯ ಸಾರಿಗೆ ನೌಕರರು ಸರ್ಕಾರದ ವಿರುದ್ಧ ಸೆಡ್ಡು ಹೊಡೆದಿದ್ದು, ಮತ್ತೆ ಪ್ರತಿಭಟನೆ, ಹೋರಾಟಕ್ಕೆ ಮುಂದಾಗಿದ್ದಾರೆ. 38 ತಿಂಗಳ ವೇತನ ಹಿಂಬಾಕಿ ಹಾಗೂ 2024ರ ಜನವರಿಯಿಂದ ವೇತನ ಪರಿಷ್ಕರಣೆಗೆ ಆಗ್ರಹಿಸಿ ಮತ್ತೆ ಹೋರಾಟಕ್ಕೆ ನಿರ್ಧರಿಸಿದ್ದಾರೆ.
ಸರ್ಕಾರವು 26 ತಿಂಗಳ ಹಿಂಬಾಕಿ ಮತ್ತು 2025 ಏಪ್ರಿಲ್ನಿಂದ ಪರಿಷ್ಕರಣೆಗೆ ಒಪ್ಪಿದ್ದರೂ, ನೌಕರರು ಇದನ್ನು ತಿರಸ್ಕರಿಸಿದ್ದಾರೆ. ಏಪ್ರಿಲ್ 8ರಿಂದ ಚಿತ್ರದುರ್ಗದಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ವರೆಗೆ ಪಾದಯಾತ್ರೆ ನಡೆಸಿ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದಾರೆ.
ರಾಜ್ಯ ಸರ್ಕಾರ ಸಾರಿಗೆ ನೌಕರರಿಗೆ ನೀಡಬೇಕಿದ್ದ 38 ವೇತನ ಹಿಂಬಾಕಿ 2024ರಿಂದ ಆಗಬೇಕಿದ್ದ, ಹೊಸ ವೇತನ ಒಪ್ಪಂದಕ್ಕಾಗಿ ಆಗ್ರಹಿಸಿ ಹೋರಾಟಕ್ಕೆ ಮುಂದಾಗಿದ್ದರು. ಆದರೆ ರಾಜ್ಯ ಸರ್ಕಾರ 38 ತಿಂಗಳು ವೇತನ ಹಿಂಬಾಕಿ ಬದಲಿಗೆ 26 ತಿಂಗಳು ವೇತನ ಹಿಂಬಾಕಿ, 2024 ಜನವರಿ ಬದಲಿಗೆ 2025ರ ಏಪ್ರಿಲ್ನಿಂದ ಹೊಸ ವೇತನ ಒಪ್ಪಂದ ಮಾಡುವುದಾಗಿ ಈಗಾಗಲೇ ಆದೇಶ ಮಾಡಿದೆ. ಆದರೆ ಇದಕ್ಕೆ ಒಪ್ಪದ ಸಾರಿಗೆ ನೌಕರರ ಒಕ್ಕೂಟ ಯಾವುದೇ ಕಾರಣಕ್ಕೂ ಸರ್ಕಾರದ ಆದೇಶವನ್ನು ನಾವು ಒಪ್ಪುವುದಿಲ್ಲ. ಏಪ್ರಿಲ್ 8ರಿಂದ ಚಿತ್ರದುರ್ಗದಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ವರೆಗೆ ಪಾದಯಾತ್ರೆ ಮಾಡುತ್ತೇವೆ ಎಂದು ಸಾರಿಗೆ ನೌಕರರ ಒಕ್ಕೂಟ ಅಧ್ಯಕ್ಷ ಚಂದ್ರಶೇಖರ್ ಹೇಳಿದ್ದಾರೆ.
ಸಾರಿಗೆ ನೌಕರರ ಒಕ್ಕೂಟ 38 ತಿಂಗಳ ವೇತನ ಹಿಂಬಾಕಿ ಮತ್ತು 2024 ಜನವರಿಯಿಂದಲೇ ವೇತನ ಹೆಚ್ಚಳ ಮಾಡಬೇಕೆಂದು ಪಟ್ಟುಹಿಡಿದಿದ್ದಾರೆ. ಈಗಾಗಲೇ ರಾಜ್ಯ ಸರ್ಕಾರ 38 ತಿಂಗಳ ವೇತನ ಹಿಂಬಾಕಿಯಲ್ಲಿ 26 ತಿಂಗಳ ವೇತನ ಹಿಂಬಾಕಿ 1272 ಕೋಟಿ ರೂ ನೀಡುತ್ತಿದೆ. 2024 ಜನವರಿಯಿಂದ ಆಗಬೇಕಿದ್ದ ಹೊಸ ವೇತನ ಒಪ್ಪಂದವನ್ನು 2025 ಏಪ್ರಿಲ್ನಿಂದ ಮಾಡಲು ಮುಂದಾಗಿದೆ.
ಸರ್ಕಾರದ ಈ ನಿರ್ಧಾರಕ್ಕೆ ಒಪ್ಪದ ಕೆಎಸ್ಆರ್ಟಿಸಿ, ಬಿಎಂಟಿಸಿ ಸೇರಿದಂತೆ ನಾಲ್ಕು ನಿಗಮದ ನೌಕರರು 38 ತಿಂಗಳ ವೇತನ ಹಿಂಬಾಕಿ 1970 ಕೋಟಿ ರೂ ಬಿಡುಗಡೆ ಮಾಡಲೇಬೇಕು ಮತ್ತು 2024 ಜನವರಿಯಿಂದಲೇ ಹೊಸ ವೇತನ ಒಪ್ಪಂದ ಮಾಡಬೇಕೆಂದು ಪಟ್ಟುಹಿಡಿದಿದ್ದಾರೆ. ಈ ನಿಟ್ಟಿನಲ್ಲಿ ಫ್ರೀಡಂ ಪಾರ್ಕ್ಗೆ ಬಂದು, ಅಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಂತರ ಮುಷ್ಕರಕ್ಕೆ ಹೋಗಬೇಕೆಂದು ಸಾರಿಗೆ ನೌಕರರ ಮುಖಂಡರು ಸಿದ್ಧತೆ ಮಾಡಿಕೊಂಡಿದ್ದಾರೆ. ಅಂದು ಬಸ್ ಸಂಚಾರದಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ.

