ಬೆಂಗಳೂರು: 5 ವರ್ಷಕ್ಕಿಂತ ಮೇಲ್ಪಟ್ಟು ಒಂದೇ ಸ್ಥಳದಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ನೌಕರರ ವರ್ಗಾವಣೆ ಬಗ್ಗೆ ಸರ್ಕಾರ ಗಂಭೀರ ಪರಿಶೀಲನೆ ನಡೆಸುತ್ತಿದೆ.
ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರಿಂದ ಈ ಬಗ್ಗೆ ಸ್ವೀಕೃತವಾಗಿರುವ ವಿವಿಧ ಇಲಾಖೆಗಳ ನೌಕರರ ಮಾಹಿತಿ ಪ್ರತಿ ಆಧರಿಸಿ ಟಿಪ್ಪಣಿಯೊಂದನ್ನು ಹೊರಡಿಸಲಾಗಿದೆ. ವರ್ಗಾವಣೆ ಅವಧಿಯಲ್ಲಿ ಅಗತ್ಯ ಬದಲಾವಣೆ ಮಾಡುವ ಬಗ್ಗೆ ಪರಿಶೀಲಿಸಲು ಸಂಪೂರ್ಣ ಮಾಹಿತಿಯನ್ನು ಎಲ್ಲಾ ಕಾರ್ಯದರ್ಶಿಗಳೊಂದಿಗೆ ಹಂಚಿಕೊಳ್ಳುವಂತೆ ಮುಖ್ಯ ಕಾರ್ಯದರ್ಶಿ ಸೂಚನೆ ನೀಡಿದ್ದಾರೆ.
5 ವರ್ಷಕ್ಕಿಂತ ಹೆಚ್ಚಿನ ಅವಧಿಗೆ ಒಂದೇ ಸ್ಥಳದಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೌಕರರ ಸಂಖ್ಯೆಯ ಮಾಹಿತಿಯನ್ನು ಇಲಾಖಾ ಕಾರ್ಯದರ್ಶಿ ಗಮನಕ್ಕೆ ತರಲಾಗುತ್ತಿದೆ. 2026- 27ನೇ ಸಾಲಿನ ಸರ್ಕಾರಿ ನೌಕರರ ವರ್ಗಾವಣೆಗಳಿಗೆ ಸಂಬಂಧಿಸಿದಂತೆ ಮಾರ್ಗಸೂಚಿ ಈಗಾಗಲೇ ಹೊರಡಿಸಲಾಗಿದೆ. ವರ್ಗಾವಣೆ ಉದ್ದೇಶಕ್ಕೆ ಈಗಾಗಲೇ ಪ್ರತ್ಯೇಕ ಅಧಿನಿಯಮ ಅಥವಾ ನಿಯಮಗಳನ್ನು ಅಳವಡಿಸಿಕೊಂಡಿರುವ ಇಲಾಖೆಗಳ ನೌಕರರಿಗೆ ಈ ಮಾರ್ಗಸೂಚಿಗಳು ಅನ್ವಯವಾಗುವುದಿಲ್ಲ. ಆದರೆ, ಸರ್ಕಾರಿ ನೌಕರರು ಒಂದು ಸ್ಥಳದಲ್ಲಿ ಇರಬಹುದು. ಕನಿಷ್ಠ ಅವಧಿ ನಿಗದಿಪಡಿಸಲಾಗಿದ್ದು, ಅಂತೆಯೇ ಸೂಕ್ತ ಕ್ರಮ ಕೈಗೊಳ್ಳುವಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಸೂಚನೆ ನೀಡಿದೆ.
ಸಾರ್ವತ್ರಿಕ ವರ್ಗಾವಣೆ ಅವಧಿ ಜೂ. 30ರವರೆಗೆ ವಿಸ್ತರಿಸಿ ಆದೇಶ
ಸಾರ್ವತ್ರಿಕ ವರ್ಗಾವಣೆ ಅವಧಿ ಜೂ. 30ರವರೆಗೆ ವಿಸ್ತರಿಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯಿಂದ ಆದೇಶ ಹೊರಡಿಸಲಾಗಿದೆ.
ರಾಜ್ಯ ಸರ್ಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆಯನ್ನು 2026-27ನೇ ಸಾಲಿನಲ್ಲಿ ಕೈಗೊಳ್ಳುವ ಸಂಬಂಧ ಮೇಲೆ ಓದಲಾದಂತೆ ದಿನಾಂಕ:13.04.2026ರಂದು ಹೊರಡಿಸಿರುವ ಸರ್ಕಾರಿ ಆದೇಶದಲ್ಲಿ ನೀಡಿರುವ ಮಾರ್ಗಸೂಚಿಗಳಲ್ಲಿನ ಕೆಲವೊಂದು ಷರತ್ತು ಮತ್ತು ನಿರ್ಬಂಧಗಳಿಗೊಳಪಟ್ಟು ದಿನಾಂಕ: 15.04.2026 ರಿಂದ 31.05.2026 ರವರೆಗೆ, ವರ್ಗಾವಣೆ ಕೈಗೊಳ್ಳಲು ಅವಧಿಯನ್ನು ನಿಗದಿಪಡಿಸಲಾಗಿದ್ದು, ಪ್ರಸ್ತುತ ಸದರಿ ಅವಧಿಯು ಮುಕ್ತಾಯಗೊಂಡಿರುವುದರಿಂದ, ಸಾರ್ವತ್ರಿಕ ವರ್ಗಾವಣೆ ಅವಧಿಯನ್ನು ವಿಸ್ತರಿಸುವುದು ಅವಶ್ಯಕವೆಂದು ಸರ್ಕಾರವು ಪರಿಗಣಿಸಿ, ಈ ಕೆಳಕಂಡಂತೆ ಆದೇಶಿಸಿದೆ.
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆಯನ್ನು 2026-27 ಸಾಲಿನಲ್ಲಿ ಕೈಗೊಳ್ಳುವ ಸಂಬಂಧ ದಿನಾಂಕ:13.04.2026ರಂದು ಹೊರಡಿಸಿರುವ ಸರ್ಕಾರಿ ಆದೇಶದಲ್ಲಿ ನೀಡಿರುವ ಮಾರ್ಗಸೂಚಿಗಳಲ್ಲಿನ ಷರತ್ತು ಮತ್ತು ನಿರ್ಬಂಧಗಳಿಗೊಳಪಟ್ಟು ವರ್ಗಾವಣೆ ಕೈಗೊಳ್ಳಲು, ದಿನಾಂಕ: 30.06.2026ರವರೆಗೆ ವಿಸ್ತರಿಸಿ ಸಾರ್ವತ್ರಿಕ ವರ್ಗಾವಣೆ ಅವಧಿಯನ್ನು ಆದೇಶಿಸಿದೆ.

