ಡಿಜಿಟಲ್ ಯುಗದಲ್ಲಿ ನಾವು ಪ್ರತಿಯೊಂದಕ್ಕೂ ಮೊಬೈಲ್ ಫೋನ್ ಅವಲಂಬಿಸಿದ್ದೇವೆ. ಆದರೆ, ಇತ್ತೀಚೆಗೆ ಹೆಚ್ಚಾಗುತ್ತಿರುವ ತಾಂತ್ರಿಕ ವಂಚನೆ ಮತ್ತು ನಕಲಿ ಟಿಕೆಟ್ ಹಾವಳಿಯನ್ನು ತಡೆಗಟ್ಟಲು ಭಾರತೀಯ ರೈಲ್ವೆ ತನ್ನ ನಿಯಮಗಳಲ್ಲಿ ಮಹತ್ವದ ತಿದ್ದುಪಡಿ ತಂದಿದೆ.
ನಿಯಮ ಬದಲಾಗಲು ಕಾರಣವೇನು? ಇತ್ತೀಚೆಗೆ ಜೈಪುರ ಮಾರ್ಗದಲ್ಲಿ ನಡೆದ ಒಂದು ಆಘಾತಕಾರಿ ಘಟನೆ ರೈಲ್ವೆ ಇಲಾಖೆಯನ್ನು ಎಚ್ಚರಿಸಿದೆ. ತಪಾಸಣೆಯ ವೇಳೆ ಕೆಲವು ವಿದ್ಯಾರ್ಥಿಗಳು ಮೊಬೈಲ್‌ನಲ್ಲಿ ಟಿಕೆಟ್ ತೋರಿಸಿದ್ದರು. ಅದು ನೋಡಲು ಅಸಲಿ ಟಿಕೆಟ್‌ನಂತೆಯೇ ಇತ್ತು, ಕ್ಯೂಆರ್ ಕೋಡ್ ಕೂಡ ಇತ್ತು. ಆದರೆ ಸೂಕ್ಷ್ಮವಾಗಿ ಪರಿಶೀಲಿಸಿದಾಗ, ಕೃತಕ ಬುದ್ಧಿಮತ್ತೆ (AI) ಉಪಕರಣ ಬಳಸಿ ಕೇವಲ ಒಬ್ಬರ ಟಿಕೆಟ್‌ನಲ್ಲಿ ಏಳು ಜನರ ಹೆಸರನ್ನು ಸೇರಿಸಿ ಎಡಿಟ್ ಮಾಡಿರುವುದು ಪತ್ತೆಯಾಗಿತ್ತು. ಇಂತಹ ವಂಚನೆಗಳನ್ನು ತಡೆಯಲು ರೈಲ್ವೆ ಇಲಾಖೆ ಈಗ ಕಠಿಣ ಕ್ರಮಕ್ಕೆ ಮುಂದಾಗಿದೆ.
ಹೊಸ ನಿಯಮ ಏನು ಹೇಳುತ್ತದೆ?
- ಅನ್ ರಿಸರ್ವ್ಡ್ (Unreserved) ಟಿಕೆಟ್: ಯುಟಿಎಸ್ (UTS) ಆ್ಯಪ್, ಎಟಿವಿಎಂ (ATVM) ಯಂತ್ರಗಳು ಅಥವಾ ರೈಲ್ವೆ ಕೌಂಟರ್‌ಗಳಲ್ಲಿ ಖರೀದಿಸಿದ ಅನ್ ರಿಸರ್ವ್ಡ್ ಟಿಕೆಟ್‌ಗಳನ್ನು ಕೇವಲ ಮೊಬೈಲ್ ಸ್ಕ್ರೀನ್ ಮೇಲೆ ತೋರಿಸಿದರೆ ಅದನ್ನು ಮಾನ್ಯ ಮಾಡಲಾಗುವುದಿಲ್ಲ. ಅಂತಹ ಪ್ರಯಾಣಿಕರು ಕಡ್ಡಾಯವಾಗಿ ಟಿಕೆಟ್‌ನ ಪ್ರಿಂಟ್ ಔಟ್ (Hard Copy) ಹೊಂದಿರಬೇಕು.
- ರಿಸರ್ವ್ಡ್ (Reserved) ಟಿಕೆಟ್: ಇ-ಟಿಕೆಟ್ ಮತ್ತು ಎಂ-ಟಿಕೆಟ್ ಮೂಲಕ ಕಾಯ್ದಿರಿಸಿದ ಸೀಟುಗಳ ಪ್ರಯಾಣಕ್ಕೆ ಈ ನಿಯಮ ಅನ್ವಯಿಸುವುದಿಲ್ಲ. ಅವುಗಳನ್ನು ಮೊದಲಿನಂತೆಯೇ ಮೊಬೈಲ್‌ನಲ್ಲಿ ತೋರಿಸಬಹುದು.
ಕಠಿಣ ತಪಾಸಣೆ ಮತ್ತು ದಂಡ: ಈಗಾಗಲೇ ಎಲ್ಲಾ ರೈಲ್ವೆ ವಿಭಾಗಗಳಿಗೆ ಎಚ್ಚರಿಕೆ ನೀಡಲಾಗಿದ್ದು, ಟಿಕೆಟ್ ಪರೀಕ್ಷಕರಿಗೆ (TTE) ವಿಶೇಷ ಆ್ಯಪ್ ನೀಡಲಾಗಿದೆ. ಇದು ಕ್ಯೂಆರ್ ಕೋಡ್ ಮತ್ತು ಕಲರ್ ಕೋಡ್‌ಗಳನ್ನು ತಕ್ಷಣವೇ ಸ್ಕ್ಯಾನ್ ಮಾಡಿ ಅಸಲಿ ಅಥವಾ ನಕಲಿ ಎಂಬುದನ್ನು ಪತ್ತೆಹಚ್ಚುತ್ತದೆ. ಒಂದು ವೇಳೆ ಅನ್ ರಿಸರ್ವ್ಡ್ ಟಿಕೆಟ್‌ನ ಹಾರ್ಡ್ ಕಾಪಿ ಇಲ್ಲದಿದ್ದರೆ, ಅದನ್ನು ಟಿಕೆಟ್ ರಹಿತ ಪ್ರಯಾಣ ಎಂದು ಪರಿಗಣಿಸಿ ದಂಡ ವಿಧಿಸಲಾಗುತ್ತದೆ.

