ಇದೇ ತಿಂಗಳ 26ರಂದು ರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ ಚಿತ್ರ ವಿಶ್ವದಾದ್ಯಂತ ಬಿಡುಗಡೆಯಾಗಲಿದ್ದು, ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಚಿತ್ರದ ಮುಂಗಡ ಬುಕಿಂಗ್ ಈಗಾಗಲೇ ತೆರೆದಿದ್ದು, ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಹೀಗೆ ಆನ್‌ಲೈನ್‌ನಲ್ಲಿ ಚಿತ್ರದ ಅಡ್ವಾನ್ಸ್ ಬುಕಿಂಗ್ ತೆರೆದಿದ್ದೇ ಚಿತ್ರಕ್ಕೆ ದೊಡ್ಡ ಪ್ರಚಾರವಾಗಿದ್ದು, ಆಫ್‌ಲೈನ್‌ನಲ್ಲಿ ಚಿತ್ರತಂಡ ವಿವಿಧ ಕಾರ್ಯಕ್ರಮಗಳು ಹಾಗೂ ಸಂದರ್ಶನಗಳಲ್ಲಿ ಪಾಲ್ಗೊಂಡು ಚಿತ್ರದ ಪ್ರಚಾರ ಕಾರ್ಯಗಳನ್ನು ಮಾಡುತ್ತಿದೆ.
ಹಾಗೆಯೇ ನಿನ್ನೆ ( ಆಗಸ್ಟ್ 22 ) ಹೈದರಾಬಾದ್‌ನ ಮಲ್ಲಾರೆಡ್ಡಿ ಯೂನಿವರ್ಸಿಟಿ ಕಾಲೇಜಿನಲ್ಲಿ ಟಾಕ್ಸಿಕ್ ಚಿತ್ರತಂಡ ಪ್ರಿ ರಿಲೀಸ್ ಕಾರ್ಯಕ್ರಮವನ್ನು ಆಯೋಜಿಸಿ ಅಲ್ಲಿ ಭಾಗವಹಿಸಿತ್ತು. ಇನ್ನು ಈ ಕಾರ್ಯಕ್ರಮಕ್ಕೆ ನಿರೀಕ್ಷೆಗೂ ಮೀರಿದ ಜನಸಾಗರ ಹರಿದುಬಂದು ಯಶಸ್ವಿಯಾಗಿತ್ತು.
ತೆಲುಗಿನ ಯಾವುದೇ ನಟರನ್ನು ಮುಖ್ಯ ಅತಿಥಿಯನ್ನಾಗಿ ಆಹ್ವಾನಿಸದೇ ಈ ಮಟ್ಟಿಗಿನ ಜನ ಸೇರುವಂತೆ ಮಾಡಿದ್ದು ಅಲ್ಲಿ ಯಶ್‌ಗೆ ಇರುವ ಸ್ಟಾರ್‌ಡಂ ಅನ್ನು ಎತ್ತಿಹಿಡಿದಿತ್ತು. ಇಷ್ಟರ ಮಟ್ಟಿಗೆ ಯಶಸ್ವಿಯಾದ ಟಾಕ್ಸಿಕ್ ಪ್ರಿ ರಿಲೀಸ್ ಇವೆಂಟ್‌ನಲ್ಲಿ ಅನಾಹುತವೊಂದು ನಡೆದಿದ್ದು, ಸೌಂಡ್ ಸೆಟಪ್ ಬಾಕ್ಸ್ ಬಿದ್ದ ಕಾರಣ ಇಬ್ಬರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.
ಗಾಯಗೊಂಡವರ ಪೈಕಿ ಓರ್ವ ವಿದ್ಯಾರ್ಥಿನಿ ಆ ಸಮಯಕ್ಕೆ ಪ್ರಜ್ಞೆ ಕಳೆದುಕೊಂಡಿದ್ದು, ಕೂಡಲೇ ಸ್ಥಳದಲ್ಲಿದ್ದ ಪೊಲೀಸರು ಹಾಗೂ ಸಾರ್ವಜನಿಕರು ಅವರನ್ನು ಆಂಬುಲೆನ್ಸ್ ಮೂಲಕ ಹತ್ತಿರದ ಆಸ್ಪತ್ರೆಗೆ ರವಾನಿಸಿದ್ದು, ಈ ಕುರಿತು ಮುಂದಿನ ಮಾಹಿತಿ ಇನ್ನೂ ಲಭ್ಯವಾಗಬೇಕಿದೆ.
ಇನ್ನು ಈ ಸೌಂಡ್ ಬಾಕ್ಸ್ ಬಿದ್ದಿದ್ದನ್ನು ವೇದಿಕೆ ಮೇಲೆ ಮಾತನಾಡುತ್ತಾ ನಿಂತಿದ್ದ ಯಶ್ ಗಮನಿಸಿದ್ದು, ಈ ವೇಳೆ ‘ಏಯ್ ಕೇರ್‌ಫುಲ್’ ಎಂದು ಜೋರಾಗಿ ಕಿರುಚಿದ್ದಾರೆ. ಅಲ್ಲದೇ ಏನಾದರೂ ಅನಾಹುತವಾಯಿತಾ ಎಂದು ಪ್ರಶ್ನಿಸಿದ್ದಾರೆ.
ಈ ಘಟನೆಯ ವಿಡಿಯೊಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಶಿಕ್ಷಣ ಸಂಸ್ಥೆಗಳಲ್ಲಿ ಸಿನಿಮಾ ಪ್ರಚಾರ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲು ಬಿಡಬಾರದು ಎಂದು ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ. ಏನಾದರೂ ಹೆಚ್ಚು ಕಡಿಮೆಯಾದರೆ ಯಾರು ಹೊಣೆ ಎಂದು ಪ್ರಶ್ನೆ ಹಾಕಿದ್ದಾರೆ.

