ನವದೆಹಲಿ: ಇಂದಿನ ಆಧುನಿಕ ಯುಗದಲ್ಲಿ ಅಣುಶಕ್ತಿ ಅತ್ಯಂತ ಪ್ರಮುಖ ಇಂಧನ ಮೂಲವಾಗಿ ಹೊರಹೊಮ್ಮುತ್ತಿದೆ. ಕೇವಲ ಒಂದು ಕೆಜಿ ಯುರೇನಿಯಂ ಸುಮಾರು 88 ಟನ್ ಕಲ್ಲಿದ್ದಲಿಗೆ ಸಮಾನವಾದ ಶಕ್ತಿಯನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ ಎಂದರೆ ಅದರ ಶಕ್ತಿ ಎಂತದ್ದು ಎಂಬುದು ತಿಳಿಯುತ್ತದೆ. ವಿಶ್ವಸಂಸ್ಥೆಯ ಅಣುಶಕ್ತಿ ಸಂಸ್ಥೆ ಮತ್ತು ಜಾಗತಿಕ ವರದಿಗಳ ಪ್ರಕಾರ, ಪ್ರಸ್ತುತ ವಿಶ್ವದಲ್ಲಿ ಯುರೇನಿಯಂ ನಿಕ್ಷೇಪ ಹೊಂದಿರುವ ಪ್ರಮುಖ ಹತ್ತು ರಾಷ್ಟ್ರಗಳ ಮಾಹಿತಿ ಇಲ್ಲಿದೆ.
ಆಸ್ಟ್ರೇಲಿಯಾ ಮೊದಲ ಸ್ಥಾನದಲ್ಲಿ: ವಿಶ್ವದಲ್ಲೇ ಅತಿ ಹೆಚ್ಚು ಯುರೇನಿಯಂ ಹೊಂದಿರುವ ದೇಶ ಆಸ್ಟ್ರೇಲಿಯಾ. ಇಲ್ಲಿ ಸುಮಾರು 16.7 ಲಕ್ಷ ಟನ್ ಸಂಗ್ರಹವಿದ್ದು, ಇದು ಜಗತ್ತಿನ ಒಟ್ಟು ನಿಕ್ಷೇಪದ ಶೇ 28 ರಷ್ಟಾಗುತ್ತದೆ. ಆಶ್ಚರ್ಯದ ಸಂಗತಿ ಎಂದರೆ, ಇಷ್ಟೊಂದು ದೊಡ್ಡ ಪ್ರಮಾಣದ ಯುರೇನಿಯಂ ಹೊಂದಿದ್ದರೂ ಆಸ್ಟ್ರೇಲಿಯಾ ಸ್ವಂತ ಅಣುಶಕ್ತಿ ಕಾರ್ಯಕ್ರಮವನ್ನು ಹೊಂದಿಲ್ಲ.
ಏಷ್ಯಾದಲ್ಲಿ ಕಜಕಿಸ್ತಾನ್ ಅಗ್ರಗಣ್ಯ: ಯುರೇನಿಯಂ ಉತ್ಪಾದನೆಯಲ್ಲಿ ಕಜಕಿಸ್ತಾನ್ ಕಳೆದ ಹತ್ತು ವರ್ಷಗಳಿಂದ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿದೆ. ಸುಮಾರು 8.13 ಲಕ್ಷ ಟನ್ ನಿಕ್ಷೇಪ ಹೊಂದಿರುವ ಈ ದೇಶ, ಜಾಗತಿಕ ಮಟ್ಟದಲ್ಲಿ ಶೇ 14 ರಷ್ಟು ಪಾಲು ಹೊಂದಿದೆ. ಇದರ ನಂತರದ ಸ್ಥಾನದಲ್ಲಿ ಕೆನಡಾ ಇದ್ದು, ಇಲ್ಲಿನ ಅಥಬಾಸ್ಕಾ ಬೇಸಿನ್‌ನಲ್ಲಿ ವಿಶ್ವದ ಅತ್ಯುತ್ತಮ ಗುಣಮಟ್ಟದ ಯುರೇನಿಯಂ ದೊರೆಯುತ್ತದೆ.
ಆಫ್ರಿಕಾ ಮತ್ತು ರಷ್ಯಾ: ಆಫ್ರಿಕಾ ಖಂಡದಲ್ಲಿ ನಮೀಬಿಯಾ ಅತಿ ದೊಡ್ಡ ಯುರೇನಿಯಂ ನಿಕ್ಷೇಪ ಹೊಂದಿದ್ದು, ಜಾಗತಿಕವಾಗಿ ನಾಲ್ಕನೇ ಸ್ಥಾನದಲ್ಲಿದೆ. ರಷ್ಯಾ ಐದನೇ ಸ್ಥಾನದಲ್ಲಿದ್ದು, ತನ್ನ ದೇಶದ ಇಂಧನ ಅಗತ್ಯಗಳಿಗಾಗಿ ಈ ಸಂಪನ್ಮೂಲವನ್ನು ಬಳಸಿಕೊಳ್ಳುತ್ತಿದೆ. ನೈಜರ್ ಮತ್ತು ದಕ್ಷಿಣ ಆಫ್ರಿಕಾ ಕೂಡ ಪ್ರಮುಖ ರಾಷ್ಟ್ರಗಳ ಸಾಲಿನಲ್ಲಿವೆ. ವಿಶೇಷವಾಗಿ ದಕ್ಷಿಣ ಆಫ್ರಿಕಾದಲ್ಲಿ ಚಿನ್ನದ ಗಣಿಗಾರಿಕೆಯ ಉಪ ಉತ್ಪನ್ನವಾಗಿ ಯುರೇನಿಯಂ ಪಡೆಯಲಾಗುತ್ತದೆ.
ಚೀನಾ ಮತ್ತು ಇತರ ರಾಷ್ಟ್ರಗಳು: ಚೀನಾ ಎಂಟನೇ ಸ್ಥಾನದಲ್ಲಿದ್ದು, ತನ್ನ ಹೆಚ್ಚುತ್ತಿರುವ ಅಣುಶಕ್ತಿ ಬೇಡಿಕೆಗಾಗಿ ಬೇರೆ ದೇಶಗಳಿಂದಲೂ ಯುರೇನಿಯಂ ಆಮದು ಮಾಡಿಕೊಳ್ಳುತ್ತಿದೆ. ಬ್ರೆಜಿಲ್ ಮತ್ತು ಮಂಗೋಲಿಯಾ ನಂತರದ ಸ್ಥಾನಗಳಲ್ಲಿವೆ.
ಭಾರತದ ಸ್ಥಾನ ಎಲ್ಲಿದೆ? ವಿಶ್ವದ ಮೊದಲ ಹತ್ತು ರಾಷ್ಟ್ರಗಳ ಪಟ್ಟಿಯಲ್ಲಿ ಭಾರತದ ಹೆಸರು ನೇರವಾಗಿ ಬರದಿದ್ದರೂ, ಭಾರತದ ಬಳಿ ಗಣನೀಯ ಪ್ರಮಾಣದ ಯುರೇನಿಯಂ ನಿಕ್ಷೇಪವಿದೆ. ಆಂಧ್ರಪ್ರದೇಶದ ತುಮ್ಮಲಪಲ್ಲಿ ಮತ್ತು ಜಾರ್ಖಂಡ್‌ನ ಜಾದುಗುಡ ಪ್ರದೇಶಗಳಲ್ಲಿ ಭಾರತದ ಪ್ರಮುಖ ಯುರೇನಿಯಂ ಗಣಿಗಳಿವೆ. ಅಣುಶಕ್ತಿ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸಲು ಭಾರತ ನಿರಂತರವಾಗಿ ಈ ನಿಕ್ಷೇಪಗಳ ಶೋಧನೆ ನಡೆಸುತ್ತಿದೆ.

