ಹೈದರಾಬಾದ್: ನಟನೊಬ್ಬ ಮೋಸ ಮಾಡಿದ್ದಾನೆ ಎಂದು ಆರೋಪಿಸಿ ಪತ್ರ ಬರೆದಿಟ್ಟಿದ್ದ ಯುವಕ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.
ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆ, ಪೂತಲಪಟ್ಟು ಎಂಬಂಲ್ಲಿ ಈ ಘಟನೆ ನಡೆದಿದೆ. ಪೂತಲಪಟ್ಟು ಬಳಿಯ ಶೇಷಾಪುರಂನ ಲೋಕೇಶ್ ಎಂಬ ಯುವಕ ಆತ್ಮಹತ್ಯೆಗೆ ಯತ್ನಿದ್ದು ‘ಜೆಟ್ಟಿ’ ಸಿನಿಮಾ ಖ್ಯಾತಿಯ ನಟ ಮಾನ್ಯಂ ಮುರಳಿ ಕೃಷ್ಣ ತನ್ನ ಸ್ಥಿತಿಗೆ ಕಾರಣ ಎಂದು ಲೋಕೇಶ್ ಬಡೆತ್ ನೋಟ್ ನರೆದಿಟ್ಟಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಲೋಕೇಶ್ ಗೆ ನಟ ಮಾನ್ಯಂ ಮುರಳಿ ಕೃಷ್ಣ ರೈಲ್ವೇ ಕಾಂಟ್ರಾಕ್ಟ್ ಕೊಡಿಸುವುದಾಗಿ ನಂಬಿಸಿ ವಂಚಿಸಿದ್ದಾರಂತೆ. ತನ್ನ ಸಂಬಂಧಿಕರು ಮತ್ತು ಸ್ನೇಹಿತರ ಮೂಲಕ ಸುಮಾರು 3.15 ಕೋಟಿ ರೂಪಾಯಿಗಳನ್ನು ನಟನಿಗೆ ಕೊಡಿಸಿದ್ದಾಗಿ ಲೋಕೇಶ್ ತಿಳಿಸಿದ್ದಾರೆ. ಈಗ ಆ ಹಣವನ್ನು ವಾಪಸ್ ಕೇಳಿದರೆ ನಟ ಕಿರುಕುಳ ನೀಡುತ್ತಿದ್ದಾರೆ ಎಂದು ಮನನೊಂದು ಲೋಕೇಶ್ ನಿದ್ರೆ ಮಾತ್ರೆಗಳನ್ನು ನುಂಗಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಅರೆಪ್ರಜ್ಞಾವಸ್ಥೆಯಲ್ಲಿದ್ದ ಲೋಕೇಶ್ ಅವರನ್ನು ಚಿತ್ತೂರಿನ ಬಂಗಾರುಪಾಳ್ಯಂ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಗೆ ಸಂಬಂಧಿಸಿದ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಲೋಕೇಶ್ ಸಹ ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಪ್ರಾಣಾಪಾಯದಿಂದ ಅವರು ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಲೋಕೇಶ್ ಬರೆದಿರುವ ಆತ್ಮಹತ್ಯೆ ಪತ್ರ ಇದೀಗ ವೈರಲ್ ಆಗುತ್ತಿದೆ, ‘ನನಗೆ ಇಂತಹ ಪರಿಸ್ಥಿತಿ ಬರುತ್ತದೆ ಎಂದು ಕನಸಿನಲ್ಲೂ ಅಂದುಕೊಂಡಿರಲಿಲ್ಲ. ನನ್ನ ಪೋಷಕರು ಮತ್ತು ಹೆಂಡತಿ ಮಕ್ಕಳನ್ನು ಬೀದಿಗೆ ತಂದಿದ್ದೇನೆ. ಸಾಲಗಾರನಾಗಿ ತಲೆ ಎತ್ತಿ ಬದುಕಲು ಸಾಧ್ಯವಾಗುತ್ತಿಲ್ಲ. ನನ್ನ ಸಾವಿಗೆ ನಟ ಮಾನ್ಯಂ ಮುರಳಿ ಕೃಷ್ಣನೇ ಕಾರಣ. ರೈಲ್ವೇ ಕಾಂಟ್ರಾಕ್ಟ್ ಕೊಡಿಸುತ್ತೇನೆ ಎಂದು ಹೇಳಿ 3.15 ಕೋಟಿ ರೂಪಾಯಿ ಹಣ ಪಡೆದು ಮೋಸ ಮಾಡಿದ್ದಾನೆ. ಇದರಲ್ಲಿ ನನ್ನ ಅಣ್ಣ-ತಮ್ಮಂದಿರ ಮತ್ತು ಸಂಬಂಧಿಕರ ಹಣವೂ ಇದೆ. ಮುರಳಿ ಕೃಷ್ಣ ಮತ್ತು ಆತನ ತಮ್ಮ ಸೇರಿ ನಮ್ಮನ್ನು ವಂಚಿಸಿದ್ದಾರೆ. ಹಣ ಕೇಳಿದರೆ ಕೊಡುತ್ತಿಲ್ಲ. ಅಸಹಾಯಕನಾಗಿ ಈ ನಿರ್ಧಾರ ತೆಗೆದುಕೊಳ್ಳುತ್ತಿದ್ದೇನೆ, ದಯವಿಟ್ಟು ನನ್ನನ್ನು ಕ್ಷಮಿಸಿ’ ಎಂದು ಬರೆದಿದ್ದಾರೆ.
ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ. ನಟ ಮಾನ್ಯ ಮುರಳಿ ಕೃಷ್ಣಗೂ ನೊಟೀಸ್ ನೀಡುವ ಸಾಧ್ಯತೆ ಇದೆ. ಮಾನ್ಯ ಮುರಳಿ ಕೃಷ್ಣ ‘ಜೆಟ್ಟಿ’ ಹೆಸರಿನ ಸಿನಿಮಾನಲ್ಲಿ ನಟಿಸಿದ್ದು, ಹಲವು ಸಿನಿಮಾಗಳಿಗೆ ಸಹಾಯಕ ನಿರ್ದೇಶಕ, ಎಡಿಟರ್, ಸಹಾಯಕ ಎಡಿಟರ್ ಆಗಿ ಕೆಲಸ ಮಾಡಿದ್ದಾರೆ.

