ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕರ ಮೇಲಿನ ದಾಳಿ ಮುಂದುವರೆದಿದೆ. ಮತ್ತೋರ್ವ ಟಿಎಂಸಿ ಹಿರಿಯ ಶಾಸಕ ಮದನ್ ಮಿತ್ರ ಅವರ ವಾಹನದ ಮೇಲೆ ಪ್ರತಿಭಟನಾಕಾರರು ಮೊಟ್ಟೆ ಎಸೆದು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.
ಶನಿವಾರ ರಾತ್ರಿ ಕಮರ್ಹತಿಯ ಅರಿಯದಹ ಪ್ರದೇಶದಲ್ಲಿ ಪ್ರತಿಭಟನಾಕಾರರು ಮೊಟ್ಟೆ ಎಸೆದಿದ್ದಾರೆ. ಸ್ಥಳೀಯ ಆಟೋ ಮತ್ತು ಇ-ರಿಕ್ಷಾ ಚಾಲಕರು ವಾರ್ಡ್ ಸಂಖ್ಯೆ 14 ರ ಕೌನ್ಸಿಲರ್ ಕಚೇರಿ ಮುಂದೆ ಜಮಾಯಿಸಿ, ಕಳೆದ ಕೆಲವು ವರ್ಷಗಳಿಂದ ಬಲವಂತವಾಗಿ ವಸೂಲಿ ಮಾಡಲಾಗಿರುವ ಕಟ್ ಮನಿ (ಅಕ್ರಮ ಕಮಿಷನ್) ಹಣವನ್ನು ಮರಳಿ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಸ್ಥಳಕ್ಕೆ ಆಗಮಿಸಿದ ಶಾಸಕರ ವಾಹನವನ್ನು ಗುರಿಯಾಗಿಸಿ ಮೊಟ್ಟೆ ಎಸೆಯಲಾಗಿದೆ. ಇದೇ ವೇಳೆ ಚಾಲಕನ ಮೇಲೂ ಹಲ್ಲೆ ನಡೆಸಿದ್ದಾರೆ.
ಈ ದಾಳಿಯ ಹಿಂದೆ ಬಿಜೆಪಿ ಬೆಂಬಲಿತ ದುಷ್ಕರ್ಮಿಗಳ ಕೈವಾಡವಿದೆ ಎಂದು ಮದನ್ ಮಿತ್ರ ಆರೋಪಿಸಿದ್ದಾರೆ. ಮತ್ತೊಂದೆಡೆ ರಾಜ್ಯದಲ್ಲಿನ ರಾಜಕೀಯ ಬದಲಾವಣೆಯ ಬಳಿಕ ಸ್ಥಳೀಯರಲ್ಲಿ ಆಡಳಿತ ಪಕ್ಷದ ವಿರುದ್ಧ ಅಸಮಾಧಾನ ಸ್ಫೋಟಗೊಳ್ಳುತ್ತಿದೆ.

