ಬೆಂಗಳೂರು : ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆಗೆ ಬಿಗಿ ಭದ್ರತೆ ಕೈಗೊಳ್ಳಲಾಗಿದ್ದು, ಈ ಕುರಿತು ಸ್ವತಹ ಡಿಸಿಎಂ ಡಿಕೆ ಶಿವಕುಮಾರ್ ಮಾಹಿತಿ ನೀಡಿದ್ದಾರೆ. ಡಿಸಿಎಂ ಡಿಕೆಶಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
* ಸಾರ್ವಜನಿಕರ ಭದ್ರತೆಗಾಗಿ ನಗರದಾದ್ಯಂತ 20,000 ಪೊಲೀಸ್ ಸಿಬ್ಬಂದಿ ನಿಯೋಜನೆ
*ಮಹಿಳೆಯರ ಸುರಕ್ಷತೆಗಾಗಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳು
*ಜನಸಂದಣಿ ಮೇಲ್ವಿಚಾರಣೆಗಾಗಿ ರಿಯಲ್-ಟೈಮ್ ಹೀಟ್ ಮ್ಯಾಪ್ ತಂತ್ರಜ್ಞಾನ
*ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಇಂದಿರಾನಗರ, ಕೋರಮಂಗಲ ಮತ್ತು ಎಲೆಕ್ಟ್ರಾನಿಕ್ ಸಿಟಿ ಸೇರಿದಂತೆ ಹೆಚ್ಚಿನ ಜನಸಂದಣಿ ಇರುವ ಪ್ರದೇಶಗಳಲ್ಲಿ ವಿಶೇಷ ಗಮನ
*ತುರ್ತು ಸ್ಪಂದನಾ ತಂಡಗಳು, ಸಂಚಾರಿ ಪೊಲೀಸರು ಮತ್ತು ತುರ್ತು ಸೇವೆಗಳು ನಿರಂತರ ಜಾಗರೂಕತೆಯಲ್ಲಿರಲಿವೆ
ಡ್ರೋನ್ ಮತ್ತು ಸಿಸಿಟಿವಿ ಕಣ್ಣಾವಲು : ಪರಿಣಾಮಕಾರಿಯಾಗಿ ನಿಗಾ ಇರಿಸಲು ಸುಧಾರಿತ ಸಿಸಿಟಿವಿ ಮತ್ತು ಡೋನ್ ಕ್ಯಾಮೆರಾಗಳ ಬಳಕೆ
ಸಂಭ್ರಮಾಚರಣೆಯ ಪ್ರಮುಖ ಸ್ಥಳವಾಗಿರುವ ಎಂ.ಜಿ. ರಸ್ತೆ ಹಾಗೂ ಬ್ರಿಗೇಡ್ ರಸ್ತೆಗಳಲ್ಲಿ ಡಿಸೆಂಬರ್ 31ರ ರಾತ್ರಿ 8ರಿಂದ ತಡರಾತ್ರಿ 2 ಗಂಟೆವರೆಗೆ ಸಾರ್ವಜನಿಕ ವಾಹನಗಳ ಸಂಚಾರ ನಿಷೇಧಿಸಲಾಗಿದೆ. ಎಂ.ಜಿ. ರಸ್ತೆಯ ಅನಿಲ್ ಕುಂಬ್ಳೆ ವೃತ್ತದಿಂದ ಟ್ರಿನಿಟಿ ವೃತ್ತದವರೆಗೆ, ಬ್ರಿಗೇಡ್ ರಸ್ತೆಯಲ್ಲಿ ಕಾವೇರಿ ಎಂಪೋರಿಯಂ ಜಂಕ್ಷನ್ನಿಂದ ಅಪೇರಾ ಜಂಕ್ಷನ್ವರೆಗೆ, ಚರ್ಚ್ ಸ್ಟ್ರೀಟ್ನ ಬ್ರಿಗೇಡ್ ರಸ್ತೆ ಜಂಕ್ಷನ್ನಿಂದ ಮ್ಯೂಸಿಯಂ ರಸ್ತೆ ಜಂಕ್ಷನ್ವರೆಗೆ, ರೆಸಿಡೆನ್ಸಿ ರಸ್ತೆಯ ಆಶೀರ್ವಾದಮ್ ಜಂಕ್ಷನ್ನಿಂದ ಮೆಯೊ ಹಾಲ್ ಜಂಕ್ಷನ್ವರೆಗೆ, ಎಂ.ಜಿ. ರಸ್ತೆ ಜಂಕ್ಷನ್ನಿಂದ ಎಸ್ಬಿಐ ವೃತ್ತದವರೆಗೆ ಸಂಚಾರ ವ್ಯವಸ್ಥೆ ನಿಷೇಧಿಸಲಾಗಿದೆ.
ಮಹಿಳೆಯರ ಸುರಕ್ಷತೆ ಮತ್ತು ಜನಸಂದಣಿ ನಿಯಂತ್ರಣಕ್ಕೆ ಆದ್ಯತೆ
ವರ್ಷಾಚರಣೆಯ ವೇಳೆ ಮಹಿಳೆಯರ ಸುರಕ್ಷತೆ ಮತ್ತು ಜನಸಂದಣಿ ನಿಯಂತ್ರಣಕ್ಕೆ ಆದ್ಯತೆ ನೀಡಲಾಗುವುದು. ಸಾರ್ವಜನಿಕರ ಅನುಕೂಲಕ್ಕಾಗಿ ಸಾರಿಗೆ ಬಸ್ ಮತ್ತು ಟೆಂಪೊ ಟ್ರಾವೆಲ್ಗಳನ್ನು ಸೂಕ್ತ ಸ್ಥಳಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಮದ್ಯ ಕುಡಿದು ಸಾರ್ವಜನಿಕವಾಗಿ ಕಿರಿಕಿರಿ ಮಾಡುವುದು, ಗಲಾಟೆ ಅಥವಾ ಅಶಾಂತಿ ಸೃಷ್ಟಿಸಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಬೆಂಗಳೂರು ನಗರ ಪೊಲೀಸ್ ಕಮೀಷನರ್ ಸೀಮಾಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

